ಮನೆ ರಾಜ್ಯ ಕೋವಿಡ್‌ ಹೆಚ್ಚಳ: ಬಿಬಿಎಂಪಿ, ಬೆಂಗಳೂರು ವ್ಯಾಪ್ತಿಗೆ ಪರಿಷ್ಕೃತ ಮಾರ್ಗಸೂಚಿ ಪ್ರಕಟ

ಕೋವಿಡ್‌ ಹೆಚ್ಚಳ: ಬಿಬಿಎಂಪಿ, ಬೆಂಗಳೂರು ವ್ಯಾಪ್ತಿಗೆ ಪರಿಷ್ಕೃತ ಮಾರ್ಗಸೂಚಿ ಪ್ರಕಟ

0

ಬೆಂಗಳೂರು (Bengaluru): ಕೋವಿಡ್‌ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಗೆ ಅನ್ವಯವಾಗುವಂತೆ ಮಂಗಳವಾರ ಕೋವಿಡ್‌ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ.

ಕೊರೊನಾ ಸೋಂಕು ನಿಧಾನಗತಿಯಲ್ಲಿ ಏರಿಕೆಯಾಗುತ್ತಿದ್ದು, ಕೋವಿಡ್‌-19 ತಾಂತ್ರಿಕ ಸಲಹಾ ಸಮಿತಿಯ ಸೂಚನೆಯಂತೆ ಮಾರ್ಗಸೂಚಿ ಪರಿಷ್ಕರಿಸಲಾಗಿದೆ. ಕೋವಿಡ್‌ ಪರೀಕ್ಷೆ, ಹೋಂ ಕ್ವಾರಂಟೈನ್‌ ಹಾಗೂ ಸೋಂಕಿತರ ಚಿಕಿತ್ಸೆಗೆ ಸಂಬಂಧಪಟ್ಟಂತೆ ಪರಿಷ್ಕೃತ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆರೋಗ್ಯ ಮತ್ತು ಕಲ್ಯಾಣ ಸೇವೆ ಆಯುಕ್ತಾಲಯದ ಆಯುಕ್ತ ಡಿ.ರಂದೀಪ್‌ ತಿಳಿಸಿದ್ದಾರೆ.

ಪರಿಷ್ಕೃತ ಕೋವಿಡ್‌ ಮಾರ್ಗಸೂಚಿ ವಿವರ:

* ವಸತಿ ಸಮುಚ್ಚಯ ಅಥವಾ ಅಪಾರ್ಟ್‌ಮೆಂಟ್‌ಗಳಲ್ಲಿ ಕೊರೊನಾ ಸೋಂಕಿನ 3 ರಿಂದ 5 ಪ್ರಕರಣ ಪತ್ತೆಯಾದರೆ ಸಣ್ಣ ಕ್ಲಸ್ಟರ್‌ ಎಂದು ಪರಿಗಣಿಸಬೇಕು. 5ಕ್ಕಿಂತ ಹೆಚ್ಚು ಪ್ರಕರಣ ಪತ್ತೆಯಾದರೆ ದೊಡ್ಡ ಕ್ಲಸ್ಟರ್‌ ಎಂದು ಪರಿಗಣಿಸಬೇಕು. 15 ಅಥವಾ ಅದಕ್ಕಿಂತ ಹೆಚ್ಚು ಜನರಲ್ಲಿಸೋಂಕು ಕಾಣಿಸಿಕೊಂಡರೆ ಇಡೀ ಅಪಾರ್ಟ್‌ಮೆಂಟ್‌ ಕಟ್ಟಡದಲ್ಲಿನ ಎಲ್ಲರನ್ನೂ ರಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಗೆ ಒಳಪಡಿಸಬೇಕು.

