ಮನೆ ಕಾನೂನು ಬಿಲ್ಕಿಸ್‌ ಬಾನೊ ಅತ್ಯಾಚಾರಿಗಳ ಬಿಡುಗಡೆ ಪ್ರಕರಣ: ಗುಜರಾತ್‌ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ ಸುಪ್ರೀಂ ಕೋರ್ಟ್‌

ಬಿಲ್ಕಿಸ್‌ ಬಾನೊ ಅತ್ಯಾಚಾರಿಗಳ ಬಿಡುಗಡೆ ಪ್ರಕರಣ: ಗುಜರಾತ್‌ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ ಸುಪ್ರೀಂ ಕೋರ್ಟ್‌

0

ಗುಜರಾತ್‌ ಕೋಮುಗಲಭೆ ವೇಳೆ ಬಿಲ್ಕಿಸ್‌ ಬಾನೊ ಅವರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಅವರ ಕುಟುಂಬದ ಸದಸ್ಯರನ್ನು ಕೊಂದ ಅಪರಾಧಿಗಳ ಶಿಕ್ಷೆಯನ್ನು ತಗ್ಗಿಸಿ, ಬಿಡುಗಡೆಗೊಳಿಸಿರುವ ರಾಜ್ಯ ಸರ್ಕಾರದ ನಡೆಯನ್ನು ಪ್ರಶ್ನಿಸಿರುವ ಮನವಿಯ ಸಂಬಂಧ ಗುಜರಾತ್‌ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಗುರುವಾರ ನೋಟಿಸ್‌ ಜಾರಿ ಮಾಡಿದ್ದು, ಪ್ರತಿಕ್ರಿಯಿಸಲು ಸೂಚಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಸಿಜೆಐ ಎನ್ವಿ ರಮಣ ನೇತೃತ್ವದ ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ವಿಕ್ರಮ್ನಾಥ್‌ ಅವರನ್ನು ಒಳಗೊಂಡ ಪೀಠವು ಪ್ರತಿಕ್ರಿಯೆ ಸಲ್ಲಿಸಲು ಗುಜರಾತ್ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸುವುದರ ಜೊತೆಗೆ ಶಿಕ್ಷೆಗೊಳಗಾಗಿದ್ದ ಹನ್ನೊಂದು ಮಂದಿಯನ್ನೂ ಪ್ರಕರಣದಲ್ಲಿ ಪಕ್ಷಕಾರರನ್ನಾಗಿಸಲು ಸೂಚಿಸಿತು.

ಬಿಡುಗಡೆಗೊಂಡ 11 ಅಪರಾಧಿಗಳ ಹೆಸರು ಹೀಗಿದೆ: ಜಸ್ವಂತ್ ನಾಯ್, ಗೋವಿಂದ್ ನಾಯ್, ಶೈಲೇಶ್ ಭಟ್, ರಾಧೇಶಾಮ್‌ ಶಾ, ಬಿಪಿನ್ ಚಂದ್ರ ಜೋಶಿ, ಕೇಸರಭಾಯಿ ವೋಹಾನಿಯಾ, ಪ್ರದೀಪ್ ಮೋರ್ಧಿಯಾ, ಬಕಾಭಾಯ್ ವೋಹಾನಿಯಾ, ರಾಜುಭಾಯ್ ಸೋನಿ, ಮಿತೇಶ್ ಭಟ್ ಮತ್ತು ರಮೇಶ್ ಚಂದನಾ.

ವಿಚಾರಣೆಯ ವೇಳೆ ನ್ಯಾಯಾಲಯವು ಗುಜರಾತ್‌ ನಿಯಮಾವಳಿಗಳ ಅಡಿಯಲ್ಲಿ ಅಪರಾಧಿಗಳು ಶಿಕ್ಷೆ ಕಡಿಮೆಗೊಳಿಸಲು ಅರ್ಹರೇ ಹಾಗೂ ಶಿಕ್ಷೆಯನ್ನು ಕಡಿಮೆ ಮಾಡುವ ವೇಳೆ ವಿವೇಚನೆಯನ್ನು ಬಳಸಲಾಗಿದೆಯೇ ಎನ್ನುವ ಬಗ್ಗೆ ತಾನು ಪರಿಶೀಲಿಸಬೇಕಾಗುತ್ತದೆ ಎಂದಿತು.

ಈ ವೇಳೆ ಪ್ರತಿಕ್ರಿಯಿಸಿದ, ಅರ್ಜಿದಾರರ ಪರ ವಕೀಲರಾದ ಕಪಿಲ್ ಸಿಬಲ್‌, “ನಾವು ಸಹ ಸೂಕ್ತ ವಿವೇಚನೆಯನ್ನು ಬಳಸಲಾಗಿದೆಯೇ ಎನ್ನುವುದನ್ನು ತಿಳಿಯಲಷ್ಟೇ ಬಯಸುತ್ತೇವೆ,” ಎಂದರು.

