ಮನೆ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ: 150 ಪಾರಂಪರಿಕ ತಾಣಗಳಲ್ಲಿ ರಾರಾಜಿಸಲಿರುವ ತ್ರಿವರ್ಣ ಧ್ವಜ

ಸ್ವಾತಂತ್ರ್ಯದ ಅಮೃತ ಮಹೋತ್ಸವ: 150 ಪಾರಂಪರಿಕ ತಾಣಗಳಲ್ಲಿ ರಾರಾಜಿಸಲಿರುವ ತ್ರಿವರ್ಣ ಧ್ವಜ

0

ನವದೆಹಲಿ (New Delhi): ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಆಗಸ್ಟ್‌ 15 ರಂದು ದೇಶದ 150 ಪಾರಂಪರಿಕ ತಾಣಗಳಲ್ಲಿ ತ್ರಿವರ್ಣ ಧ್ವಜ ರಾರಾಜಿಸಲಿದೆ.

ಈ ಬಗ್ಗೆ ಭಾರತೀಯ ಪುರಾತತ್ವ ಇಲಾಖೆ ಮಾಹಿತಿ ನೀಡಿದೆ. 150 ಸಂರಕ್ಷಿತ ಸ್ಮಾರಕಗಳು ತ್ರಿವರ್ಣಗಳಿಂದ ಕಂಗೊಳಿಸುವಂತೆ ಮಾಡಲಾಗುವುದು. ದೇಶದಲ್ಲಿ ಪುರಾತತ್ವ ಇಲಾಖೆಯಿಂದ ಸಂರಕ್ಷಿಸಲಾಗುತ್ತಿರುವ ಒಟ್ಟು 3,693 ಪಾರಂಪರಿಕ ತಾಣಗಳಿವೆ. ಈ ಪೈಕಿ 37 ವಿಭಾಗಗಳ ತಾಣಗಳಲ್ಲಿ ಇಲಾಖೆಯು ಸಂವಾದ, ಉಪನ್ಯಾಸ, ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸ್ವಾತಂತ್ರ್ಯ ಹೋರಾಟಗಾರರು, ಪದ್ಮ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ಗಣ್ಯರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಭಾರತೀಯ ಪುರಾತತ್ವ ಸರ್ವೇಕ್ಷಣೆ ಅಡಿಯಲ್ಲಿ ಬರುವ ಎಲ್ಲಾ ಸ್ಮಾರಕಗಳು ಹಾಗೂ ಪ್ರವಾಸಿತಾಣಗಳಿಗೆ ಆಗಸ್ಟ್‌ 5ರಿಂದ 15ರವರೆಗೆ ಉಚಿತ ಪ್ರವೇಶವನ್ನು ಕೇಂದ್ರ ಸಂಸ್ಕೃತಿ ಇಲಾಖೆ ಈಗಾಗಲೇ ಘೋಷಿಸಿದೆ.

‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಒಂದು ಸಾಮೂಹಿಕ ಜನಾಂದೋಲನ ಆಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ‘ಮನ್ ಕೀ ಬಾತ್’ ರೇಡಿಯೊ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಹೇಳಿದ್ದರು. ಜನರು ಆಗಸ್ಟ್‌ 2–15ರ ಅವಧಿಯಲ್ಲಿ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳ ಪ್ರೊಫೈಲ್‌ ಚಿತ್ರವಾಗಿ ರಾಷ್ಟ್ರಧ್ವಜ ಬಳಸಬೇಕು ಎಂದು ಕರೆ ನೀಡಿದ್ದರು.