ವಿಜಯಪುರ: ಪಟ್ಟಣದಲ್ಲಿ ಬೇಕರಿ ಮಾಲೀಕನೊಬ್ಬನನ್ನು ಕಿಡ್ನಾಪ್ ಮಾಡಿದ್ದಲ್ಲದೇ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಇಂಡಿಯಲ್ಲಿ ನಡೆದಿದೆ.
ರಾಜಸ್ಥಾನ ಮೂಲದ ಮಾನ್ಸಿಂಗ್ ಕಿಡ್ನಾಪ್ ಆಗಿ ಹಲ್ಲೆಗೊಳಗಾದವರು. ಕಾರ್ಯಾಚರಣೆ ನಡೆಸಿದ ಪೊಲೀಸರು ಮಾನ್ಸಿಂಗ್ರನ್ನು ರಕ್ಷಿಸಿ ಇಂಡಿ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ಹಿನ್ನೆಲೆ: ನಿನ್ನೆ ಸಂಜೆ 6.30 ರ ಸುಮಾರಿನಲ್ಲಿ ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಮಾನ್ಸಿಂಗ್ರ ಬೇಕರಿ ಅಂಗಡಿಗೆ ಬಂದ ದುಷ್ಕರ್ಮಿಗಳು ಸ್ವೀಟ್ ಆರ್ಡರ್ ಕೊಡುವ ನೆಪದಲ್ಲಿ ಮಾನ್ಸಿಂಗ್ರನ್ನು ಕಾರಿನ ಹತ್ತಿರ ಕರೆದಿದ್ದಾರೆ. ಹತ್ತಿರ ಬಂದ ಮಾನ್ಸಿಂಗ್ರನ್ನು ಕಾರಿನೊಳಗೆ ಎಳೆದುಕೊಂಡು ಅಪಹರಣ ಮಾಡಿದ್ದಾರೆ.
ಬಳಿಕ ಮಾನ್ಸಿಂಗ್ರ ಕುಟುಂಬಸ್ಥರಿಗೆ ಕರೆ ಮಾಡಿ 50 ಲಕ್ಷ ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಕುಟುಂಬಸ್ಥರು 20 ಲಕ್ಷ ರೂಪಾಯಿ ಕೊಡುವುದಾಗಿ ಒಪ್ಪಿಕೊಂಡಿದ್ದಾರೆ. ಝಳಕಿ ಬಳಿ ಬಂದು ಹಣ ನೀಡುವಂತೆ ಅಪಹರಣಕಾರರು ಸೂಚಿಸಿದ್ದಾರೆ.
ಪೊಲೀಸರ ಕಾರ್ಯಾಚರಣೆ: ಬೇಕರಿ ಮಾಲೀಕ ಮಾನ್ಸಿಂಗ್ರ ಅಪಹರಣದ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ಝಳಕಿ ಬಳಿ 20 ಲಕ್ಷ ನೀಡುವಂತೆ ಬೇಡಿಕೆ ಇಟ್ಟ ಬಗ್ಗೆ ತಿಳಿಸಿದ್ದಾರೆ. ಅದರಂತೆ ಅಪಹರಣಕಾರರ ಸೆರೆ ಹಿಡಿಯಲು ಪೊಲೀಸರು ಯೋಜನೆ ರೂಪಿಸಿದ್ದಾರೆ. 20 ಲಕ್ಷ ರೂಪಾಯಿ ಸಮೇತ ಕುಟುಂಬಸ್ಥರ ಜೊತೆಗೆ ಪೊಲೀಸರು ಅಡಗಿ ಕುಳಿತಿದ್ದರು.
ಝಳಕಿ ಬಳಿ ಮಾನ್ಸಿಂಗ್ ಕುಟುಂಬಸ್ಥರ ಬಳಿ ಹಣ ಪಡೆಯಲು ದುಷ್ಕರ್ಮಿಗಳು ಬಂದಾಗ ಪೊಲೀಸರನ್ನು ಗಮನಿಸಿ ಪರಾರಿಯಾಗಿದ್ದು, ಕಾರು ಬೆನ್ನತ್ತಿದ ಪೊಲೀಸರು ಲೋಣಿ ಬಳಿ ಅಪಹರಣಕಾರರನ್ನು ಬಂಧಿಸಿದ್ದಾರೆ.