ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ವೇಳೆ ಮತದಾರರು ಮತಗಟ್ಟೆಯೊಳಗೆ ಮೊಬೈಲ್ ಫೋನ್ ಕೊಂಡೊಯ್ಯುವುದನ್ನು ನಿಷೇಧಿಸಿ ಭಾರತೀಯ ಚುನಾವಣಾ ಆಯೋಗ (ಇಸಿಐ) ಹೊರಡಿಸಿದ ಸುತ್ತೋಲೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ಸಾರ್ವತ್ರಿಕ ಮತ್ತು ಉಪಚುನಾವಣೆಗಳ ಸಮಯದಲ್ಲಿ ಮತದಾನ ಕೇಂದ್ರಗಳ ಹೊರಗಿನ ಚಟುವಟಿಕೆಗಳನ್ನು ನಿರ್ವಹಿಸಲು ಮಾರ್ಗಸೂಚಿಗಳನ್ನು ನೀಡಿದ್ದ ಭಾರತೀಯ ಚುನಾವಣಾ ಆಯೋಗದ ಅಧಿಸೂಚನೆ ಪ್ರಶ್ನಿಸಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಸದಸ್ಯ ಉಜಾಲಾ ಶ್ಯಾಂಬಿಹಾರಿ ಯಾದವ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಡಿ ಕೆ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಅಮಿತ್ ಬೋರ್ಕರ್ ಅವರಿದ್ದ ಪೀಠ ತಿರಸ್ಕರಿಸಿತು.
ಮತದಾರರು ತಮ್ಮ ಮೊಬೈಲ್ ಫೋನ್‌ಗಳನ್ನು ಮತಗಟ್ಟೆಗಳಿಗೆ ಕೊಂಡೊಯ್ಯಲು ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಅನುಮೋದಿಸಿದ ಡಿಜಿಲಾಕರ್ ಅಪ್ಲಿಕೇಶನ್ ಮೂಲಕ ಗುರುತಿನ ಚೀಟಿ ತೋರಿಸಿ ಮತದಾನ ಮಾಡಲು ಅನುಮತಿ ನೀಡುವಂತೆ ಅರ್ಜಿ ಕೋರಿತ್ತು.
ಚುನಾವಣಾ ಪ್ರಕ್ರಿಯೆಯಲ್ಲಿ ಡಿಜಿಲಾಕರ್ ಆ್ಯಪ್ ಮೂಲಕ ತಮ್ಮ ಗುರುತನ್ನು ಸಾಬೀತಪಡಿಸಲು ಮತದಾರರಿಗೆ “ನಿಹಿತ ಹಕ್ಕು” ಇಲ್ಲ ಎಂದು ಪೀಠ ತೀರ್ಪು ನೀಡಿದೆ.
“ಡಿಜಿಲಾಕರ್ ಚಂದಾದಾರರು ಒದಗಿಸುವ ಡಿಜಿಟಲ್ ಅಥವಾ ಎಲೆಕ್ಟ್ರಾನಿಕ್ ಸಹಿ ಮಾಡಿದ ದಾಖಲೆಗಳನ್ನು ಭೌತಿಕ ದಾಖಲೆಗಳಂತೆಯೇ ಪರಿಗಣಿಸಬೇಕು” ಎಂದು ಮಾಹಿತಿ ತಂತ್ರಜ್ಞಾನ ಕಾಯಿದೆ ಗುರುತಿಸುತ್ತದೆಯಾದರೂ ಇದು ಚುನಾವಣೆ ವೇಳೆ ಮತದಾರರ ಗುರುತು ಹಿಡಿಯಲು ಡಿಜಿಲಾಕರ್ ಬಳಸುವ ಹಕ್ಕನ್ನು ನೀಡುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಮತಗಟ್ಟೆಗಳ ಒಳಗೆ ಮೊಬೈಲ್ ಫೋನ್ ಗೆ ಅವಕಾಶ ನೀಡುವುದರಿಂದ ತಂತ್ರಜ್ಞಾನದ ದುರುಪಯೋಗವಾಗುತ್ತದೆ ಎಂದು ಇಸಿಐಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅಶುತೋಷ್ ಕುಂಭಕೋಣಿ ಅವರ ವಾದವನ್ನು ನ್ಯಾಯಾಲಯ ಪುರಸ್ಕರಿಸಿತು.
ಸಂವಿಧಾನದ ಅಡಿಯಲ್ಲಿ ಇಸಿಐ “ಸಮಗ್ರ ಅಧಿಕಾರ” ಹೊಂದಿದೆ. ಚುನಾವಣೆಗೆ ಸಂಬಂಧಿಸಿದಂತೆ 324 ನೇ ವಿಧಿಯ ಅಡಿಯಲ್ಲಿ ಇಸಿಐ ಕೈಗೊಂಡ ಕ್ರಮಗಳನ್ನು ಬೇರೆ ಯಾವುದೇ ಅಂಗ ಅಥವಾ ಕಾನೂನು ಅತಿಕ್ರಮಿಸಲು ಸಾಧ್ಯವಿಲ್ಲ ಎಂದು ಪೀಠ ಇದೇ ವೇಳೆ ತೀರ್ಪು ನೀಡಿದೆ.