ಬೆಳಗಾವಿ(Belagavi): “ಅಮೃತ ಭಾರತಿಗೆ ಕನ್ನಡದಾರತಿ” ಕಾರ್ಯಕ್ರಮ ಬೆಳಗಾವಿಯಲ್ಲಿ ಶನಿವಾರ ಆಯೋಜಿಸಿದ ಮೆರವಣಿಗೆಗೆ ವೀರರಾಣಿ ಚನ್ನಮ್ಮನ ಪ್ರತಿಮೆಗೆ ಶಾಸಕ ಮಹಾಂತೇಶ ದೊಡ್ಡಗೌಡ್ರ ಅವರು ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು.
ಇಳಕಲ್ ಸೀರೆಯುಟ್ಟು, ಸಾಂಪ್ರದಾಯಿಕ ಆಭರಣ ಧರಿಸಿ ಬಂದ ಮಹಿಳೆಯರು ಪೂರ್ಣಕುಂಭ ಕಲಶ ಹೊತ್ತು ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಿದರು.
ಅವರ ಹಿಂದೆ ವಿವಿಧ ವಾದ್ಯತಂಡಗಳು ನಡೆದವು. ಡೊಳ್ಳು ಕಲಾವಿದರು, ಹಲಗೆಯವರು, ಝಾಂಝ್ ಪಥಕ್, ತಾಸೆಮೇಳದ ತಂಡಗಳು ಮೆರವಣಿಗೆಗೆ ಮೆರಗು ತಂದವು. ಇವರ ಮಧ್ಯೆ ಸಾಗಿದ ಭಾರತಮಾತೆಯ ಭಾವಚಿತ್ರವಿರುವ ವಾಹನಕ್ಕೆ ಜನ ಪುಷ್ಪಾರ್ಚನೆ ಮಾಡಿದರು.
ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಸಮವಸ್ತ್ರಧಾರಿಗಳಾಗಿ ಹಾಡುತ್ತ, ನಲಿಯುತ್ತ ಹೆಜ್ಜೆ ಹಾಕಿದರು. ಗೊಂಬೆ ವೇಷಧಾರಿಗಳು ಮಾರ್ಗದುದ್ದಕ್ಕೂ ವಾದ್ಯಮೇಳಗಳ ಸದ್ದಿಗೆ ತಕ್ಕಂತೆ ಕುಣಿದು ರಂಜಿಸಿದರು.
ರಾಣಿ ಚನ್ನಮ್ಮನ ವೃತ್ತದಿಂದ ಆರಂಭವಾದ ಮೆರವಣಿಗೆ ಐತಿಹಾಸಿಕ ಕೋಟೆ ಆವರಣದವರೆಗೂ ನಡೆಯಿತು.
ಶಾಸಕ ಮಹಾಂತೇಶ ದೊಡ್ಡಗೌಡ್ರ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ, ಉಪವಿಭಾಗಾಧಿಕಾರಿ ಶಶಿಧರ ಬಗಲಿ, ಕಿತ್ತೂರು ತಹಶೀಲ್ದಾರ್ ಸೋಮಪ್ಪ ಹಾಲಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಹಾಗೂ ಇತರೆ ಅಧಿಕಾರಿ ಸಿಬ್ಬಂದಿ ಕೂಡ ಹೆಜ್ಜೆ ಹಾಕಿದರು.