ಮಹಾರಾಷ್ಟ್ರ: ಆಟೋ ರಿಕ್ಷಾಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಆಟೋದಲ್ಲಿದ್ದ ಮಹಿಳೆ ಸಜೀವ ದಹನವಾಗಿರುವ ಘಟನೆ ಮಹಾರಾಷ್ಟ್ರದ ಥಾಣೆ ನಗರದಲ್ಲಿ ಬುಧವಾರ (ಮೇ 3 ರಂದು) ನಡೆದಿರುವುದು ವರದಿಯಾಗಿದೆ.
ಆಟೋ ರಿಕ್ಷಾದಲ್ಲಿ ಥಾಣೆ ನಗರದಿಂದ ಭಾಯಂದರ್ ಕಡೆಗೆ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಆಟೋ ರಸ್ತೆಯ ವಿಭಜಕಕ್ಕೆ ಹೋಗಿ ಢಿಕ್ಕಿ ಹೊಡೆದಿದೆ. ಪರಿಣಾಮ ಆಟೋ ರಿಕ್ಷಾಕ್ಕೆ ಬೆಂಕಿ ಹೊತ್ತಿಕೊಂಡಿದೆ. ಮಹಿಳೆ ಆಟೋದಲ್ಲೇ ಇದ್ದ ಕಾರಣ ಸಜೀವ ದಹನವಾಗಿದ್ದಾರೆ. ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
ಸಂಪೂರ್ಣ ಸುಟ್ಟು ಹೋದ ಕಾರಣ ಮಹಿಳೆಯ ಗುರುತು ಇದುವರೆಗೆ ಸಿಕ್ಕಿಲ್ಲ. ಘಟನೆಯಲ್ಲಿ ಆಟೋ ಚಾಲಕ ರಾಜೇಶ್ ಕುಮಾರ್ (45) ಅವರಿಗೆ ಸುಟ್ಟ ಗಾಯವಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಥಾಣೆ ಮುನ್ಸಿಪಲ್ ಕಾರ್ಪೊರೇಶನ್ನ ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶ (RDMC) ಮುಖ್ಯಸ್ಥ ಅವಿನಾಶ್ ಸಾವಂತ್ ತಿಳಿಸಿದ್ದಾರೆ.