ಮನೆ ಕಾನೂನು ಬ್ಯಾಸ್ಕೆಟ್ ಬಾಲ್ ಒಕ್ಕೂಟದ ಆಡಳಿತಾಧಿಕಾರಿ ಆಗದಂತೆ ಬೌನ್ಸರ್ ಗಳು ತಡೆ: ದೆಹಲಿ ಹೈಕೋರ್ಟ್ ಗೆ ನ್ಯಾ....

ಬ್ಯಾಸ್ಕೆಟ್ ಬಾಲ್ ಒಕ್ಕೂಟದ ಆಡಳಿತಾಧಿಕಾರಿ ಆಗದಂತೆ ಬೌನ್ಸರ್ ಗಳು ತಡೆ: ದೆಹಲಿ ಹೈಕೋರ್ಟ್ ಗೆ ನ್ಯಾ. ಕೃಷ್ಣಭಟ್ ದೂರು

0

ಭಾರತೀಯ ಬ್ಯಾಸ್ಕೆಟ್ ಬಾಲ್ ಒಕ್ಕೂಟದ (ಬಿಎಫ್ ಐ) ಚುನಾವಣೆ ನಡೆಸುವುದಕ್ಕಾಗಿ ದೆಹಲಿ ಹೈಕೋರ್ಟ್ ನಿಂದ ನೇಮಕಗೊಂಡಿದ್ದ ತಮ್ಮನ್ನು ಬೌನ್ಸರ್ ಗಳು ಹಾಗೂ ಭದ್ರತಾ ಸಿಬ್ಬಂದಿಯನ್ನು ನೇಮಿಸುವ ಮೂಲಕ ಒಕ್ಕೂಟದ ಈ ಹಿಂದಿನ ಪದಾಧಿಕಾರಿಗಳು ಬಿಎಫ್ ಐ ಕಚೇರಿ ಪ್ರವೇಶಿಸಿದಂತೆ ತಡೆಹಿಡಿಯುತ್ತಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ ಕೃಷ್ಣಭಟ್ ಅವರು ದೆಹಲಿ ಉಚ್ಚ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ.

Join Our Whatsapp Group

[ಆಡಳಿತಾಧಿಕಾರಿ ಮತ್ತು ಕೆ ಗೋವಿಂದರಾಜ್ ನಡುವಣ ಪ್ರಕರಣ].

ಪದಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡುವಂತೆ ಕೋರಿ ನ್ಯಾಯಮೂರ್ತಿ ಭಟ್ ಸಲ್ಲಿಸಿದ್ದ ಅರ್ಜಿ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.

“ಮೇ 2, 2023 ರಂದು ನೀಡಿದ ಆದೇಶ ಪಾಲಿಸಬೇಕಿತ್ತು. ಪ್ರತಿವಾದಿಗಳಿಗೆ ನೋಟಿಸ್ ನೀಡಿ. ಜೂನ್ 1ರಂದು ನೋಟಿಸ್ ಗೆ ಪ್ರತಿಕ್ರಿಯಿಸಬೇಕು” ಎಂದು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಸೂಚಿಸಿದ್ದಾರೆ.

ಹೈಕೋರ್ಟ್ ಮೇ 2ರಂದು ಹೊರಡಿಸಿದ ಆದೇಶದನ್ವಯ ಆಡಳಿತಾಧಿಕಾರಿ ನ್ಯಾ. ಭಟ್ ಅವರು ಚೆಕ್ ಪುಸ್ತಕ, ಬ್ಯಾಂಕ್ ಪಾಸ್ಬುಕ್ ಸೇರಿದಂತೆ ಎಲ್ಲಾ ಕಚೇರಿ ದಾಖಲೆಗಳನ್ನು ಕೂಡಲೇ ತಮಗೆ ಸಲ್ಲಿಸುವಂತೆ ಪದಾಧಿಕಾರಿಗಳಿಗೆ ಆದೇಶಿಸಿದ್ದರು. ಪ್ರಕರಣ ಇತ್ಯರ್ಥವಾಗುವವರೆಗೆ ಬಿಎಫ್ ಐ ಕಚೇರಿ ಯಾವುದೇ ಚೆಕ್ ನೀಡಬಾರದು ಅಥವಾ ತಮ್ಮ ಅನುಮತಿ ಇಲ್ಲದೇ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಕೂಡ ಅವರು ಸೂಚಿಸಿದ್ದರು ಎಂಬುದಾಗಿ ವಕೀಲ ಅಮನ್ ಹಿಂಗೋರನಿ ಅವರ ಮೂಲಕ ಸಲ್ಲಿಸಲಾದ ಮನವಿಯಲ್ಲಿ ತಿಳಿಸಲಾಗಿದೆ. 

ಆದರೆ ನ್ಯಾಯಮೂರ್ತಿಗಳು ಬಿಎಫ್ ಐ ಕಚೇರಿ ಪ್ರವೇಶಿಸಲು ಮುಂದಾದಾಗ ಒಕ್ಕೂಟದ ಈ ಹಿಂದಿನ ಪದಾಧಿಕಾರಿಗಳು ಭಾರಿ ಭದ್ರತೆ ಕಲ್ಪಿಸಿ, ಬೌನ್ಸರ್ಗಳನ್ನು ನಿಯೋಜಿಸಿದರು. ಆ ಮೂಲಕ ಕಚೇರಿ ಪ್ರವೇಶಿದಂತೆ ನಿರ್ಬಂಧ ಹೇರಲಾಯಿತು. ಯಾರನ್ನೂ ಕಚೇರಿಯ ಒಳಗೆ ಬಿಡುತ್ತಿರಲಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಇದರಿಂದಾಗಿ, ದೆಹಲಿ ಹೈಕೋರ್ಟ್ ಮೇ 2 ರಂದು ನೀಡಿದ್ದ ತೀರ್ಪಿನಂತೆ ಒಕ್ಕೂಟಕ್ಕೆ ಹೊಸದಾಗಿ ಚುನಾವಣೆ ನಡೆಸಲು ಕೂಡ ಅಡ್ಡಿ ಉಂಟಾಗಿದೆ ಎಂದು ಅರ್ಜಿಯಲ್ಲಿ  ದೂರಲಾಗಿದೆ.

ಈ ಹಿನ್ನೆಲೆಯಲ್ಲಿ ನ್ಯಾಯಾಲಯ ನೇಮಿಸಿದ ಆಡಳಿತಾಧಿಕಾರಿ ಜೊತೆ  ಸಹಕರಿಸಬೇಕು ಎಂದು ಪದಾಧಿಕಾರಿಗಳಿಗೆ ನ್ಯಾಯಾಲಯ ಆದೇಶಿಸಿದ್ದು  ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಹಿಂದಿನ ಲೇಖನಮೂರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆ
ಮುಂದಿನ ಲೇಖನದ.ಆಫ್ರಿಕಾ, ನಮೀಬಿಯಾದಿಂದ ಭಾರತಕ್ಕೆ ಸ್ಥಳಾಂತರಿಸಿದ್ದ ಚೀತಾ ಮರಿ ಸಾವು