ವರ್ಷದ 365 ದಿನಗಳು ಸಿಗುವ ಏಕೈಕ ಹಣ್ಣು ಎಂದರೆ ಅದು ಬಾಳೆಹಣ್ಣು. ಕಡಿಮೆ ಬೆಲೆಗೆ ಸಿಕ್ಕರೂ ಕೂಡ ಅದರ ಆರೋಗ್ಯ ಪ್ರಯೋಜನಗಳು ಮಾತ್ರ ನಮ್ಮ ಊಹೆಗೂ ನಿಲುಕಲು ಸಾಧ್ಯವಿಲ್ಲ. ಹಾಗಾಗಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಸಹ ಬಾಳೆಹಣ್ಣು ಇದ್ದೇ ಇರುತ್ತದೆ ಮತ್ತು ಎಲ್ಲರಿಗೂ ಆರೋಗ್ಯ ಪ್ರಯೋಜನಗಳನ್ನು ನೀಡುವುದರಿಂದ ಇಷ್ಟ ಕೂಡ ಆಗುತ್ತದೆ.
ಬಾಳೆಹಣ್ಣನ್ನು ಹಾಗೇ ತಿನ್ನುವುದಕ್ಕಿಂತ ಹಾಲಿನ ಜೊತೆ ಸೇರಿಸಿ ಬನಾನಾ ಮಿಲ್ಕ್ ಶೇಕ್ ತಯಾರು ಮಾಡಿ ಕುಡಿಯುವುದರಿಂದ ಆರೋಗ್ಯಕ್ಕೆ ಲಾಭಗಳು ಹೆಚ್ಚು ಎನ್ನುವುದು ವೈದ್ಯರ ಮಾತು. ಯಾವೆಲ್ಲಾ ಆರೋಗ್ಯ ಲಾಭಗಳು ಸಿಗುತ್ತವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳ ಬಹುದು.
ಸಣ್ಣ ಇರುವವರು ದಪ್ಪ ಆಗಬಹುದು
• ಎಷ್ಟೋ ದಿನಗಳಿಂದ ನಾನು ದಪ್ಪ ಆಗಬೇಕು ಎಂದು ಕನಸು ಕಾಣುತ್ತಿರುವವರು ಮೊದಲು ಬಾಳೆಹಣ್ಣಿನ ಮಿಲ್ಕ್ ಶೇಕ್ ಕುಡಿಯಿರಿ ಮತ್ತು ಇದನ್ನು ಪ್ರತಿ ದಿನ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನೀವು ಆಟೋಮೆಟಿಕ್ ಆಗಿ ದಪ್ಪ ಆಗುತ್ತೀರಿ ಮತ್ತು ನೋಡಲು ಮೈಕೈ ತುಂಬಿಕೊಂಡು ಚೆನ್ನಾಗಿ ಕಾಣುವಿರಿ.
• ಯಾಕೆಂದರೆ ಬಾಳೆಹಣ್ಣಿನಲ್ಲಿ ನಿಮ್ಮ ದೇಹಕ್ಕೆ ಬೇಕಾದ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳಿವೆ ಜೊತೆಗೆ ನಿಮ್ಮ ದೇಹದ ತೂಕವನ್ನು ಹೆಚ್ಚು ಮಾಡುವ ಕ್ಯಾಲೋರಿಗಳು ಸಹ ಸಿಗುತ್ತವೆ. ಹಾಗಾಗಿ ರಾತ್ರಿ ಮಲಗುವ ಸಂದರ್ಭದಲ್ಲಿ ಬಾಳೆಹಣ್ಣಿನ ಮಿಲ್ಕ್ ಶೇಕ್ ಕುಡಿಯುವ ಅಭ್ಯಾಸ ಇಟ್ಟುಕೊಳ್ಳಬಹುದು.
ದಪ್ಪ ಇರುವವರು ಸಣ್ಣ ಆಗಬಹುದು!
