ಬೆಳಗಾವಿ: ಹುಕ್ಕೇರಿ ತಾಲೂಕಿನ ನದಿಗುಡಕೇತರ ಗ್ರಾಮದಲ್ಲಿ ಪ್ರೇಯಸಿಯನ್ನು ಆಕೆಯ ಮನೆಯವರೇ ಬರ್ಬರವಾಗಿ ಕೊಲೆ ಮಾಡಿದ್ದರಿಂದ ತೀವ್ರ ಮನನೊಂದಿದ್ದ ಪ್ರಿಯಕರ, ಆಕೆಯ ಹುಟ್ಟುಹಬ್ಬದ ದಿನದಂದೇ ತಾನೂ ಆತ್ಮಹತ್ಯೆಗೆ ಶರಣಾಗಿರುವ ಕರುಣಾಜನಕ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನದಿಗುಡಕೇತರ ಗ್ರಾಮದ ಕೃಷ್ಣಾ ಪಾಟೀಲ್ ಹಾಗೂ ಅದೇ ಊರಿನ ಸತ್ಯವ್ವಾ ಹೆಳವಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇವರಿಬ್ಬರ ಪ್ರೀತಿಗೆ ಸತ್ಯವ್ವಾಳ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ, ನಾಲ್ಕು ವರ್ಷಗಳ ಹಿಂದೆ ಆಕೆಯನ್ನು ರಾಯಬಾಗ ಮೂಲದ ಯುವಕನೊಂದಿಗೆ ಬಲವಂತವಾಗಿ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದರೂ ಪ್ರಿಯಕರನ ಮೇಲಿನ ಪ್ರೀತಿ ಮರೆಯದ ಸತ್ಯವ್ವಾ, ಗಂಡನ ಮನೆ ಬಿಟ್ಟು ಕಳೆದ ಏಪ್ರಿಲ್ 5ರಂದು ಕೃಷ್ಣಾನೊಂದಿಗೆ ಮನೆ ಬಿಟ್ಟು ಬಂದಿದ್ದಳು ಎನ್ನಲಾಗಿದೆ.

ನಂತರ ಇಬ್ಬರೂ ಸವದತ್ತಿಯಲ್ಲಿ ಬಾಡಿಗೆ ಮನೆ ಮಾಡಿ ಜೀವನ ಸಾಗಿಸುತ್ತಿದ್ದರು. ಈ ವೇಳೆ, ಯಮಕನಮರಡಿ ಮತ್ತು ರಾಯಬಾಗ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ನಾಪತ್ತೆ ಪ್ರಕರಣಗಳು ದಾಖಲಾಗಿದ್ದವು. ಇಬ್ಬರ ಸುಳಿವು ಪಡೆದ ಸತ್ಯವ್ವಾಳ ಕುಟುಂಬಸ್ಥರು ಏಪ್ರಿಲ್ 10ರಂದು ಇಬ್ಬರನ್ನೂ ಪತ್ತೆ ಹಚ್ಚಿ ವಾಪಸ್ ಕರೆತಂದಿದ್ದರು. ಕೃಷ್ಣಾನನ್ನು ಬಿಟ್ಟುಬಿಡುವಂತೆ ಸತ್ಯವ್ವಾಳಿಗೆ ತೀವ್ರ ಒತ್ತಡ ಹೇರಿದ್ದರು. ಆದರೆ ಆಕೆ ಗಂಡನೊಂದಿಗೆ ಸಂಸಾರ ಮಾಡಲು ನಿರಾಕರಿಸಿದ್ದಳು. ಇದರಿಂದ ರೊಚ್ಚಿಗೆದ್ದ ಕುಟುಂಬಸ್ಥರು, ಆಕೆಯನ್ನು ಮಹಾರಾಷ್ಟ್ರದ ಮೀರಜ್ ಜಿಲ್ಲೆಯ ಅರಗ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಕರೆದೊಯ್ದಿದ್ದರು. ಅಲ್ಲಿಯೂ ಆಕೆ ಒಪ್ಪದಿದ್ದಾಗ, ಏಪ್ರಿಲ್ 13ರಂದು ತಾಯಿಯ ಮುಂದೆಯೇ ಮರ್ಯಾದೆಗೆ ಅಂಜಿ ಸತ್ಯವ್ವಾಳನ್ನು ಆಕೆಯ ಚಿಕ್ಕಪ್ಪ ಮತ್ತು ಸಹೋದರ ಸೇರಿ ಕೊಲೆ ಮಾಡಿದ್ದರು. ಬಳಿಕ, ಊರಿನಲ್ಲಿ ಸನ್ಮಾನ ಕಾರ್ಯಕ್ರಮವೊಂದರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆಂದು ಸುಳ್ಳು ಕಥೆ ಕಟ್ಟಿ, ಶವವನ್ನು ಸುಟ್ಟು ಹಾಕಿ ಸಾಕ್ಷ್ಯ ನಾಶಪಡಿಸಿದ್ದರು ಎಂಬುದ್ದಾಗಿದೆ.

ಈ ಕುರಿತು ಘಟನೆ ಬಗ್ಗೆ ಅನುಮಾನಗೊಂಡ ಪ್ರಿಯಕರ ಕೃಷ್ಣಾ, ಯಮಕನಮರಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದನು. ಈ ದೂರಿನ ಬೆನ್ನಟ್ಟಿದ ಯಮಕನಮರಡಿ ಪೊಲೀಸರು ತನಿಖೆ ನಡೆಸಿ, ಮರ್ಯಾದಾ ಹತ್ಯೆ ಪ್ರಕರಣವನ್ನು ಭೇದಿಸಿದ್ದರು. ಕೊಲೆ ಪ್ರಕರಣದಲ್ಲಿ ಸತ್ಯವ್ವಾಳ ಚಿಕ್ಕಪ್ಪ, ಸಹೋದರ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು. ಕೊಲೆ ಮಹಾರಾಷ್ಟ್ರದಲ್ಲಿ ನಡೆದಿದ್ದರಿಂದ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಆದರಿಂದ ಪ್ರೇಯಸಿಯ ಭೀಕರ ಕೊಲೆಯಿಂದ ಕೃಷ್ಣಾ ಪಾಟೀಲ್ ತೀವ್ರವಾಗಿ ನೊಂದಿದ್ದನು. ಎರಡು ತಿಂಗಳ ಬಳಿಕ, ಮೊನ್ನೆ (ಜೂನ್ 4, 2026) ಸತ್ಯವ್ವಾಳ ಹುಟ್ಟುಹಬ್ಬದ ದಿನವೇ ಆಕೆಯ ನೆನಪಿನಲ್ಲಿ ನದಿಗುಡಕೇತರ ಗ್ರಾಮದ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನಾ ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂದು ಪ್ರೇಮ ಪ್ರಕರಣ, ಮರ್ಯಾದೆಯ ಹೆಸರಿನಲ್ಲಿ ಎರಡು ಜೀವಗಳನ್ನು ಬಲಿಪಡೆದಿದ್ದು, ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ ಎಂಬುವುದು ತಿಳಿದುಬಂದಿದೆ.















