ಕರ್ನಾಟಕದ ಜಿಲ್ಲೆಗಳಲ್ಲಿ ಒಂದಾಗಿರುವ ಗದಗ ಜಿಲ್ಲೆಯು 1997ರಲ್ಲಿ ಧಾರವಾಡ ಜಿಲ್ಲೆಯಿಂದ ಬೇರ್ಪಟ್ಟು, ನೂತನ ಜಿಲ್ಲೆಯಾಗಿ ರಚಿಸಲ್ಪಟ್ಟಿತು. ಕಲೆ, ಸಾಹಿತ್ಯ, ಸಾಂಸ್ಕೃತಿಕ, ನೈಸರ್ಗಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಹೆಸರು ಮಾಡಿರುವ ಗದಗ ಜಿಲ್ಲೆಯ ಬಳಿ ಭೇಟಿ ನೀಡಬಹುದಾದ ತಾಣಗಳ ವಿವರ ಇಲ್ಲಿದೆ.
1.ಲಕ್ಕುಂಡಿ ದೇವಾಲಯಗಳು:
ಗದಗದಿಂದ 11 ಕಿ.ಮೀ ದೂರದಲ್ಲಿರುವ ಲಕ್ಕುಂಡಿಯು “ದೇವಾಲಯಗಳ ಸ್ವರ್ಗ” ವೆಂದು ಪ್ರಸಿದ್ಧವಾಗಿದೆ. ಇದು ಶಾಸನಗಳಲ್ಲಿ “ಲೋಕಿ ಗುಂಡಿ” ಎಂಬ ಹೆಸರಿನಿಂದ ಕರೆಯಲ್ಪಟ್ಟಿದೆ. 50 ಕ್ಕೂ ಹೆಚ್ಚು ದೇವಾಲಯಗಳು, 101 ಮೆಟ್ಟಿಲುಗಳ ಬಾವಿ ಮತ್ತು ಚಾಲುಕ್ಯರು, ಕಲಚೂರಿಗಳು, ಹೊಯ್ಸಳರ ಆಳ್ವಿಕೆಯಲ್ಲಿ ನಿರ್ಮಿಸಲಾದ ಅನೇಕ ಶಾಸನಗಳನ್ನು ಇಲ್ಲಿ ಸಂರಕ್ಷಿಸಲಾಗಿದೆ. ಕಾಶಿ ವಿಶ್ವೇಶ್ವರ ದೇವಾಲಯ, ನನ್ನೆಶ್ವರ ದೇವಾಲಯ ಲಕ್ಕುಂಡಿಯ ಪ್ರಸಿಧ್ಧ ದೇವಾಲಯಗಳು. ಮಹಾವೀರ ಜೈನ ದೇವಾಲಯ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಲಕ್ಕುಂಡಿಯಲ್ಲಿರುವ ಕಲಾಶಿಲ್ಪ ಗ್ಯಾಲರಿಯು ಭಾರತದ ಪುರಾತತ್ತ್ವ ಇಲಾಖೆಯಿಂದ ನಿರ್ವಹಿಸಲ್ಪಡುತ್ತದೆ.
2. ಕಪ್ಪತ ಗುಡ್ಡ, ಮುಂಡರಗಿ:
“ಉತ್ತರ ಕರ್ನಾಟಕದ ಸಹ್ಯಾದ್ರಿ” ವೆಂದು ಪ್ರಸಿದ್ಧವಾದ ಕಪ್ಪತಗುಡ್ಡವು ಗದಗ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದೆನಿಸಿದೆ. ಮಳೆಗಾಲದಲ್ಲಿ ಹಸಿರಿನಿಂದ ಕಂಗೊಳಿಸುವ ಈ ಗುಡ್ಡವು ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲು ಯೋಗ್ಯವಾದ ಸ್ಥಳ. ಈ ಗುಡ್ಡವು ಔಷಧೀಯ ಸಸ್ಯಗಳಿಗೆ ಹೆಸರು ಮಾಡಿದ್ದು, ಬೆಟ್ಟದ ಸಾಲುಗಳಲ್ಲಿ 340 ಕ್ಕೂ ಹೆಚ್ಚು ಅಪರೂಪದ ಔಷಧೀಯ ಸಸ್ಯಗಳಿವೆ ಎಂದು ತಿಳಿದು ಬಂದಿದೆ. ಕಪ್ಪತಗುಡ್ಡದ ವ್ಯಾಪ್ತಿಯಲ್ಲಿ ಆರು ಪ್ರಮುಖ ಮಠ ಮತ್ತು ದೇವಸ್ಥಾನಗಳು ಇವೆ.