• ಬಾಳೆಹಣ್ಣು ಎರಡು ರೀತಿಯಲ್ಲೂ ಸಹ ಕೆಲಸ ಮಾಡುತ್ತದೆ. ಏಕೆಂದರೆ ಬಾಳೆ ಹಣ್ಣಿನಲ್ಲಿ ನಾರಿನ ಅಂಶ ಕೂಡ ಇದೆ. ಇದು ನಿಮ್ಮ ಹೊಟ್ಟೆ ತುಂಬುವಂತೆ ಮಾಡುವುದು ಮಾತ್ರವಲ್ಲದೆ ನೀವು ಬೇರೆ ಬಗೆಯ ಆಹಾರ ಸೇವನೆ ಮಾಡದಂತೆ ನಿಮ್ಮನ್ನು ತಡೆಯುತ್ತದೆ.
• ಆಗ ನಿಮ್ಮ ದೇಹದಲ್ಲಿ ಇರುವ ಕ್ಯಾಲೋರಿಗಳು ಕರಗುತ್ತವೆ. ಇದರಿಂದ ನೀವು ತೂಕ ಕಳೆದು ಕೊಂಡು ವ್ಯಾಯಾಮ ಮಾಡಿ ಸಣ್ಣ ಆಗಬಹುದು. ಹೀಗೆ ಮಾಡಬೇಕು ಎಂದರೆ ಒಂದು ಟೆಕ್ನಿಕ್ ಇದೆ. ಅದೇ ನಂದರೆ ಬಾಳೆಹಣ್ಣಿನ ಮಿಲ್ಕ್ ಶೇಕ್ ಜೊತೆಗೆ ಸ್ವಲ್ಪ ಐಸ್ ಹಾಕಿ ಕುಡಿಯಿರಿ.
ತಕ್ಷಣ ಶಕ್ತಿ ಕೊಡುತ್ತದೆ
• ಬಾಳೆಹಣ್ಣಿನಲ್ಲಿ ಕಾಂಪ್ಲೆಕ್ಸ್ ಕಾರ್ಬೊಹೈಡ್ರೇಟ್ ಪ್ರಮಾಣ ಹೆಚ್ಚಾಗಿದೆ ಎಂದು ವೈದ್ಯರು ಹೇಳುತ್ತಾರೆ. ಹಾಗಾಗಿ ನಿಮ್ಮ ದೇಹದಲ್ಲಿ ಗ್ಲೂಕೋಸ್ ಪ್ರಮಾಣ ಉತ್ತಮವಾಗಿ ನಿರ್ವಹಣೆಯಾಗುತ್ತದೆ ಮತ್ತು ನೀವು ವ್ಯಾಯಾಮ ಮಾಡಲು ನಿಮಗೆ ಶಕ್ತಿ ಸಾಕಷ್ಟು ಸಿಗುತ್ತದೆ.
• ಮಾಂಸಖಂಡಗಳಲ್ಲಿ ಗ್ಲೈಕೋಜನ್ ಶೇಖರಣೆಯಾಗಿ ಪೊಟ್ಯಾಷಿಯಂ ಸಹ ಸಿಕ್ಕಂತಾಗಿ ಮಾಂಸ ಖಂಡಗಳ ಸೆಳೆತ ದೂರವಾಗುತ್ತದೆ.
ಆರೋಗ್ಯಕರವಾದ ತ್ವಚೆ ನಿಮ್ಮದಾಗುತ್ತದೆ
• ಬಾಳೆ ಹಣ್ಣಿನಲ್ಲಿ ವಿಟಮಿನ್ ಸಿ ಪ್ರಮಾಣ ತುಂಬಾ ಇದೆ. ಹಾಗಾಗಿ ಇದು ದೇಹದಲ್ಲಿ ಕೊಲಾಜನ್ ಉತ್ಪತ್ತಿ ಮಾಡುತ್ತದೆ. ಆಂಟಿಆಕ್ಸಿಡೆಂಟ್ ರೂಪದಲ್ಲಿ ಬಾಳೆಹಣ್ಣು ನಿಮ್ಮ ಚರ್ಮಕ್ಕೆ ಉಂಟಾದ ಹಾನಿಯನ್ನು ಸರಿಪಡಿಸುತ್ತದೆ.
