ಮನೆ ಕಾನೂನು ಡಿಪ್ಲೊಮಾ, ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳಿಗೆ 5 ವರ್ಷದ ಎಲ್‌’ಎಲ್‌’ಬಿ ಕೋರ್ಸ್‌ಗೆ ಅನುಮತಿಸಿ: ಮದ್ರಾಸ್‌ ಹೈಕೋರ್ಟ್‌

ಡಿಪ್ಲೊಮಾ, ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳಿಗೆ 5 ವರ್ಷದ ಎಲ್‌’ಎಲ್‌’ಬಿ ಕೋರ್ಸ್‌ಗೆ ಅನುಮತಿಸಿ: ಮದ್ರಾಸ್‌ ಹೈಕೋರ್ಟ್‌

0

ಐದು ವರ್ಷಗಳ ಎಲ್‌’ಎಲ್‌’ಬಿಗೆ ಪ್ರವೇಶ ಕಲ್ಪಿಸಲು ನಿರ್ಧರಿಸುವಾಗ ಹತ್ತನೇ ತರಗತಿಯ ಬಳಿಕ ಮೂರು ವರ್ಷದ ಡಿಪ್ಲೊಮಾ ಅಥವಾ ಪಾಲಿಟೆಕ್ನಿಕ್‌ ಕೋರ್ಸ್‌ ಪೂರೈಸಿರುವ ವಿದ್ಯಾರ್ಥಿಗಳನ್ನು ಹನ್ನೆರಡನೇ ತರಗತಿ ವಿದ್ಯಾರ್ಥಿಗಳಿಗೆ ಸಮಾನ ಎಂದು ಪರಿಗಣಿಸಿಬೇಕು ಎಂದು ಮದ್ರಾಸ್‌ ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

ಮುಂದಿನ ವರ್ಷದ ಶೈಕ್ಷಣಿಕ ವರ್ಷದ ಪರಿಚಯ ಪತ್ರದಲ್ಲಿ ಈ ಮಾಹಿತಿಯನ್ನು ಸ್ಪಷ್ಟಪಡಿಸುವಂತೆ ತಮಿಳುನಾಡಿನ ಡಾ. ಅಂಬೇಡ್ಕರ್‌ ಕಾನೂನು ವಿಶ್ವವಿದ್ಯಾಲಯಕ್ಕೆ ನಿರ್ದೇಶಿಸಿದೆ.

ಮಾನ್ಯತೆ ಪಡೆದಿರುವ ಸಂಸ್ಥೆಯಿಂದ 10ನೇ ತರಗತಿ ಬಳಿಕ ಮೂರು ವರ್ಷದ ಡಿಪ್ಲೊಮಾ ಅಥವಾ ಪಾಲಿಟೆಕ್ನಿಕ್‌ ಪಡೆದಿರುವ ವಿದ್ಯಾರ್ಥಿಗಳನ್ನು 12ನೇ ತರಗತಿ ಪೂರ್ಣಗೊಳಿಸಿ ಸರ್ಟಿಫಿಕೇಟ್‌ ಪಡೆದಿರುವ ವಿದ್ಯಾರ್ಥಿಗಳಿಗೆ ಸಮಾನವಾಗಿ ಪರಿಗಣಿಸಬೇಕು ಎಂದು ನ್ಯಾಯಾಲಯದ ಆದೇಶದಲ್ಲಿ ಹೇಳಿದೆ.

ಡಿಪ್ಲೊಮಾ ಅಥವಾ ಪಾಲಿಟೆಕ್ನಿಕ್‌ ಕೋರ್ಸ್‌’ಗಳನ್ನು ಪೂರೈಸಿರುವ ವಿದ್ಯಾರ್ಥಿಗಳನ್ನು ಇತರೆ ವಿದ್ಯಾರ್ಥಿಗಳಿಗೆ ಸಮಾನವಾಗಿ ಪರಿಗಣಿಸುವಂತೆ ಎಲ್ಲಾ ಕಾನೂನು ಕಾಲೇಜುಗಳಿಗೆ ನಿರ್ದೇಶಿಸಲಾಗಿದೆ. ಈ ಸಂಬಂಧ ಸುತ್ತೋಲೆಯನ್ನೂ ಹೊರಡಿಸಲಾಗಿದೆ. ಮದ್ರಾಸ್‌ ಹೈಕೋರ್ಟ್‌ನ ಹಿಂದಿನ ಆದೇಶವನ್ನು ಕಾನೂನು ಶಿಕ್ಷಣ ಸಮಿತಿಯು ಪರಿಗಣಿಸಿದೆ ಎಂದು ಭಾರತೀಯ ವಕೀಲರ ಪರಿಷತ್‌ ವಾದಿಸಿತ್ತು.

ಅರ್ಜಿದಾರರ ಕೋರಿಕೆಯನ್ನು ಪರಿಗಣಿಸಿರುವ ನ್ಯಾಯಾಲಯವು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಐದು ವರ್ಷಗಳ ಕಾನೂನು ಕೋರ್ಸ್‌’ಗೆ ಅವರು ಅರ್ಹರಾಗಿದ್ದರೆ ಅವರಿಗೆ ಸೀಟು ಹಂಚಿಕೆ ಮಾಡುವಂತೆ ಆದೇಶ ಮಾಡಿದೆ. ಅಲ್ಲದೇ, ಈ ಕುರಿತು ಶೈಕ್ಷಣಿಕ ವರ್ಷದ ಪರಿಚಯ ಪತ್ರದಲ್ಲಿ ಈ ಮಾಹಿತಿ ನೀಡುವಂತೆ ವಿಶ್ವವಿದ್ಯಾಲಯಕ್ಕೆ ನ್ಯಾಯಾಲಯವು ಆದೇಶಿಸಿದೆ.