ಮುಂಬೈ: ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಅವರು ಐಪಿಎಲ್’ನ ಈ ಬಾರಿಯ ಆವೃತ್ತಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ.
ಇಡೀ ಟೂರ್ನಿಗೆ ಅಲಭ್ಯರಾಗುವ ವಿಷಯವನ್ನು ಅವರು ತಮ್ಮ ಫ್ರಾಂಚೈಸ್ ಕೋಲ್ಕತ್ತ ನೈಟ್ ರೈಡರ್ಸ್’ಗೆ ತಿಳಿಸಿದ್ದಾರೆ ಎಂದು ‘ಕ್ರಿಕ್‌ಇನ್ಫೊ’ ವೆಬ್‌ಸೈಟ್ ವರದಿ ಮಾಡಿದೆ.
ಅಂತರರಾಷ್ಟ್ರೀಯ ಪಂದ್ಯಗಳು ಇರುವುದರಿಂದ ಮತ್ತು ವೈಯಕ್ತಿಕ ಕಾರಣಗಳಿಂದಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಕಳೆದ ಡಿಸೆಂಬರ್‌ನಲ್ಲಿ ನಡೆದಿದ್ದ ಆಟಗಾರರ ಹರಾಜಿನಲ್ಲಿ ಕೆಕೆಆರ್ ತಂಡ ₹ 50 ಲಕ್ಷ ಮೂಲ ಬೆಲೆ ನೀಡಿ ಶಕೀಬ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಶಕೀಬ್ ಅವರು ಐರ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ (ಏ.4 ರಿಂದ 8) ಆಡಲಿದ್ದಾರೆ. ಏ.9 ರಂದು ಕೆಕೆಆರ್ ತಂಡವನ್ನು ಸೇರಿಕೊಳ್ಳುವರು ಎಂದು ನಿರೀಕ್ಷಿಸಲಾಗಿತ್ತು.
ಬಾಂಗ್ಲಾದೇಶದ ಇನ್ನೊಬ್ಬ ಆಟಗಾರ ಲಿಟನ್ ದಾಸ್ ಅವರು ಟೂರ್ನಿಯಲ್ಲಿ ಆಡಲಿದ್ದಾರೆಯೇ ಎಂಬುದು ಖಚಿತವಾಗಿಲ್ಲ.