* ಸೋಂಕು ದೃಢಪಟ್ಟ ವ್ಯಕ್ತಿಗಳ ದೇಹಸ್ಥಿತಿಗೆ ಅನುಗುಣವಾಗಿ ಹೋಂ ಐಸೋಲೇಷನ್‌ ಅಥವಾ ಕೋವಿಡ್‌ ಆರೈಕೆ ಕೇಂದ್ರ, ಆಸ್ಪತ್ರೆಗೆ ದಾಖಲಿಸಬೇಕು. ಆರ್‌ಟಿಪಿಸಿಆರ್‌ ಪರೀಕ್ಷೆಗೆ ಹೆಚ್ಚುವರಿಯಾಗಿ ಮಾದರಿ ಸಂಗ್ರಹಿಸಬೇಕು. ಪಾಸಿಟಿವಿಟಿ ಪ್ರಮಾಣ 25ಕ್ಕೆ ಹೆಚ್ಚಿದ್ದರೆ ಜಿನೊಮ್‌ ಸೀಕ್ವೆನ್ಸಿಂಗ್‌ಗೆ ಕಳುಹಿಸಬೇಕು.

* 60 ವರ್ಷ ದಾಟಿದವರಲ್ಲಿಅಥವಾ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಸೋಂಕಿನ ಲಕ್ಷಣಗಳಿದ್ದರೆ ಅವರಿಗೆ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಬೇಕು. ಸೋಂಕಿನ ಲಕ್ಷಣರಹಿತರಿಗೆ ದೊಡ್ಡ ಪ್ರಮಾಣದ ಅಥವಾ ಸಾಮೂಹಿಕ ಕೋವಿಡ್‌ ಪರೀಕ್ಷೆ ಶಿಫಾರಸು ಮಾಡುವಂತಿಲ್ಲ. ಆದರೆ, ಪ್ರಾಥಮಿಕ ಸಂಪರ್ಕಿತರಿಗೆ ಇದು ಅನ್ವಯವಾಗುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಮತ್ತು ದೈಹಿಕ ಅಂತರ ಕಾಪಾಡಬೇಕು.

* ಹೋಂ ಕ್ವಾರಂಟೈನ್‌ ಆಗಿರುವ ಸೋಂಕಿತರ ಮನೆಗಳಲ್ಲಿ ಕೆಲಸ ಮಾಡುವವರು ಸುರಕ್ಷತಾ ಕ್ರಮ ಅನುಸರಿಸಬೇಕು. ಮನೆಗೆಲಸದ ಸಹಾಯಕರು ಅಥವಾ ಮನೆಗೆಲಸದವರು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಕಡ್ಡಾಯವಾಗಿ ಜ್ವರ, ಕೆಮ್ಮು, ನೆಗಡಿ. ಗಂಟಲು ನೋವು, ಉಸಿರಾಟ ಸಮಸ್ಯೆಯಂತಹ ರೋಗ ಲಕ್ಷಣಗಳಿಂದ ಮುಕ್ತವಾಗಿರಬೇಕು. ಸೋಂಕಿತರ ಮನೆಯಲ್ಲಿ ಕೆಲಸ ಮಾಡುವಾಗ ಎನ್‌-95 ಮಾಸ್ಕ್‌ ಧರಿಸಬೇಕು. 2 ಡೋಸ್‌ ಕೋವಿಡ್‌ ಲಸಿಕೆ ಪಡೆದಿರಬೇಕು.

* ಸೋಂಕಿತರು ಗುಣಮುಖ ಆಗುವವರೆಗೂ ಕ್ಲಬ್‌ ಹೌಸ್‌, ಈಜು ಕೊಳ, ಕ್ರೀಡಾ ಕೊಠಡಿ, ಕಚೇರಿಗಳನ್ನು ಬಂದ್‌ ಮಾಡಬೇಕು. ಜತೆಗೆ ಸೋಂಕಿತರು ಪತ್ತೆಯಾದ ಸ್ಥಳವನ್ನು ಸ್ಯಾನಿಟೈಸ್‌ ಮಾಡಬೇಕು. ಫ್ಲೋರ್‌, ಬ್ಲಾಕ್‌, ಅಪಾರ್ಟ್‌ಮೆಂಟ್‌ಗಳನ್ನು ಸೀಲ್‌ಡೌನ್‌ ಅಥವಾ ಕ್ಲೋಸ್‌ಡೌನ್‌ ಮಾಡುವಂತಿಲ್ಲ.

