ಮೈಸೂರು: ಸುಲಿಗೆ, ದ್ವಿ ಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಆಲನಹಳ್ಳಿ ಠಾಣೆ ಪೊಲೀಸರು ಅವರಿಂದ 5,05,000 ಲಕ್ಷ ರೂ. ಮೌಲ್ಯದ 6 ದ್ವಿ ಚಕ್ರ ವಾಹನ, 30 ಗ್ರಾಂ ಚಿನ್ನದ ಸರ ಹಾಗೂ 1 ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.
ಆಲನಹಳ್ಳಿ ಪೊಲೀಸರು ಜ.16 ಹಾಗೂ 17 ರಂದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರನ್ನು ವಿಚಾರಣೆ ಮಾಡಿದ ವೇಳೆ ಮೈಸೂರು ನಗರ, ಮೈಸೂರು ಜಿಲ್ಲೆ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಸುಲಿಗೆ ಮತ್ತು ದ್ವಿ ಚಕ್ರ ವಾಹನಗಳ ಕಳ್ಳತನ ಮಾಡಿರುವ ಬಗ್ಗೆ ತಿಳಿದುಬಂದಿದೆ.
ಒಟ್ಟು 8 ಪ್ರಕರಣಗಳಿಗೆ ಸಂಬಂಧಪಟ್ಟಂತೆ ಒಟ್ಟು ಅವರಿಂದ 5,05,000 ಲಕ್ಷ ರೂ. ಮೌಲ್ಯದ 6 ದ್ವಿ ಚಕ್ರ ವಾಹನ, 30 ಗ್ರಾಂ ಚಿನ್ನದ ಸರ ಹಾಗೂ 1 ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ 02 ದ್ವಿಚಕ್ರ ವಾಹನಗಳು ಮತ್ತು ಚಾಕುವನ್ನು ವಶಪಡಿಸಿಕೊಂಡಿದ್ದಾರೆ.
ಈ ಪತ್ತೆ ಕಾರ್ಯದಿಂದ ಆಲನಹಳ್ಳಿ ಪೊಲೀಸ್ ಠಾಣೆಯ 2 ಸುಲಿಗೆ, 3 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳು, ಮೈಸೂರು ದಕ್ಷಿಣ ಪೊಲೀಸ್ ಠಾಣೆಯ 1, ತಿ.ನರಸೀಪುರ ಪೊಲೀಸ್ ಠಾಣೆಯ 1, ಶ್ರೀರಂಗಪಟ್ಟಣ ಪೊಲೀಸ್ ಠಾಣೆಯ 1 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳು ಪತ್ತೆಯಾಗಿರುತ್ತವೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿಸಿಪಿ ಗೀತಪ್ರಸನ್ನ ಅವರ ಮಾರ್ಗದರ್ಶನದಲ್ಲಿ ದೇವರಾಜ ವಿಭಾಗದ ಎಸಿಪಿ ಎಂ.ಎನ್.ಶಶಿಧರ್ ಅವರ ನೇತೃತ್ವದಲ್ಲಿ ಆಲನಹಳ್ಳಿ ಇನ್ ಸ್ಪೆಕ್ಟರ್ ಬಿ.ಎಸ್.ರವಿಶಂಕರ್, ಪಿಎಸ್ಐ ಟಿ.ಎಸ್.ಮಹೇಂದ್ರ, ಎಎಸ್ಐ ಎಂ.ಎಸ್.ಲಕ್ಷ್ಮೀನಾರಾಯಣ ಹಾಗೂ ಸಿಬ್ಬಂದಿಗಳಾದ ಬಿ.ಕೆ.ಚೌಡಪ್ಪ, ಟಿ.ಸತೀಶ್, ಹೆಚ್.ಎಸ್.ಚೇತನ್, ಸುಹೇಲ್, ಬಿ.ಆರ್.ಭಾಸ್ಕರ್, ಎಲ್.ಗುಣೇಶ್, ಬಿ.ಹೆಚ್.ರಂಗನಾಥ ಅವರು ಮಾಡಿರುತ್ತಾರೆ. ಪೊಲೀಸರ ಪತ್ತೆ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ಶ್ಲಾಘಿಸಿದ್ದಾರೆ.