ಅತ್ರಿಯ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ಮಾರ್ಕಂಡೇಯಸಮಸ್ಯಾ ಪರ್ವ (ಅಧ್ಯಾಯ ೧೮೩) ದಲ್ಲಿ ಬರುತ್ತದೆ. ಬ್ರಾಹ್ಮಣರ ಮಹತ್ವವೇನೆಂದು ಯುಧಿಷ್ಠಿರನು ಕೇಳಿದಾಗ ಋಷಿ ಮಾರ್ಕಂಡೇಯನು ಈ ಕಥೆಯನ್ನು ಅವನಿಗೆ ಕಾಮ್ಯಕ ವನದಲ್ಲಿ ಹೇಳಿದನು.
ವೈನ್ಯ ಎಂಬ ಹೆಸರಿನ ರಾಜರ್ಷಿಯು ಅಶ್ವಮೇಧಯಾಗದ ದೀಕ್ಷೆಯಲ್ಲಿದ್ದನು. ಅಲ್ಲಿಗೆ ಅತ್ರಿಯು ವಿತ್ತವನ್ನು ಅರಸಿ ಹೋಗಲು ಬಯಸಿದನು. ಆದರೆ ಅವನು ವ್ಯಕ್ತಿಧರ್ಮದ ನಿದರ್ಶನದಂತೆ ಅಲ್ಲಿ ಹೋಗಲು ತನ್ನೊಂದಿಗೆ ತಾನೇ ಒಪ್ಪಿಕೊಳ್ಳಲಿಲ್ಲ. ಅದರ ಕುರಿತು ಯೋಚಿಸಿದ ಆ ಮಹಾತೇಜಸ್ವಿಯು ವನಕ್ಕೆ ಹೋಗಲು ನಿರ್ಧರಿಸಿದನು. ಅವನು ತನ್ನ ಧರ್ಮಪತ್ನಿಯನ್ನೂ ಮಕ್ಕಳನ್ನೂ ಕರೆದು ಅವರಿಗೆ ಹೇಳಿದನು: “ಅತ್ಯಂತ ಫಲವನ್ನೂ ಬಹಳ ನಿರುಪದ್ರವವನ್ನೂ ಹೊಂದಬೇಕೆಂದರೆ ಬೇಗನೆ ಅರಣ್ಯಕ್ಕೆ ಹೋಗುವುದೇ ಅಧಿಕ ಉತ್ತಮವಾದುದು ಎಂದು ನನಗನ್ನಿಸುತ್ತದೆ.”
ಧರ್ಮವನ್ನೇ ಅನುಸರಿಸುತ್ತಿದ್ದ ಅವನ ಪತ್ನಿಯು ಉತ್ತರಿಸಿದಳು: “ಮಹಾತ್ಮ ವೈನ್ಯನಲ್ಲಿಗೆ ಹೋಗಿ ಅವನಿಂದ ಬಹಳ ಧನವನ್ನು ಕೇಳು. ಯಜಮಾನನಾಗಿರುವ ಆ ರಾಜರ್ಷಿಯು ಕೇಳಿದವರಿಗೆ ಧನವನ್ನು ಕೊಡುತ್ತಾನೆ. ವಿಪ್ರರ್ಷೇ! ಅದನ್ನು ತೆಗೆದುಕೋ. ಬಹುಧನವನ್ನು ಸ್ವೀಕರಿಸಿ, ಭೃತ್ಯರು ಮತ್ತು ಮಕ್ಕಳಲ್ಲಿ ಸರಿಯಾಗಿ ವಿಭಜನೆ ಮಾಡಿ ನಿನಗಿಷ್ಟವಿದ್ದಲ್ಲಿಗೆ ಹೋಗು. ಇದೇ ಧರ್ಮವಿದರು ಹೇಳುವ ಪರಮ ಧರ್ಮ.”
