ಮನೆ ರಾಜ್ಯ ಪಠ್ಯ ಪರಿಷ್ಕರಣೆ ತಪ್ಪು ಸರಿಪಡಿಸಲು ಪರ್ಯಾಯ ಕಾರ್ಯಕ್ರಮ: ದೇವನೂರು ಮಹಾದೇವ

ಪಠ್ಯ ಪರಿಷ್ಕರಣೆ ತಪ್ಪು ಸರಿಪಡಿಸಲು ಪರ್ಯಾಯ ಕಾರ್ಯಕ್ರಮ: ದೇವನೂರು ಮಹಾದೇವ

0

ಮೈಸೂರು(Mysuru):  ಪಠ್ಯ ಪರಿಷ್ಕರಣೆಯಿಂದ ಆಗಿರುವ ತಪ್ಪುಗಳನ್ನು ಸರಿಪಡಿಸಲು, ಮಕ್ಕಳು ಪ್ರಜಾಸತ್ತಾತ್ಮಕವಾಗಿ ಬೆಳೆಯಲು, ಸಂವಿಧಾನದ ಆಶಯಗಳನ್ನು ತಿಳಿಸಲು ಸಾಮಾಜಿಕ ಜಾಲತಾಣಗಳಲ್ಲಿ ಪರ್ಯಾಯವಾಗಿ ಕಾರ್ಯಕ್ರಮ ರೂಪಿಸುವುದಾಗಿ ಹಿರಿಯ ಸಾಹಿತಿ ದೇವನೂರ ಮಹಾದೇವ ತಿಳಿಸಿದರು.

ನಗರದ ಪ್ರಾದೇಶಿಕ ಆಯುಕ್ತರ ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳು ಈಗಾಗಲೇ ಬಳಸುತ್ತಿರುವ ವ್ಯಾಟ್ಸಾಪ್, ಫೇಸ್‌ಬುಕ್ ,ಆನ್‌ಲೈನ್ ಮೂಲಕ ಪಠ್ಯ ಪರಿಷ್ಕರಣೆಯಲ್ಲಾಗಿರುವ ತಪ್ಪುಗಳನ್ನು ಸರಿಪಡಿಸುತ್ತೇವೆ ಎಂದರು.

ಸಂವಿಧಾನದ ಪ್ರಸ್ತಾವನೆಯನ್ನು ಹಾಡು ಕಟ್ಟಿ ಹಾಡಲಿದ್ದೇವೆ. ತಜ್ಞರ ಮೂಲಕ ಉಪನ್ಯಾಸ ಏರ್ಪಡಿಸುತ್ತೇವೆ. ಕಮ್ಮಟ ಮಾಡಿ ಪ್ರಶ್ನಿಸುವ, ವೈಜ್ಞಾನಿಕ ಮನೋಭಾವ ಬೆಳೆಸಲಿದ್ದೇವೆ ಎಂದು ನುಡಿದರು.

ತಮ್ಮ ಪಠ್ಯವನ್ನು ಕೈ ಬಿಡುವಂತೆ ತಿಳಿಸಿದ್ದೇನೆ. ಪಠ್ಯ ಪುಸ್ತಕ ಈಗಾಗಲೇ ಮಕ್ಕಳ ಕೈ ಸೇರಿದ್ದರೆ ಬೋಧಿಸಿದಂತೆ ಶಿಕ್ಷಕರಿಗೆ ಸೂಚಿಸಬೇಕು. ರಾಜ್ಯ ಸರ್ಕಾರಕ್ಕೆ ಸೂಚಿಸುವ ಅಧಿಕಾರವಿದೆ. ಅವರ ಕೈಯಲ್ಲಿ ಆಡಳಿತ ಇರುವ ಕಾರಣ ಮುದ್ರಿಸಿರುವ ಪಠ್ಯದಲ್ಲಿ ಇರುವುದನ್ನು ಬೋಧಿಸದಂತೆ ಹೇಳಬಹುದಾಗಿದೆ ಎಂದರು.
ದೇವನೂರ ಮಹಾದೇವ ಅವರನ್ನು ಕೆಲವರು ದಾರಿ ತಪ್ಪಿಸುತ್ತಿದ್ದಾರೆಂಬ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಹಾಗಾದರೆ ಅವರನ್ನು ಯಾರು ದಾರಿ ತಪ್ಪಿಸಿದ್ದಾರೆ? ನಾಗಾಪುರ ಸಂಘ ಪರಿವಾರ ದಾರಿ ತಪ್ಪಿಸಿದ್ದಾರೆಯೇ ? ಅವರನ್ನು ಪ್ರಶ್ನೆ ಮಾಡಬೇಕು ಎಂದು ಹೇಳಿದರು.
ಅವರು ಮಾಡುವುದು ಮಾಡಲಿ, ಮಕ್ಕಳು ಮೂಢನಂಬಿಕೆಗೆ ಬೀಳದಂತೆ, ಪ್ರಶ್ನಿಸುವ ಮನೋಭಾವ ಬೆಳೆಸಲು ಪರ್ಯಾಯವಾಗಿ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕ್ರಮ ರೂಪಿಸಲಿದ್ದೇವೆ ಎಂದು ತಿಳಿಸಿದರು.