ಮನೆ ಕಾನೂನು ಬೆಂಗಳೂರು ವಿವಿ ಕುಲಪತಿ ವೇಣುಗೋಪಾಲ್ ನೇಮಕ ಆದೇಶ ರದ್ದು ಪಡಿಸಿದ ಹೈಕೋರ್ಟ್

ಬೆಂಗಳೂರು ವಿವಿ ಕುಲಪತಿ ವೇಣುಗೋಪಾಲ್ ನೇಮಕ ಆದೇಶ ರದ್ದು ಪಡಿಸಿದ ಹೈಕೋರ್ಟ್

0

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಡಾ.ಕೆ.ಆರ್.ವೇಣುಗೋಪಾಲ್ ಅವರ  ನೇಮಕಾತಿ ಆದೇಶವನ್ನು ಹೈಕೋರ್ಟ್ ವಿಭಾಗೀಯ ಪೀಠ ರದ್ದುಪಡಿಸಿದ್ದು, ಈ ಮೊದಲು ಕೂಡ ಹೈಕೋರ್ಟ್ ಏಕ ಸದಸ್ಯ ಪೀಠ ನೇಮಕ ಆದೇಶವನ್ನು ರದ್ದುಪಡಿಸಿತ್ತು.

ಈ ತೀರ್ಪು ಪ್ರಶ್ನಿಸಿ ಬೆಂಗಳೂರು ವಿವಿ, ವೇಣುಗೋಪಾಲ್ ಹಾಗೂ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರತ್ಯೇಕ ಮೇಲ್ಮನವಿ ಅರ್ಜಿಗಳನ್ನು ನ್ಯಾ. ಎಸ್.ಸುಜಾತ ಹಾಗೂ ನ್ಯಾ.ಶಿವಶಂಕರ್ ಅಮರಣ್ಣವರ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತ್ತು. ಕಾಯ್ದಿರಿಸಿದ್ದ ತೀರ್ಪನ್ನು ಇಂದು ಪ್ರಕಟಿಸಿರುವ ವಿಭಾಗೀಯ ಪೀಠ ಏಕಸದಸ್ಯ ಪೀಠದ ಆದೇಶವನ್ನು ಎತ್ತಿ ಹಿಡಿದಿದೆ.

ಬೆಂಗಳೂರು ವಿವಿ ಕುಲಪತಿ ಹುದ್ದೆಗೆ ವೇಣುಗೋಪಾಲ್ ನೇಮಕ ಮಾಡಿ 2018ರ ಜೂನ್ 12ರಂದು ರಾಜ್ಯಪಾಲರು ಆದೇಶ ಹೊರಡಿಸಿದ್ದರು. ಸರ್ಕಾರದ ಅನುಮೋದನೆ ಇಲ್ಲದೇ ವೇಣುಗೋಪಾಲ್ ನೇಮಕ ಮಾಡಲಾಗಿದೆ. ನಂತರ ಜೂನ್ .28ರಂದು ಸರ್ಕಾರ ಅನುಮೋದನೆ ನೀಡಿದೆ. ಇದು ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ-2000ದ ಸೆಕ್ಷನ್ 14(4)ರ ಸ್ಪಷ್ಟ ಉಲ್ಲಂಘನೆ ಎಂದು ಆಕ್ಷೇಪಿಸಿ ಪ್ರೊ.ಸಂಗಮೇಶ್ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ 2019ರ ಸೆಪ್ಟೆಂಬರ್ .24ರಂದು ವೇಣುಗೋಪಾಲ್ ನೇಮಕ ಆದೇಶ ರದ್ದು ಪಡಿಸಿತ್ತು.

ಆ ಬಳಿಕ ಸಲ್ಲಿಸಿದ ಮೇಲ್ಮನವಿಗಳ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ಇದರಿಂದಾಗಿ ವೇಣುಗೋಪಾಲ್ ಕುಲಪತಿ ಹುದ್ದೆಯಲ್ಲಿ ಮುಂದುವರೆದಿದ್ದರು. ಅಂತಿಮವಾಗಿ ಮೇಲ್ಮನವಿ ಅರ್ಜಿಗಳನ್ನು ವಜಾಗೊಳಿಸಿರುವ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶದಲ್ಲಿ ಮಧ್ಯಪ್ರವೇಶಿಸುವ ಯಾವುದೇ ಸಕಾರಣವಿಲ್ಲ ಎಂದು ಸ್ಪಷ್ಟಪಡಿಸಿದೆ.

ಹಿಂದಿನ ಲೇಖನಮಗಳು ತಂದೆಯೊಂದಿಗೆ ಯಾವುದೇ ಸಂಬಂಧವನ್ನು ಉಳಿಸಿಕೊಳ್ಳಲು ಬಯಸದಿದ್ದರೆ ಆತನಿಂದ ಹಣ ಪಡೆಯಲು ಅರ್ಹಳಲ್ಲ: ಸುಪ್ರೀಂ ಕೋರ್ಟ್
ಮುಂದಿನ ಲೇಖನಜೇಮ್ಸ್ ಚಿತ್ರದ ನೆನಪಿಗಾಗಿ ಅಭಿಮಾನಿಗಳಿಂದ ಕೀ ಚೈನ್ ವಿತರಣೆ