ಅತ್ರಿಯು ಹೇಳಿದನು: “ಮಹಾಭಾಗೇ! ವೈನ್ಯನು ಧರ್ಮಸಂಯುಕ್ತ ಮತ್ತು ಸತ್ಯವ್ರತಸಮನ್ವಿತನೆಂದು ಮಹಾತ್ಮ ಗೌತಮನು ನನಗೆ ಹೇಳಿದ್ದನು. ಆದರೆ ಅಲ್ಲಿ ನನ್ನ ದ್ವೇಷವನ್ನಿಟ್ಟಿರುವ ದ್ವಿಜರಿದ್ದಾರೆ ಎಂದೂ ಗೌತಮನು ಹೇಳಿದ್ದನು. ಆದುದರಿಂದ ನಾನು ಅಲ್ಲಿಗೆ ಹೋಗಬಾರದೆಂದು ನಿರ್ಧರಿಸಿದ್ದೇನೆ. ಅಲ್ಲಿ ನಾನು ಎಷ್ಟೇ ಮಂಗಳಕರ, ಧರ್ಮಕಾಮಾರ್ಥಸಂಹಿತ ಮಾತುಗಳನ್ನಾಡಿದರೂ ಅವರು ಅದನ್ನು ಅನ್ಯಥಾ ನಿರರ್ಥಕವೆಂದು ಹೇಳುತ್ತಾರೆ. ಆದರೆ ನಿನ್ನ ಮಾತುಗಳು ನನಗೆ ಹಿಡಿಸುತ್ತವೆ. ಹೋಗುತ್ತೇನೆ. ವೈನ್ಯನು ನನಗೆ ಗೋವುಗಳನ್ನೂ ಅತಿದೊಡ್ಡ ಅರ್ಥಸಂಚಯವನ್ನೂ ಕೊಡುತ್ತಾನೆ.”
ಹೀಗೆ ಹೇಳಿ ಆ ಮಹಾತಪಸ್ವಿಯು ವೈನ್ಯನ ಯಜ್ಞಕ್ಕೆ ಹೋದನು. ಯಜ್ಞಾಯತನವನ್ನು ತಲುಪಿ ಅತ್ರಿಯು ಆ ನೃಪನನ್ನು ಪ್ರಶಂಸಿಸಿದನು: “ರಾಜನ್! ವೈನ್ಯ! ನೀನು ಭೂಮಿಯ ಈಶ. ನೀನು ನೃಪರಲ್ಲಿ ಪ್ರಥಮ. ನಿನ್ನನ್ನು ಮುನಿಗಣವು ಸ್ತುತಿಸುತ್ತದೆ. ಯಕೆಂದರೆ ನಿನ್ನ ಹೊರತಾದ ಧರ್ಮವಿದುವು ಇಲ್ಲ.”
ಆಗ ಅಲ್ಲಿದ್ದ ಓರ್ವ ಮಹಾತಪಸ್ವಿ ಗೌತಮ ಋಷಿಯು ಸಿಟ್ಟಿನಿಂದ ಅವನಿಗೆ ಹೇಳಿದನು: “ಅತ್ರೇ! ಹಾಗೆ ಪುನಃ ಮಾತನಾಡಬೇಡ! ನಿನಗೆ ಸರಿಯಾದ ಪ್ರಜ್ಞೆಯಿಲ್ಲ! ನಮಗೆ ಪ್ರಜಾಪತಿ ಮಹೇಂದ್ರನೇ ಪ್ರಥಮ ಸ್ಥಾನದಲ್ಲಿದ್ದಾನೆ.”
ಆಗ ಅತ್ರಿಯೂ ಕೂಡ ಗೌತಮನಿಗೆ ಉತ್ತರಿಸಿದನು: “ಪ್ರಜಾಪತಿ ಇಂದ್ರನು ಹೇಗೋ ಹಾಗೆ ಇವನೂ ನಮಗೆ ಕೊಡುವವನು. ನೀನೇ ಮೋಹದಿಂದ ಮೋಹಿತನಾಗಿರುವೆ. ನಿನ್ನಲ್ಲಿ ಪ್ರಜ್ಞೆಯೇ ಇಲ್ಲ.”
ಗೌತಮನು ಹೇಳಿದನು: “ನನಗೆ ತಿಳಿದಿದೆ. ನಾನು ಮೋಹಿತನಾಗಿಲ್ಲ. ಮಾತನಾಡಲು ಮುನ್ನುಗ್ಗುವ ನೀನು ಮೋಹಿತನಾಗಿದ್ದೀಯೆ. ಅವನನ್ನು ಭೇಟಿಮಾಡಿ ಅವನಿಂದ ಅಭ್ಯುದಯವನ್ನು ಪಡೆಯಬೇಕೆಂಬ ಒಂದೇ ಕಾರಣದಿಂದ ನೀನು ಅವನನ್ನು ಸ್ತುತಿಸುತ್ತಿದ್ದೀಯೆ. ನಿನಗೆ ಪರಮಧರ್ಮವು ತಿಳಿದಿಲ್ಲ ಮತ್ತು ಅದರ ಪ್ರಯೋಜನವೂ ನಿನಗೆ ಗೊತ್ತಿಲ್ಲ. ನೀನೊಬ್ಬ ಮೂಢ ಬಾಲಕ. ನೀನು ಹೇಗೆ ವೃದ್ಧನಾದೆಯೋ!”
