ನವದೆಹಲಿ: 1984ರ ಸಿಖ್ ವಿರೋಧಿ ದಂಗೆಯ ನೇತೃತ್ವ ವಹಿಸಿದ್ದಕ್ಕಾಗಿ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಸರಸ್ವತಿ ವಿಹಾರ್ ಹತ್ಯೆಗಳಲ್ಲಿ ಅವರ ಪಾತ್ರದ ಬಗ್ಗೆ ದೆಹಲಿ ನ್ಯಾಯಾಲಯ ಈ ತೀರ್ಪು ನೀಡಿದ್ದು, ಇದು ಅವರ ಎರಡನೇ ಜೀವಾವಧಿ ಶಿಕ್ಷೆಯಾಗಿದೆ.ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್‌ಗೆ ವಿಶೇಷ ಕೋರ್ಟ್ ನ್ಯಾಯಾಧೀಶೆ ಕಾವೇರಿ ಬವೇಜಾ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ.
ದೆಹಲಿಯ ರೋಸ್ ಅವೆನ್ಯೂ ರಸ್ತೆಯಲ್ಲಿರುವ ವಿಶೇಷ ನ್ಯಾಯಾಲಯ ಈಗಾಗಲೇ ಸಜ್ಜನ್ ಕುಮಾರ್ ಅಪರಾಧಿ ಎಂದು ತೀರ್ಪು ನೀಡಿತ್ತು. 1984ರಲ್ಲಿ ಸಿಖ್ ವಿರೋಧಿ ದಂಗೆ ವೇಳೆ ಇಬ್ಬರನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಈ ಶಿಕ್ಷೆ ವಿಧಿಸಲಾಗಿದೆ. ದೆಹಲಿಯ ಸರಸ್ವತಿ ವಿಹಾರ್ ಪ್ರದೇಶದಲ್ಲಿ ನಡೆದಿದ್ದ ಘಟನೆಯಲ್ಲಿ 1984ರ ನವೆಂಬರ್ 1ರಂದು ತಂದೆ, ಮಗನ ಕೊಲೆ ಆಗಿತ್ತು. ತಂದೆ ಜಸ್ವಂತ್ ಸಿಂಗ್, ಮಗ ತರುಣ್‌ದೀಪ್ ಸಿಂಗ್ ಕೊಲೆ ನಡೆದಿತ್ತು. ಸಜ್ಜನ್ ಕುಮಾರ್ ನೇತೃತ್ವದ ಗುಂಪಿನ ವಿರುದ್ಧ ಕೇಸ್ ದಾಖಲಾಗಿತ್ತು. ಪಂಜಾಬಿ ಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡ ವರದಿ ಸಲ್ಲಿಸಿತ್ತು. ದೆಹಲಿ ಕಂಟೋನ್ಮೆಂಟ್ ದಂಗೆ ಪ್ರಕರಣದಲ್ಲಿ ಭಾಗಿಯಾಗಿ ಈಗಾಗಲೇ ಶಿಕ್ಷೆ ಅನುಭವಿಸುತ್ತಿರುವ ಸಜ್ಜನ್ ಕುಮಾರ್ ಅವರಿಗೆ ಇದು ಎರಡನೇ ಜೀವಾವಧಿ ಶಿಕ್ಷೆಯಾಗಿದೆ. ಸಜ್ಜನ್ ಕುಮಾರ್‌ಗೆ ಮರಣದಂಡನೆ ವಿಧಿಸುವಂತೆ ಪೊಲೀಸರು ಕೋರಿದ್ದರು. ಆದರೆ, ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಬೃಹತ್ ಗುಂಪನ್ನು ಸಜ್ಜನ್ ಕುಮಾರ್ ಮುನ್ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ದೂರಿನ ಪ್ರಕಾರ, ಕೋಪಗೊಂಡ ಗುಂಪೊಂದು ದೂರುದಾರ ಜಸ್ವಂತ್ ಅವರ ಪತ್ನಿಯ ಮನೆಯ ಮೇಲೆ ದಾಳಿ ಮಾಡಿ, ಅವರ ಪತಿ ಮತ್ತು ಮಗನನ್ನು ಕೊಲೆ ಮಾಡಿತ್ತು.