* ಕ್ಲಸ್ಟರ್‌ ಅಥವಾ ಸಾಂಕ್ರಾಮಿಕ ಸ್ಫೋಟದ ನಿಯಮಗಳನ್ನು ಸ್ಥಳೀಯ ಆರೋಗ್ಯ ಪ್ರಾಧಿಕಾರವು ತೆರವುಗೊಳಿಸಿದ ನಂತರ ಬಾಕಿ ಇರುವ ಮುನ್ನೆಚ್ಚರಿಕೆ ಡೋಸ್‌ ಲಸಿಕೆ ಪಡೆಯುವಂತೆ ಪ್ರೇರೇಪಿಸಬೇಕು.

* ಕೊರೊನಾ ಸೋಂಕಿನ ಲಕ್ಷಣ ಹೊಂದಿರುವವರಿಗೆ ಕಚೇರಿ, ಶಾಲಾ, ಕಾಲೇಜಿಗೆ ಹಾಜರಾಗದಂತೆ ಸೂಚಿಸಬೇಕು. ರಾರ‍ಯಪಿಡ್‌ ಆ್ಯಂಟಿಜೆನ್‌ ಪರೀಕ್ಷೆಯಲ್ಲಿಸೋಂಕು ದೃಢಪಟ್ಟರೆ ಅವರನ್ನು ಐಸೋಲೇಷನ್‌ನಲ್ಲಿಇರಿಸಬೇಕು. ಪರೀಕ್ಷೆಯಲ್ಲಿನೆಗೆಟಿವ್‌ ಫಲಿತಾಂಶ ಬಂದರೆ ಆರ್‌ಟಿಪಿಸಿಆರ್‌ ಮಾದರಿಯನ್ನು ನೀಡಿ ಐಸೋಲೇಷನ್‌ನಲ್ಲಿಇದ್ದು, ಫಲಿತಾಂಶ ನಿರೀಕ್ಷಿಸಬೇಕು.

* ಕೋವಿಡ್‌ ದೃಢಪಟ್ಟ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕಿತರಲ್ಲಿಸೋಂಕಿನ ಲಕ್ಷಣ ಕಂಡುಬಂದರೆ ರಾರ‍ಯಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು.

* ಶಿಕ್ಷಣ ಸಂಸ್ಥೆಗಳಲ್ಲಿ ಕೋವಿಡ್‌ ಪ್ರಕರಣ ವರದಿಯಾದರೆ ಕೊಠಡಿಗಳನ್ನು ಸ್ಯಾನಿಟೈಸ್‌ ಮಾಡಿಸಿ ಮರುದಿನದಿಂದ ಪುನಃ ಬಳಕೆ ಮಾಡಬೇಕು. ಕಚೇರಿ ಅಥವಾ ಶಿಕ್ಷಣ ಸಂಸ್ಥೆ, ಕಾಲೇಜುಗಳನ್ನು ಮುಚ್ಚುವ ಅಗತ್ಯವಿಲ್ಲ.

* ಕಚೇರಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ಕಾಲೇಜುಗಳಲ್ಲಿ ಕೋವಿಡ್‌ ಲಸಿಕೆ ಪಡೆಯದವರಿಗೆ ಲಸಿಕೆ ತೆಗೆದುಕೊಳ್ಳುವಂತೆ ಪ್ರೇರೇಪಿಸಬೇಕು.

ಶಾಲಾ ಆಡಳಿತ ಮಂಡಳಿಗಳು ಪಾಲಿಸಬೇಕಾದ ನಿಯಮಗಳು (12ನೇ ತರಗತಿವರೆಗೆ)

* ಕೊರೊನಾ ಸೋಂಕಿನ ಲಕ್ಷಣವುಳ್ಳವರನ್ನು ಶಾಲೆಗೆ ಹಾಜರಾಗದಂತೆ ಸೂಚಿಸುವುದು. ರಾಪಿಡ್‌ ಆಂಟಿಜನ್‌ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಲ್ಲಿ ಶಿಷ್ಟಾಚಾರದಂತೆ ಐಸೋಲೇಷನ್‌ನಲ್ಲಿಇರಿಸಬೇಕು. ಪರೀಕ್ಷೆಯಲ್ಲಿ ನೆಗೆಟಿವ್‌ ವರದಿ ಬಂದಲ್ಲಿ, ಆರ್‌ಟಿಪಿಸಿಆರ್‌ ಪರೀಕ್ಷೆಗೊಳಪಡಿಸಿ ಫಲಿತಾಂಶ ಬರುವವರೆಗೆ ಪ್ರತ್ಯೇಕವಾಗಿ ಇರಿಸಬೇಕು.

