ಮೈಸೂರು: ಕಳೆದ ಕೆಲವು ವರ್ಷಗಳಿಂದ ಔಷಧೀಯ ವಲಯದಲ್ಲಿ ಡೇಟಾ ಡಿಜಿಟಲೀಕರಣದಲ್ಲಿ ಕೃತಕ ಬುದ್ಧಿಮತ್ತೆ ಅನಿವಾರ್ಯ ಎಂಬಂತಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.
ಮಾನಸ ಗಂಗೋತ್ರಿಯ ಜೆನೆಟಿಕ್ಸ್ ಮತ್ತು ಜೆನೋಮಿಕ್ಸ್ ವಿಭಾಗದ ವತಿಯಿಂದ ಜೈವಿಕ ಮಾಹಿತಿ ಸಲಕರಣೆ ಹಾಗೂ ತಂತ್ರಗಳ ಬಗ್ಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಹೆಚ್ಚುತ್ತಿದೆ. ವಿಶೇಷವಾಗಿ ಔಷಧೀಯ ಉದ್ಯಮದಲ್ಲೂ ಗಮನಾರ್ಹ ಬದಲಾವಣೆ ಆಗಿದೆ. ಇಂದು ಡ್ರಗ್ ಡಿಸ್ಕವರಿ ಮತ್ತು ಡೆವಲಪ್ ಮೆಂಟ್ ನಲ್ಲಿ ಕೃತಕ ಬುದ್ಧಿಮತ್ತೆಯನ್ನು ಹೆಚ್ಚು ಅವಲಂಬಿಸಲಾಗುತ್ತಿದೆ. ಔಷಧೀಯ ಉತ್ಪಾದಕತೆ ಮತ್ತು ಕ್ಲಿನಿಕಲ್ ಪ್ರಯೋಗಗಳು ಇದರಿಂದ ಸುಧಾರಣೆ ಕಾಣುತ್ತಿವೆ. ಇತರ ಅನುಕೂಲಗಳ ಪೈಕಿ ಇದು ಕಡಿಮೆ ಅವಧಿಯಲ್ಲಿ ಗುರಿಗಳನ್ನು ಸಾಧಿಸುತ್ತಿರುವುದೇ ಇದರ ಪ್ರಾಮುಖ್ಯತೆ ಹೆಚ್ಚಳಕ್ಕೆ ಕಾರಣವಾಗಿದೆ. ಗಮನಾರ್ಹ ಉದಾಹರಣೆಯೆಂದರೆ ಡ್ರಗ್ ಅನ್ವೇಷಣೆಯು ಈ ಬಾರಿಯ ಐಬಿಎಂ ಶೃಂಗಸಭೆಯಲ್ಲಿ ವಿಶ್ವದ ಗಮನ ಸೆಳೆದಿತ್ತು. ಸೂಪರ್ ಕಂಪ್ಯೂಟರ್ ಸಿಮ್ಯುಲೇಶನ್ ಗಳನ್ನು ಚಲಾಯಿಸಲು ಹಾಗೂ ಕೊರೊನಾ ವೈರಸ್ ಪರಿಣಾಮ ಅರಿಯಲು ಬಯೋ ಇನ್ಫರ್ಮ್ಯಾಟಿಕ್ಸ್ ಕೋಡ್ ಅನ್ನು ಬಳಸಿಕೊಳ್ಳಲಾಗಿತ್ತು ಎಂದರು.
ಸಮಗ್ರ ಮತ್ತು ಅಂತರಶಿಸ್ತೀಯ ಜ್ಞಾನದೊಂದಿಗೆ ಹೊಸ ಪೀಳಿಗೆಯ ವಿದ್ಯಾರ್ಥಿಗಳು ಮತ್ತು ವಿಜ್ಞಾನಿಗಳನ್ನು ಸಿದ್ಧಪಡಿಸುವುದು ಇಂದಿನ ಅಗತ್ಯವಾಗಿದೆ. ಸುಧಾರಿತ ಆಪರೇಟಿಂಗ್ ಸಿಸ್ಟಂಗಳು, ಡೇಟಾಬೇಸ್ ಮತ್ತು ನೆಟ್ ವರ್ಕಿಂಗ್ ತಂತ್ರಜ್ಞಾನಗಳೊಂದಿಗೆ ಚಾಲಿತ ಆಧುನಿಕ ಬಯೋ ಇನ್ಫರ್ಮ್ಯಾಟಿಕ್ಸ್ ಸಂಪನ್ಮೂಲಗಳನ್ನು ಬಳಸುವ ಚಾಕಚಕ್ಯತೆ ಮಕ್ಕಳಿಗೆ ಹೇಳಿಕೊಡಬೇಕು. ಇತ್ತೀಚಿನ ಪ್ರಗತಿಗಳು ಜೈವಿಕ ವ್ಯವಸ್ಥೆಯನ್ನು ಅನ್ವೇಷಿಸಲು ಮತ್ತು ಡೇಟಾ ವಿಜ್ಞಾನದ ಶಕ್ತಿಯನ್ನು ಬಳಸುವುದು ಕರಗತವಾಗಬೇಕು ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ಬೆಂಗಳೂರಿನ ಇಂಡಿಯಾ ಆಪರೇಷನ್ಸ್ ಶ್ರೋಡಿಂಗರ್ ನ ಉಪಾಧ್ಯಕ್ಷ ರಘು ರಂಗಸ್ವಾಮಿ, ಜೆನೆಟಿಕ್ಸ್ ಮತ್ತು ಜೆನೋಮಿಕ್ಸ್ ನ ಸಂಚಾಲಕರಾದ ಡಾ.ಅಮೃತವಲ್ಲಿ ಸಿ. ಹಾಗೂ ವಿಭಾಗದ ಮುಖ್ಯಸ್ಥರಾದ ಡಾ.ಸುತ್ತೂರು ಮಾಲಿನಿ ಸೇರಿದಂತೆ ಇತರರು ಇದ್ದರು.