3. ಗದಗ ಮೃಗಾಲಯ:
“ಬಿಂಕಾಡಕಟ್ಟಿ ಮೃಗಾಲಯ” ಎಂದೂ ಕರೆಯಲ್ಪಡುವ ಇದನ್ನು1972 ರಲ್ಲಿ ಸ್ಥಾಪಿಸಲಾಯಿತು. ಗದಗದಿಂದ 4 ಕಿಮೀ ದೂರದಲ್ಲಿರುವ ಈ ಮೃಗಾಲಯವನ್ನು ಕೇಂದ್ರ ಮೃಗಾಲಯ ಪ್ರಾಧಿಕಾರವು “ಸಣ್ಣ ಮೃಗಾಲಯ”ಗಳ ಪಟ್ಟಿಯಲ್ಲಿ ಸೇರಿಸಿದೆ. ವರ್ಷವೂ ಸುಮಾರು 70000 ಕ್ಕೂ ಅಧಿಕ ಪ್ರವಾಸಿಗರು ಈ ಮೃಗಾಲಯಕ್ಕೆ ಭೇಟಿ ನೀಡುತ್ತಾರೆ.
4. ತ್ರಿಕೂಟೇಶ್ವರ ದೇವಸ್ಥಾನ:
ಗದಗ ಪಟ್ಟಣದಲ್ಲಿರುವ ಈ ದೇವಾಲಯವು 11ನೇ ಶತಮಾನದಲ್ಲಿ ಪಶ್ಚಿಮ ಚಾಲುಕ್ಯರ ಕಾಲದಲ್ಲಿ ನಿರ್ಮಿಸಲಾಯಿತು ಎಂದು ನಂಬಲಾಗಿದೆ. ಈ ದೇವಾಲಯವನ್ನು ವಾಸ್ತುಶಿಲ್ಪಿ ಜಕಣಾಚಾರಿ ನಿರ್ಮಿಸಿದನು. ಇಲ್ಲಿ ಮೂರು ಶಿವಲಿಂಗಗಳಿದ್ದು, ಇದು ತ್ರಿಮೂರ್ತಿಗಳಾದ ಬ್ರಹ್ಮ, ಶಿವ ಮತ್ತು ವಿಷ್ಣುಗಳನ್ನು ಪ್ರತಿನಿಧಿಸುತ್ತದೆ. ಅಲಂಕಾರಿಕ ಗೋಡೆಗಳು, ಕಂಬಗಳು ಎಲ್ಲರನ್ನೂ ಆಕರ್ಷಿಸುತ್ತದೆ. ಇಲ್ಲಿರುವ ಸರಸ್ವತಿ ದೇವಿ ವಿಗ್ರಹವು ವಿಧ್ವಂಸಕರಿಂದ ಹಾನಿಗೊಳಗಾಗಿದ್ದು, ಯಾವುದೇ ಪೂಜೆ ನಡೆಯುವುದಿಲ್ಲ.
5. ವೀರನಾರಾಯಣ ದೇವಸ್ಥಾನ:
ಚತುರಶಿಲ್ಪಿ ಜಕಣಾಚಾರಿ ಕೆತ್ತಿದನೆಂದು ಹೇಳಲಾಗುವ ಈ ದೇವಾಲಯವು ಗದುಗಿನ ಮಹಾಭಾರತ ಅಥವಾ ಕರ್ಣಾಟ ಭಾರತ ಕಥಾಮಂಜರಿ ರಚಿಸಿದ ಕುಮಾರವ್ಯಾಸರಿಂದಾಗಿ ಪ್ರಸಿಧ್ಧಿ ಹೊಂದಿದೆ. ಕುಮಾರವ್ಯಾಸರು ಇದೇ ದೇವಸ್ಥಾನದಲ್ಲಿ ಕುಳಿತು ಮಹಾಭಾರತವನ್ನು ರಚಿಸಿದನೆಂದು ಹೇಳಲಾಗುತ್ತದೆ. ಅವರು ಯಾವ ಕಂಬದ ಕೆಳಗೆ ಕುಳಿತು ಮಹಾಭಾರತ ಬರೆಯುತ್ತಿದ್ದರೋ ಇವತ್ತಿಗೂ ಅದು “ಕುಮಾರವ್ಯಾಸ ಕಂಬ”ವೆಂದೇ ಪ್ರಸಿದ್ದಿಯಾಗಿದೆ. ಕ್ರಿಸ್ತ ಶಕ 1117 ಸುಮಾರಿನಲ್ಲಿ ಹೊಯ್ಸಳ ರಾಜ ವಿಷ್ಣುವರ್ಧನನು ಕಟ್ಟಿಸಿದ ಈ ದೇವಾಲಯವು ವಿಷ್ಣುವಿಗೆ ಸಮರ್ಪಿತವಾದ ದೇವಾಲಯವಾಗಿದೆ. ಈ ದೇವಸ್ಥಾನವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ (ಎಎಸ್ಐ)ಯ ಸುರಕ್ಷಿತ ಸ್ಮಾರಕವಾಗಿದೆ.