* ಕ್ಲಸ್ಟರ್‌, ಸಾಂಕ್ರಾಮಿಕ ಸ್ಫೋಟಗಳು ವರದಿಯಾದಲ್ಲಿ ರೋಗ ಲಕ್ಷಣವಿರುವವರಿಗೆ ರಾಪಿಡ್‌ ಆಂಟಿಜೆನ್‌ ಪರೀಕ್ಷೆ ಮಾಡಬೇಕು. ಸೋಂಕು ದೃಢಪಟ್ಟವರ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಹೋಂ ಐಸೋಲೇಷನ್‌, ಸಿಸಿಸಿ ಅಥವಾ ಆಸ್ಪತ್ರೆಗೆ ದಾಖಲಿಸಲು ಕ್ರಮ ವಹಿಸಬೇಕು.

* ರಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದ ಪ್ರಕರಣಗಳಿಂದ ಹೆಚ್ಚುವರಿ ಮಾದರಿಗಳನ್ನು ಆರ್‌ಟಿಪಿಸಿಆರ್‌ ಪರೀಕ್ಷೆಗೆ ಸಂಗ್ರಹಿಸಬೇಕು. ಈ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾದರೆ, ಸೋಂಕಿತರ ಸಿಟಿ ವ್ಯಾಲ್ಯೂ 25 ಇದ್ದಲ್ಲಿ ಜಿನೋಮ್‌ ಸೀಕ್ವೆನ್ಸಿಂಗ್‌ಗೆ ಕಳುಹಿಸಬೇಕು.

* ಶಾಲೆಗಳಲ್ಲಿ ಪಾಸಿಟಿವ್‌ ಪ್ರಕರಣಗಳು ವರದಿಯಾದ ಕೊಠಡಿಗಳನ್ನು ಶೇ 1 ರಷ್ಟು ಸೋಡಿಯಂ ಹೈಪೋಕ್ಲೋರೈಟ್‌ ದ್ರಾವಣದಿಂದ ಸ್ವಚ್ಛಗೊಳಿಸಬೇಕು. ಮರು ದಿನದಿಂದ ಆ ಕೊಠಡಿಗಳನ್ನು ಪುನಃ ಬಳಕೆ ಮಾಡಬಹುದು.

* ಪ್ರವೇಶ ದ್ವಾರದಲ್ಲೇ ಜ್ವರ ತಪಾಸಣೆಗೆ ಥರ್ಮಲ್‌ ಸ್ಕ್ಯಾ‌ನರ್‌ಗಳನ್ನು ಬಳಸಬೇಕು. ಜ್ವರ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ ಇರುವವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಲು ಶಿಫಾರಸು ಮಾಡಬೇಕು.

* ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಪಾಡಬೇಕು. ಹ್ಯಾಂಡ್‌ ಸ್ಯಾನಿಟೈಸರ್‌ಗಳನ್ನು ಉಪಯೋಗಿಸಬೇಕು.

* ಸೋಂಕಿತ ಪ್ರಕರಣಗಳು ವರದಿಯಾದಲ್ಲಿಶಾಲೆಗಳನ್ನು ಮುಚ್ಚುವ ಅವಶ್ಯಕತೆ ಇಲ್ಲ.

ಹಿಂದಿನ ಲೇಖನಟೈಲರ್‌ ಕನ್ಹಯ್ಯ ಹತ್ಯೆ ಪ್ರಕರಣ: ಬೆದರಿಕೆ ಕರೆಯ ದೂರು ನಿರ್ಲಕ್ಷ್ಯಸಿದ ಎಎಸ್‌ಐ ಅಮಾನತು
ಮುಂದಿನ ಲೇಖನಫೇಸ್ ಬುಕ್ ನಲ್ಲಿ ಕಿರುಕುಳ: ಮೈಸೂರಿನ ಸೈಬರ್ ಠಾಣೆಗೆ ಪವಿತ್ರಾ ಲೋಕೇಶ್ ದೂರು