ಮುಂದುವರೆದು ಅವರು, “ದಯವಿಟ್ಟು ಅರ್ಜಿಯನ್ನು ಗಮನಿಸಿ, ದೇಶದಲ್ಲಿ ಕೋಮು ಗಲಭೆಗಳ ವೇಳೆ ಅಪಾರ ಪ್ರಮಾಣದ ಜೀವಹಾನಿ ಉಂಟಾಗಿದೆ. ದಾಹೋಡ್‌ ಜಿಲ್ಲೆಯ, ಲಿಮ್ಖೇಡಾದಲ್ಲಿಯೂ ಗಲಭೆ, ಲೂಟಿ, ಹಿಂಸಾಚಾರ ನಡೆಯಿತು. ಬಾನೊ ಮತ್ತು ಶಮೀನ್‌ ಅವರು ಇತರರೊಂದಿಗೆ ಗಲಭೆಕೋರರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಶಮೀನ್‌ ಮಗುವಿಗೆ ಜನುಮ ನೀಡಿದರು. ಅರ್ಜಿದಾರೆ (ಬಾನೊ) ಮತ್ತಿತರರು ತಪ್ಪಿಸಿಕೊಳ್ಳುವ ವೇಳೆ 25 ಮಂದಿಯ ಗಲಭೆಕೋರರ ಗುಂಪು ಅವರನ್ನು ನೋಡಿತು. ಅವರು ಮುಸಲ್ಮಾನರನ್ನು ಸಾಯಿಸಿ ಎಂದು ಕೂಗುತ್ತಿದ್ದರು. ಮೂರು ವರ್ಷದ ಮಗುವನ್ನು (ಬಾನೊ ಅವರ ಮಗು) ನೆಲಕ್ಕಪ್ಪಳಿಸಿ ಕೊಲ್ಲಲಾಯಿತು, ಗರ್ಭಿಣಿಯ ಮೇಲೆ ಅತ್ಯಾಚಾರಗೈಯಲಾಯಿತು” ಎಂದು ವಿವರಿಸಿದರು.

ಸಿಪಿಎಂ ನಾಯಕಿ ಸುಭಾಸಿನಿ ಅಲಿ, ಸ್ವತಂತ್ರ ಪತ್ರಕರ್ತೆ ಮತ್ತು ಚಲನಚಿತ್ರ ನಿರ್ಮಾಪಕಿ ರೇವತಿ ಲೌಲ್‌ ಮತ್ತು ರೂಪ್ ರೇಖ್ ವರ್ಮಾ ಅವರು ಗುಜರಾತ್‌ ಸರ್ಕಾರದ ನಡೆಯನ್ನು ಆಕ್ಷೇಪಿಸಿ ಅರ್ಜಿ ಸಲ್ಲಿಸಿದ್ದಾರೆ.

ಅಪರಾಧಿಗಳು 14 ವರ್ಷಗಳ ಜೈಲುವಾಸ ಪೂರ್ಣಗೊಳಿಸಿರುವುದು ಸೇರಿದಂತೆ, ಅವರಿಗೆ ವಯಸ್ಸಾಗಿರುವುದು, ಅಪರಾಧದ ಸ್ವರೂಪ ಹಾಗೂ ಜೈಲಿನಲ್ಲಿ ತೋರಿದ ಉತ್ತಮ ನಡವಳಿಕೆ ಮುಂತಾದ ಅಂಶಗಳನ್ನು ಆಧರಿಸಿ ಅವರೆಲ್ಲರನ್ನೂ ಬಿಡುಗಡೆ ಮಾಡಲಾಗಿದೆ ಎಂದು ಗುಜರಾತ್ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ರಾಜ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದುದು ವರದಿಯಾಗಿತ್ತು.

ಹಿಂದಿನ ಲೇಖನಆರ್ ಟಿಐ ಕಾಯ್ದೆ ಅಡಿ ಮಾಹಿತಿ ನೀಡದ ಆರೋಪ: ಗ್ರಾಪಂ ಕಾರ್ಯದರ್ಶಿಗೆ 5 ಸಾವಿರ ರೂ. ದಂಡ
ಮುಂದಿನ ಲೇಖನಹಿರಿಯ ಪತ್ರಕರ್ತ ಡಾ. ಕೂಡ್ಲಿ ಗುರುರಾಜ ಅವರ ಕೃತಿ ಬಿಡುಗಡೆ