1984ರಲ್ಲಿ ಏನಾಯಿತು?:
ಸಿಖ್ಖರಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಸಶಸ್ತ್ರ ಗುಂಪೊಂದು ಸಿಖ್ಖರ ವಿರುದ್ಧ ದೊಡ್ಡ ಪ್ರಮಾಣದ ಬೆಂಕಿ ಹಚ್ಚುವಿಕೆ ಮತ್ತು ಆಸ್ತಿಪಾಸ್ತಿಗಳ ನಾಶಕ್ಕೆ ಮುಂದಾಯಿತು. ಗುಂಪೊಂದು ಜಸ್ವಂತ್ ಸಿಂಗ್ ಮತ್ತು ಅವರ ಮಗನನ್ನು ಕೊಂದು ಅವರ ಮನೆಯನ್ನು ಲೂಟಿ ಮಾಡಿತು. ನಂತರ ಅವರು ಮನೆಯನ್ನು ಸುಟ್ಟುಹಾಕಿದ್ದರು. ಸಜ್ಜನ್ ಕುಮಾರ್ ಅವರೇ ಈ ಗುಂಪಿನ ನೇತೃತ್ವ ವಹಿಸಿ, ಕೊಲೆಯ ಮುಂದಾಳತ್ವ ವಹಿಸಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಕೂಡ ಸಿಕ್ಕಿತ್ತು.
ಸಜ್ಜನ್ ಕುಮಾರ್ ಯಾರು?:
ಸಜ್ಜನ್ ಕುಮಾರ್ ಕಾಂಗ್ರೆಸ್ ಪಕ್ಷದ ಮಾಜಿ ಸಂಸದರಾಗಿದ್ದು, 1984ರ ಸಿಖ್ ದಂಗೆ ಪ್ರಕರಣದಲ್ಲಿ 2018ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು. 1977ರಲ್ಲಿ ದೆಹಲಿ ಮಹಾನಗರ ಪಾಲಿಕೆಗೆ ಮೊದಲು ಆಯ್ಕೆಯಾದ ಸಜ್ಜನ್ ಕುಮಾರ್ ಅದೇ ವರ್ಷ ದೆಹಲಿ ಕೌನ್ಸಿಲರ್ ಆಗಿ ಪ್ರಮಾಣವಚನ ಸ್ವೀಕರಿಸಿದರು. ದೆಹಲಿಯ ಸಕ್ರಿಯ ರಾಜಕಾರಣಿಯಾಗಿದ್ದ ಅವರು 2004ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಿಂದ ಗೆದ್ದರು.
1984ರ ನವೆಂಬರ್ 1ರಂದು ಪ್ರತ್ಯಕ್ಷದರ್ಶಿಗಳ ಪ್ರಕಾರ, ಆಗಿನ ಪ್ರಧಾನಿ ಕಾಂಗ್ರೆಸ್‌ನ ಇಂದಿರಾ ಗಾಂಧಿಯವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಸಿಖ್ ಸಮುದಾಯದ ಮೇಲೆ ದಾಳಿ ಮಾಡಲು ಸಜ್ಜನ್ ಕುಮಾರ್ ಜನರ ಗುಂಪನ್ನು ಪ್ರಚೋದಿಸಿದ್ದರು. ಅದಕ್ಕೂ ಒಂದು ದಿನ ಮೊದಲು ಇಂದಿರಾ ಗಾಂಧಿಯವರ ಮೇಲೆ ಸಿಖ್ ಅಂಗರಕ್ಷಕರು ಗುಂಡು ಹಾರಿಸಿ ಕೊಂದಿದ್ದರು.