ಐಪಿಎಲ್ 2026ರ 57ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ನಿರಾಸೆ ಎದುರಾಗಿದೆ. ರಾಯ್ಪುರ್ನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಕೆಕೆಆರ್ ತಂಡ 6 ವಿಕೆಟ್ ಗಳ ಸೋಲು ಅನುಭವಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 20 ಓವರ್ಗಳಲ್ಲಿ 192 ರನ್ ಕಲೆಹಾಕಿ ಬಲಿಷ್ಠ ಮೊತ್ತ ದಾಖಲಿಸಿತ್ತು. ಆದರೆ ಆ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 19.1 ಓವರ್ಗಳಲ್ಲೇ ಬೆನ್ನಟ್ಟುವ ಮೂಲಕ ಭರ್ಜರಿ ಗೆಲುವು ಸಾಧಿಸಿತು. ಈ ಸೋಲಿನ ಬಳಿಕ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ತಂಡ ಮಾಡಿದ ಒಂದು ಪ್ರಮುಖ ತಪ್ಪಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ಅಜಿಂಕ್ಯ ರಹಾನೆ, “ಈ ಪಿಚ್ನಲ್ಲಿ 190 ರನ್ ಉತ್ತಮ ಸವಾಲಿನ ಮೊತ್ತವಾಗಿತ್ತು. ಆದರೆ ವಿರಾಟ್ ಕೊಹ್ಲಿ ಅವರ ಕ್ಯಾಚ್ ಕೈಬಿಟ್ಟದ್ದು ಪಂದ್ಯದ ಮೇಲೆ ದೊಡ್ಡ ಪರಿಣಾಮ ಬೀರಿತು” ಎಂದು ಹೇಳಿದ್ದಾರೆ. ಆರಂಭದ ಪವರ್ ಪ್ಲೇ ಓವರ್ಗಳಲ್ಲಿ ಹೊಸ ಚೆಂಡು ಬ್ಯಾಟ್ಗೆ ಚೆನ್ನಾಗಿ ಬರುತ್ತಿತ್ತು. ಆದರೆ ಮಧ್ಯಮ ಓವರ್ಗಳಲ್ಲಿ ಪಿಚ್ ನಿಧಾನಗತಿಯಾಗಿ ವರ್ತಿಸಿತು. ಹೊಸ ಬ್ಯಾಟರ್ಗಳಿಗೆ ರನ್ ಗಳಿಸುವುದು ಸುಲಭವಾಗಿರಲಿಲ್ಲ ಎಂದು ಅವರು ವಿವರಿಸಿದರು.
ಕೆಕೆಆರ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್’ಗಳು ಜವಾಬ್ದಾರಿಯುತ ಆಟವಾಡಿದ ಕಾರಣ ತಂಡ 192 ರನ್ ಗಳಿಸಲು ಸಾಧ್ಯವಾಯಿತು. ಪಂದ್ಯ ಮುಗಿದ ಬಳಿಕ ಇನ್ನೂ 10 ಅಥವಾ 15 ರನ್ ಹೆಚ್ಚು ಬೇಕಿತ್ತು ಎಂದು ಹೇಳುವುದು ಸುಲಭ. ಆದರೆ ಪಿಚ್ ಸ್ಥಿತಿಯನ್ನು ಗಮನಿಸಿದರೆ ಇದು ಅತ್ಯುತ್ತಮ ಮೊತ್ತವಾಗಿತ್ತು ಎಂದು ಅಜಿಂಕ್ಯ ರಹಾನೆ ತಮ್ಮ ಬ್ಯಾಟಿಂಗ್ ವಿಭಾಗವನ್ನು ಸಮರ್ಥಿಸಿಕೊಂಡರು.
