ಬೆಂಗಳೂರು: ಗೊರೆಗುಂಟೆಪಾಳ್ಯ ಬಳಿಯ ಆಶ್ರಯ ನಗರ ಬಡಾವಣೆಯಲ್ಲಿ ಅಕ್ರಮ 200 ಮನೆಗಳನ್ನು ಬಿಡಿಎ ನೆಲಸಮ ಮಾಡಿದೆ. ಆ ಮೂಲಕ ಕಳೆದ ಮೂವತ್ತು, ನಲವತ್ತು ವರ್ಷಗಳಿಂದ ವಾಸ ಮಾಡುತ್ತಿದ್ದ ಮನೆಗಳು ಧರೆಗುರುಳಿವೆ.
ಜಾಗ ಖಾಲಿ ಮಾಡಿ ಅಂತಾ ಬಿಡಿಎ ಸೂಚನೆ ನೀಡಲಾಗಿತ್ತು. ಆದರೆ ಜಾಗ ಖಾಲಿ ಮಾಡದ ಹಿನ್ನೆಲೆ ತೆರವು ಕಾರ್ಯಾಚರಣೆ ಮಾಡಲಾಗಿದೆ. ಮನೆಗಳನ್ನು ಬಿಡಿಎ ನೆಲಸಮ ಮಾಡಿದಕ್ಕೆ ಸಾರ್ಮಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿ ಮನೆಯಲ್ಲಿ ವಯಸ್ಸಾದವರು, ಬಾಣಂತಿಗರು ಸೇರಿದಂತೆ ಅನಾರೋಗ್ಯ ಪೀಡಿತರಿದ್ದಾರೆ. ಈ ರೀತಿ ಮನೆ ನೆಲಸಮ ಮಾಡಿದರೆ ಅವರು ಎಲ್ಲಿಗೆ ಹೋಗಬೇಕು. ಇದಕ್ಕೆಲ್ಲಾ ಅಧಿಕಾರಿಗಳೇ ಉತ್ತರ ನೀಡಬೇಕು. ಜನರು ಕಣ್ಣೀರು ಹಾಕುತ್ತಿದ್ದಾರೆ. ಇದಕ್ಕೆಲ್ಲಾ ಪರಿಹಾರ ಕೊಡಬೇಕು ಎಂದು ಮಹಿಳೆಯೊಬ್ಬರು ಟಿವಿ9 ಎದುರು ಅಳಲು ತೊಡಿಕೊಂಡಿದ್ದಾರೆ.
ಇನ್ನು ಇತ್ತೀಚೆಗೆ ಬೆಳ್ಳಂಬೆಳಿಗ್ಗೆ ಬಿಡಿಎ ಜೆಸಿಬಿಗಳು ನಾಗರಬಾವಿ ಸಮೀಪದ ಚಂದ್ರ ಲೇಔಟ್ನಲ್ಲಿ ಕೂಡ ಜೆಸಿಬಿ ಘರ್ಜಿಸಿತ್ತು. ಅದರ ಎಫೆಕ್ಟ್ಗೆ ಅಂಗಡಿಗಳೆಲ್ಲ ನೆಲಸಮವಾಗಿದ್ದವು. ಬಿಡಿಎ ಜಾಗದಲ್ಲಿದ್ದ 40ಕ್ಕೂ ಹೆಚ್ಚು ಅಂಗಡಿ-ಮುಂಗಟ್ಟುಗಳನ್ನ ಬಿಡಿಎ ಕ್ಷಣಮಾತ್ರದಲ್ಲಿ ನೆಲಸಮ ಮಾಡಿದ್ದು, ಬಿಡಿಎ ಇತಿಹಾಸದಲ್ಲೇ ಅತಿದೊಡ್ಡ ಡೆಮಾಲಿಷನ್ ಮಾಡಿ ಕಟ್ಟಡಗಳನ್ನ ಧರೆಗುರುಳಿಸಿತ್ತು.
9 ಎಕರೆ 13 ಗುಂಟೆಯ ಬಿಡಿಎ ಜಾಗ. ತನ್ನದೇ ಜಾಗವನ್ನ ಖಾಸಗಿ ವ್ಯಕ್ತಿ ಕಬ್ಜ ಮಾಡಿದ್ದು ಕೋರ್ಟ್ ಅಂಗಳದಲ್ಲಿ ಹಲವು ವರ್ಷಗಳಿಂದ ಜಾಗ ವಿವಾದದಲ್ಲಿತ್ತು. ವಿವಾದದ ಭೂಮಿ ಬಿಡಿಎಗೆ ಸೇರಿದೆ ಅಂತಾ ಆದೇಶ ಬಂದಿದ್ದೆ ತಡ ಪೊಲೀಸರ ಜೊತೆ ಎಂಟ್ರಿಕೊಟ್ಟ ಬಿಡಿಎ ಅಧಿಕಾರಿಗಳು ಸರ್ವೇ ನಂಬರ್ 78ರಲ್ಲಿದ್ದ 9 ಎಕರೆ ಜಾಗದ 500 ಕೋಟಿ ರೂ. ಮೌಲ್ಯದ ಜಾಗವನ್ನ ತೆಕ್ಕೆಗೆ ಪಡೆದುಕೊಂಡಿದ್ದರು.