6. ಗಜೇಂದ್ರಗಡ ಕೋಟೆ:
ಗಜೇಂದ್ರಗಡ ಕೋಟೆಯು ಛತ್ರಪತಿ ಶಿವಾಜಿ ಮಹಾರಾಜ್ ನಿರ್ಮಿಸಿದ ಐತಿಹಾಸಿಕ ಕೋಟೆ. ಮೇಲಿನಿಂದ ನೋಡಿದಾಗ ಆನೆಯ ಆಕಾರವನ್ನು ಹೋಲುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಗದಗ ಜಿಲ್ಲೆಯಿಂದ 55 ಕಿ.ಮೀ ದೂರ ಗಜೇಂದ್ರಗಡದಲ್ಲಿದೆ. ಗಜೇಂದ್ರಗಡ ಕೋಟೆಯು ಐದು ತಲೆಯ ಹಾವು ಮತ್ತು ಎರಡು ಸಿಂಹಗಳು ಪರಸ್ಪರ ಮುಖಾಮುಖಿಯಾಗಿರುವ ಭವ್ಯ ಪ್ರವೇಶ ದ್ವಾರವನ್ನು ಹೊಂದಿದೆ. ಇಲ್ಲಿ ಭಗವಾನ್ ಹನುಮಾನ್ ವಿಗ್ರಹ, ಕೋಟೆಯ ಅವಶೇಷಗಳು, ಆನೆಯ ತಲೆಯ ಕೆತ್ತನೆಗಳು, ಹಿಂದಿ ಮತ್ತು ಮರಾಠಿಯಲ್ಲಿನ ಪ್ರಾಚೀನ ಶಾಸನಗಳನ್ನು ಕಾಣಬಹುದು. ಇಲ್ಲಿಯ ಕಾಲಕಾಲೇಶ್ವರ ದೇವಾಲಯವೂ ಪ್ರಸಿದ್ಧವಾಗಿದೆ.
7. ಡಂಬಳದ ದೇವಾಲಯಗಳು: ಕಲ್ಯಾಣದ ಚಾಲುಕ್ಯರು ನಿರ್ಮಿಸಿದ ಪ್ರಮುಖ ದೇವಾಲಯಗಲ್ಲಿ ಡಂಬಳದ ದೊಡ್ಡಬಸಪ್ಪನ ದೇವಾಲಯವು ಸುಪ್ರಸಿದ್ಧ. ಡಂಬಳದಲ್ಲಿ ಸೋಮೇಶ್ವರನ ಗುಡಿ, ಜಪದ ಬಾವಿ, ಕಲ್ಲೇಶ್ವರನ ದೇವಾಲಯವೂ ಪ್ರಸಿದ್ಧ ಸ್ಥಳಗಳಾಗಿವೆ. ದೊಡ್ಡ ಬಸಪ್ಪ ದೇವಾಲಯವು ಅಡಿಯಿಂದ ಮುಡಿಯವರಿಗೆ ನಕ್ಷತ್ರಾಕಾರದ ವಿನ್ಯಾಸವನ್ನು ಹೊಂದಿರುವ ಏಕೈಕ ದೇವಾಲಯವಾಗಿದ್ದು, ಭಾರತದ ವಾಸ್ತುಶಿಲ್ಪ ಅಧ್ಯಯನಕ್ಕೆ ವಿಶೇಷ ಉದಾಹರಣೆ.