ಇನ್ನು ಆರ್ಸಿಬಿ ತಂಡದ ಚೇಸಿಂಗ್ ವೇಳೆ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅದ್ಭುತ ಜೊತೆಯಾಟ ಕಟ್ಟಿದರು. ಇಬ್ಬರೂ ಆರಂಭದಲ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿ ನಂತರ ವೇಗ ಹೆಚ್ಚಿಸಿದರು. ಈ ಜೊತೆಯಾಟವೇ ಪಂದ್ಯವನ್ನು ಸಂಪೂರ್ಣವಾಗಿ ಆರ್ಸಿಬಿ ಪರ ತಿರುಗಿಸಿತು. ವಿಶೇಷವಾಗಿ ವಿರಾಟ್ ಕೊಹ್ಲಿ ಅನುಭವಯುತ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಪಂದ್ಯದ 9ನೇ ಓವರ್ನಲ್ಲಿ ರೋವ್ಮನ್ ಪೊವೆಲ್ ವಿರಾಟ್ ಕೊಹ್ಲಿ ಅವರ ಮಹತ್ವದ ಕ್ಯಾಚ್ ಕೈಚೆಲ್ಲಿದ್ದರು. ಆ ವೇಳೆ ವಿರಾಟ್ ಕೊಹ್ಲಿ ಕೇವಲ 21 ರನ್ ಗಳಿಸಿದ್ದರು. ಸಿಕ್ಕ ಜೀವದಾನವನ್ನು ಸಂಪೂರ್ಣವಾಗಿ ಬಳಸಿಕೊಂಡ ವಿರಾಟ್ ಕೊಹ್ಲಿ ಬಳಿಕ ಅಬ್ಬರದ ಬ್ಯಾಟಿಂಗ್ ನಡೆಸಿದರು. ಅಂತಿಮವಾಗಿ ಅವರು 60 ಎಸೆತಗಳಲ್ಲಿ ಅಜೇಯ 105 ರನ್ ಸಿಡಿಸಿ ಆರ್ಸಿಬಿ ಗೆಲುವಿನ ಹೀರೋ ಆದರು. ಟ್ರಿಕಿ ಪಿಚ್ನಲ್ಲಿ ವಿರಾಟ್ ಕೊಹ್ಲಿ ಅವರಂತಹ ಪ್ರಮುಖ ಬ್ಯಾಟರ್ಗಳ ಕ್ಯಾಚ್ ಕೈಬಿಟ್ಟರೆ ಪಂದ್ಯ ಉಳಿಸಿಕೊಳ್ಳುವುದು ಕಷ್ಟ ಎಂದು ರಹಾನೆ ಬೇಸರ ವ್ಯಕ್ತಪಡಿಸಿದರು.
ಕಳೆದ ನಾಲ್ಕು ಪಂದ್ಯಗಳಲ್ಲಿ ಕೆಕೆಆರ್ ತಂಡದ ಫೀಲ್ಡಿಂಗ್ ಅತ್ಯುತ್ತಮವಾಗಿತ್ತು. ಆದರೆ ಈ ಪಂದ್ಯದಲ್ಲಿ ಸಣ್ಣ ತಪ್ಪು ದೊಡ್ಡ ಪರಿಣಾಮ ಬೀರಿತು. ಬೌಲಿಂಗ್ ವಿಭಾಗದಲ್ಲೂ ಕೆಲ ಕ್ಷಣಗಳಲ್ಲಿ ಒತ್ತಡ ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೂ ತಂಡದ ಸ್ಪಿನ್ನರ್ಗಳು ಉತ್ತಮ ಪ್ರದರ್ಶನ ನೀಡಿದರು ಎಂದು ರಹಾನೆ ತಿಳಿಸಿದ್ದಾರೆ.
ಇದರ ನಡುವೆ ಯುವ ವೇಗಿ ಕಾರ್ತಿಕ್ ತ್ಯಾಗಿ ಅವರ ಪ್ರದರ್ಶನವನ್ನು ಅಜಿಂಕ್ಯ ರಹಾನೆ ಮೆಚ್ಚಿಕೊಂಡಿದ್ದಾರೆ. ಬೌಲಿಂಗ್ ವೇಳೆ ಕಾರ್ತಿಕ್ ತ್ಯಾಗಿ ಹೊಂದಿರುವ ಶಿಸ್ತು ಮತ್ತು ಸ್ಪಷ್ಟ ಯೋಜನೆ ತಂಡಕ್ಕೆ ಮುಂದಿನ ದಿನಗಳಲ್ಲಿ ದೊಡ್ಡ ಬಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಯುವ ಆಟಗಾರರು ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವುದು ಕೆಕೆಆರ್ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ ಎಂದು ಹೇಳಿದರು.
ಒಟ್ಟಾರೆಯಾಗಿ ಈ ಪಂದ್ಯ ಕೆಕೆಆರ್ ತಂಡಕ್ಕೆ ಹಲವು ಪಾಠಗಳನ್ನು ಕಲಿಸಿಕೊಟ್ಟಿದೆ. ಕಠಿಣ ಪಿಚ್’ನಲ್ಲೂ ಬ್ಯಾಟರ್’ಗಳು ಹೋರಾಟ ನಡೆಸಿದ್ದು ತಂಡದ ಬಲವನ್ನು ತೋರಿಸಿತು. ಆದರೆ ಫೀಲ್ಡಿಂಗ್ನಲ್ಲಿನ ಸಣ್ಣ ಲೋಪವೇ ಪಂದ್ಯ ಕೈತಪ್ಪಲು ಕಾರಣವಾಯಿತು. ಮುಂದಿನ ಪಂದ್ಯಗಳಲ್ಲಿ ಈ ತಪ್ಪುಗಳನ್ನು ಸರಿಪಡಿಸಿಕೊಂಡು ಬಲಿಷ್ಠವಾಗಿ ಮರಳುವ ವಿಶ್ವಾಸವನ್ನು ನಾಯಕ ಅಜಿಂಕ್ಯ ರಹಾನೆ ವ್ಯಕ್ತಪಡಿಸಿದ್ದಾರೆ.
