ಮುನಿಗಳು ನೋಡುತ್ತಿದ್ದಂತೆಯೇ ಅವರೀರ್ವರು ಅಲ್ಲಿ ನಿಂತು ವಾದಿಸುತ್ತಿರುವಾಗ ಆ ಯಜ್ಞಕ್ಕೆ ಬಂದು ಸೇರಿದ್ದವರು ಕೇಳತೊಡಗಿದರು: “ಇವರಿಬ್ಬರು ಹೇಗೆ ಇಲ್ಲಿ ಪ್ರವೇಶಿಸಿದರು? ವೈನ್ಯನ ಈ ಸಂಸದಿಗೆ ಯಾರು ಇವರಿಗೆ ಪ್ರವೇಶವನ್ನು ಕೊಟ್ಟರು? ಯಾವ ಕಾರಣದಿಂದ ಈ ಈರ್ವರು ಜೋರಾಗಿ ಕೂಗುತ್ತಾ ವಾದಿಸುತ್ತಿದ್ದಾರೆ?”
ಆಗ ಪರಮಧರ್ಮಾತ್ಮ ಸರ್ವಧರ್ಮವಿದು ಕಾಶ್ಯಪನು ವಾದಿಸುತ್ತಿರುವ ಅವರಿಬ್ಬರಿಗೂ ಬೆರಳು ತೋರಿಸಿ ಹೇಳಿದನು. ಗೌತಮನು ಆ ಮುನಿಸತ್ತಮ ಸದಸ್ಯರಿಗೆ ಹೇಳಿದನು: “ದ್ವಿಜಪುಂಗವರೇ! ಈಗ ನಮ್ಮಿಬ್ಬರ ನಡುವೆ ಹುಟ್ಟಿರುವ ಪ್ರಶ್ನೆಯ ಕುರಿತು ಕೇಳಿ. ವೈನ್ಯನು ವಿಧಾತನೆಂದು ಅತ್ರಿಯು ಹೇಳುತ್ತಿದ್ದಾನೆ. ಆದರೆ ನನಗೆ ಅದರಲ್ಲಿ ಮಹಾ ಸಂಶಯವಿದೆ.”
ಇದನ್ನು ಕೇಳಿದ ತಕ್ಷಣವೇ ಆ ಮಹಾತ್ಮ ಮುನಿಗಳು ಆ ಸಂಶಯವನ್ನು ಬಿಡಿಸಲು ಧರ್ಮಜ್ಞ ಸತತ್ಕುಮಾರನಲ್ಲಿಗೆ ಧಾವಿಸಿದರು. ಯಥಾವತ್ತಾಗಿ ಹೇಳಿದ ಅವರ ಮಾತನ್ನು ಕೇಳಿ ಆ ಮಹಾತಪಸ್ವಿಯು ಧರ್ಮಾರ್ಥಸಂಹಿತವಾದ ಈ ಮಾತಿನಿಂದ ಉತ್ತರಿಸಿದನು: “ಬ್ರಾಹ್ಮಣತ್ವವು ಕ್ಷತ್ರಿಯ ಸಹಿತವಾಗಿದೆ ಮತ್ತು ಕ್ಷತ್ರಿಯವು ಬ್ರಾಹ್ಮಣತ್ವದ ಜೊತೆಯಿದೆ. ರಾಜನೇ ಪರಮ ಧರ್ಮ ಮತ್ತು ಪ್ರಜೆಗಳ ಒಡೆಯನೂ ಹೌದು. ಅವನೇ ಶಕ್ರ, ಅವನೇ ಶುಕ್ರ, ಅವನೇ ಧಾತ ಮತ್ತು ಅವನೇ ಬೃಹಸ್ಪತಿ. ಕ್ಷತ್ರಿಯ ಭೂಪತಿ ನೃಪನು ಪ್ರಜಾಪತಿ, ವಿರಾಟ ಮತ್ತು ಸಾಮ್ರಾಟ. ಈ ಶಬ್ಧಗಳಿಂದ ಕರೆಯಲ್ಪಡುವವನು ಸ್ತುತಿಗೆ ಏಕೆ ಅರ್ಹನಲ್ಲ? ರಾಜನನ್ನು ಪುರಾತನ ಯೋನಿಯೆಂದೂ, ಯುದ್ಧದಲ್ಲಿ ಜಯಶೀಲನೆಂದೂ, ಆಕ್ರಮಣಮಾಡುವವನೆಂದೂ, ಸಂತೋಷವನ್ನು ನೀಡುವವನೆಂದೂ, ಅಭಿವೃದ್ಧಿಕಾರನೆಂದೂ, ಸ್ವರ್ಗದ ಮಾರ್ಗದರ್ಶಕನೆಂದೂ, ಜಯವುಳ್ಳವನೆಂದೂ, ವಿಶಾಲ ಪ್ರಶಾಸಕನೆಂದೂ, ಸಿಟ್ಟಿನಲ್ಲಿ ಸತ್ಯನೂ, ಯುದ್ಧದಲ್ಲಿ ಉಳಿಯುವವನೂ, ಮತ್ತು ಸತ್ಯಧರ್ಮಪ್ರವರ್ತಕನೆಂದೂ ಕರೆಯುತ್ತಾರೆ. ಅಧರ್ಮದ ಭೀತಿಯಿಂದ ಋಷಿಗಳು ಕ್ಷತ್ರಿಯರಲ್ಲಿ ಬಲವನ್ನು ಅಡವಿಟ್ಟಿದ್ದಾರೆ. ಆದಿತ್ಯನು ದಿವಿಯಲ್ಲಿ ದೇವತೆಗಳ ಕತ್ತಲೆಯನ್ನು ತನ್ನ ತೇಜಸ್ಸಿನಿಂದ ಕಳೆಯುತ್ತಾನೆ. ಹಾಗೆಯೇ ನೃಪತಿಯು ಈ ಭೂಮಿಯಲ್ಲಿ ಅಧರ್ಮವನ್ನು ಕ್ರೂರನಾಗಿ ಕಳೆಯುತ್ತಾನೆ. ಆದುದರಿಂದ ಶಾಸ್ತ್ರಪ್ರಮಾಣದ ದರ್ಶನಗಳಿಂದ ರಾಜನ ಪ್ರಧಾನತ್ವವನ್ನು ತೋರಿಸಲಾಗಿದೆ. ಮತ್ತು ಯಾವಪಕ್ಷವು ರಾಜನ ಪರವಾಗಿ ಮಾತನಾಡಿದೆಯೋ ಅದೇ ಸಾಧಿಸಿದೆ.”
ಅನಂತರ ಮಹಾಮನ ರಾಜನು ತನ್ನ ಪಕ್ಷವೇ ಗೆದ್ದಿದೆಯೆಂದು ಸಂತೋಷದಿಂದ ತನ್ನನ್ನು ಸ್ತುತಿಸಿದ ಅತ್ರಿಗೆ ಹೇಳಿದನು: “ವಿಪ್ರರ್ಷೇ! ಇದಕ್ಕೆ ಮೊದಲು ನಾನು ಸರ್ವಮನುಷ್ಯರಲ್ಲಿಯೂ ಹಿರಿಯವನೆಂದೂ, ಸರ್ವದೇವರ ಸಮನೆಂದೂ ಶ್ರೇಷ್ಠನೆಂದೂ ನೀನು ಹೇಳಿದೆ. ಆದುದರಿಂದ ನಾನು ನಿನಗೆ ಅಧಿಕವಾದ ವಿವಿಧ ಸಂಪತ್ತನ್ನೂ, ಸಹಸ್ರ ಸುವರ್ಣಗಳಿಂದ ಅಲಂಕೃತರಾದ ಯುವದಾಸಿಯರನ್ನೂ, ಹತ್ತು ಕೋಟಿ ಬಂಗಾರದ ನಾಣ್ಯಗಳನ್ನೂ ಹತ್ತು ಭಾರದಷ್ಟು ಆಭರಣಗಳನ್ನೂ ಕೊಡುತ್ತೇನೆ. ಯಾಕೆಂದರೆ ನೀನು ಸರ್ವಜ್ಞನೆಂದು ನನ್ನ ಅಭಿಪ್ರಾಯ.”
ಆಗ ಮಹಾತ್ಮ ಅತ್ರಿಯು ಅವೆಲ್ಲವನ್ನೂ ಯಥಾವಿಧಿಯಾಗಿ ಸ್ವೀಕರಿಸಿದನು ಮತ್ತು ಆ ತೇಜಸ್ವಿ ಮಹಾತಪಸ್ವಿಯು ತನ್ನ ಮನೆಗೆ ಹಿಂದಿರುಗಿದನು. ಸಂತೋಷದಿಂದ ಆ ಪ್ರಯತಾತ್ಮನು ತನ್ನ ಪುತ್ರರಿಗೆ ಅದನ್ನು ಸಮವಾಗಿ ವಿಂಗಡಿಸಿ ಕೊಟ್ಟು ವನಕ್ಕೆ ತೆರಳಿ ತಪಸ್ಸಿನಲ್ಲಿ ನಿರತನಾದನು.