ಮೈಸೂರು(Mysuru): ಆರ್ ಟಿಐ ಕಾಯ್ದೆ ಅಡಿ ಕೇಳಲಾದ ಮಾಹಿತಿಯನ್ನು ನೀಡಲು ವಿಳಂಬ ಧೋರಣೆ ಅನುಸರಿಸಿದ ಜಿಲ್ಲೆಯ ಹೊಸಹುಂಡಿ ಗ್ರಾಮಪಂಚಾಯಿತಿ ಕಾರ್ಯದರ್ಶಿಗೆ ಕರ್ನಾಟಕ ಮಾಹಿತಿ ಆಯೋಗ 5 ಸಾವಿರ ರೂ. ದಂಡವಿಧಿಸಿದೆ.
ಆರ್ ಟಿಐ ಕಾರ್ಯಕರ್ತ ರವೀಂದ್ರ ಅವರು ಹೊಸಹುಂಡಿ ಗ್ರಾಮಪಂಚಾಯಿತಿ ಕಚೇರಿಯ 15-3-2021 ರಿಂದ 16 -04-2021ರವರೆಗಿನ ಸಿಸಿ ಟಿವಿ ಫೂಟೇಜ್ ನ ವಿಡಿಯೋಗಳ ಮಾಹಿತಿಯನ್ನು ಸಿಡಿ ರೂಪದಲ್ಲಿ ನೀಡುವಂತೆ ಗ್ರಾಮಪಂಚಾಯಿತಿ ಕಾರ್ಯದರ್ಶಿ ಹಾಗೂ ಸಾವರ್ಜನಿಕ ಮಾಹಿತಿ ಅಧಿಕಾರಿ ವೆಂಕಟೇಶ್ ಅವರಿಗೆ ಮನವಿ ಮಾಡಿದ್ದರು.
ಆದರೆ ಸಾರ್ವಜನಿಕ ಮಾಹಿತಿ ಅಧಿಕಾರಿ ವೆಂಕಟೇಶ್ ಮಾಹಿತಿ ಒದಗಿಸದ ಹಿನ್ನೆಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಆರ್ ಟಿಐ ಕಾರ್ಯಕರ್ತ ರವೀಂದ್ರ, ಕರ್ನಾಟಕ ಮಾಹಿತಿ ಆಯೋಗಕ್ಕೆ ಅಪೀಲು ಹಾಕಿದ್ದರು.
ನಂತರ ವಿಚಾರಣೆ ನಡೆಸಿದ ಮಾಹಿತಿ ಆಯೋಗ, ಅರ್ಜಿದಾರರಿಗೆ 15 ದಿನಗಳೊಳಗಾಗಿ ಕೇಳಿರುವ ಮಾಹಿತಿಯನ್ನು ಉಚಿತವಾಗಿ ಒದಗಿಸಿ ಮುಂದಿನ ವಿಚಾರಣೆ ದಿನದಂದು ಖುದ್ದು ಹಾಜರಾಗಿ ಅರ್ಜಿದಾರರಿಗೆ ಮಾಹಿತಿ ಒದಗಿಸಿದ ಬಗ್ಗೆ ವಿವರಣೆ ಸಲ್ಲಿಸಬೇಕು ಎಂದು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ನಿರ್ದೇಶನ ನೀಡಿತ್ತು.
ಅಲ್ಲದೆ ಮಾಹಿತಿ ನೀಡಲು ವಿಳಂಬ ಮಾಡಿದ್ದಕ್ಕೆ ಏಕೆ ದಂಡ ವಿಧಿಸಬಾರದು ಎಂಬ ಬಗ್ಗೆ ಲಿಖಿತ ಸಮಾಜಾಯಿಷಿ ನೀಡಬೇಕೆಂದು ಹಿಂದಿನ ಸಾವರ್ಜನಿಕ ಮಾಹಿತಿ ಅಧಿಕಾರಿ ಹಾಗೂ ಹೊಸಹುಂಡಿ ಗ್ರಾಪಂ ಕಾರ್ಯದರ್ಶಿ ವೆಂಕಟೇಶ್ ಗೆ ಮಾಹಿತಿ ಆಯೋಗ ಸೂಚಿಸಿತ್ತು.
ಆದರೂ ಸಹ ಸೂಕ್ತ ಕಾರಣ ನೀಡದೆ ವಿಚಾರಣೆಗೆ ಗೈರು ಹಾಜರಾದ ಹಿನ್ನೆಲೆ ಹೊಸಹುಂಡಿ ಗ್ರಾಮಪಂಚಾಯತ್ ಕಾರ್ಯದರ್ಶಿ ವೆಂಕಟೇಶ್ ಅವರಿಗೆ 5 ಸಾವಿರ ರೂ ದಂಡವನ್ನು ರಾಜ್ಯ ಮಾಹಿತಿ ಆಯುಕ್ತ ಎಸ್.ಎಲ್ ಪಾಟೀಲ್ ವಿಧಿಸಿದ್ದಾರೆ.