• ಜೊತೆಗೆ ವಯಸ್ಸಾಗುವಿಕೆ ಪ್ರಕ್ರಿಯೆ ಯನ್ನು ತಡೆದು ನಿಮ್ಮ ತ್ವಚೆಗೆ ಉತ್ತಮ ತೇವಾಂಶವನ್ನು ಕೊಟ್ಟು ಆರೋಗ್ಯಕರವಾಗಿ ದೀರ್ಘಕಾಲ ಹೊಳಪಿನಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ.
ತಲೆಕೂದಲು ಉದುರುವಿಕೆ ಸಮಸ್ಯೆ ಇರುವುದಿಲ್ಲ
• ಸರಿಯಾದ ಕ್ರಮದಲ್ಲಿ ಬಾಳೆಹಣ್ಣಿನ ಮಿಲ್ಕ್ ಶೇಕ್ ಸೇವಿಸುವ ಅಭ್ಯಾಸ ಇಟ್ಟುಕೊಂಡಿದ್ದವರಿಗೆ ತಲೆಕೂದಲಿನ ಸಮಸ್ಯೆ ಕೂಡ ಇರುವುದಿಲ್ಲ ಎಂದು ಹೇಳುತ್ತಾರೆ.
• ತಲೆ ಕೂದಲಿನ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದ ಪೌಷ್ಟಿಕ ಸತ್ವಗಳು ಹಾಲು ಮತ್ತು ಬಾಳೆ ಹಣ್ಣಿನಲ್ಲಿ ಇರುವುದರಿಂದ ತಲೆ ಕೂದಲು ಸೊಂಪಾಗಿ ಬೆಳೆಯುತ್ತದೆ ಮತ್ತು ತಲೆ ಕೂದಲು ಉದುರುವಿಕೆ ಸಮಸ್ಯೆ ಇರುವುದಿಲ್ಲ. ಚಿಕ್ಕಮಕ್ಕಳಿಂದ ಅಭ್ಯಾಸ ಮಾಡಿಸಬೇಕು ಅಷ್ಟೇ.
ತಲೆನೋವಿಗೆ ರಾಮಬಾಣ
• ಇದು ಸ್ವಲ್ಪ ಆಶ್ಚರ್ಯವೆನಿಸಬಹುದು. ಆದರೂ ಕೂಡ ಸತ್ಯ. ಕೆಲವರು ಮಧ್ಯಪಾನ ಅಭ್ಯಾಸ ಮಾಡಿ ಕೊಂಡು ಆಗಾಗ ತಲೆನೋವು ಎಂದು ಹೇಳುತ್ತಿರುತ್ತಾರೆ. ಅಂತಹವರಿಗೆ ಬಾಳೆಹಣ್ಣಿನ ಮಿಲ್ಕ್ ಶೇಕ್ ತುಂಬಾ ಪ್ರಯೋಜನಕಾರಿ.
• ಏಕೆಂದರೆ ಅದರಲ್ಲಿರುವ ಎಲೆಕ್ಟ್ರೋಲೈಟ್ ಅಂಶಗಳು ದೇಹದಲ್ಲಿ ನೀರಿನ ಪ್ರಮಾಣ ಉತ್ತಮವಾಗಿ ನಿರ್ವಹಣೆಯಾಗುವಂತೆ ನೋಡಿಕೊಳ್ಳುತ್ತವೆ. ಯಾವಾಗ ದೇಹಕ್ಕೆ ಬಾಳೆ ಹಣ್ಣಿನಿಂದ ಪೊಟ್ಯಾಶಿಯಂ ಸಿಗುತ್ತದೆ ಆಗ ತಲೆನೋವು ತನ್ನಿಂತಾನೇ ಕಡಿಮೆಯಾಗುತ್ತದೆ.
ಗರ್ಭಿಣಿ ಮಹಿಳೆಯರಿಗೆ ಒಳ್ಳೆಯದು
• ಏಕೆಂದರೆ ಬಾಳೆಹಣ್ಣಿನಲ್ಲಿ ಕಬ್ಬಿಣದ ಪ್ರಮಾಣ ತುಂಬಾ ಇರುವುದರಿಂದ ಗರ್ಭಾವಸ್ಥೆಯಲ್ಲಿ ಗರ್ಭಿಣಿ ಮಹಿಳೆಯರಿಗೆ ಅಗತ್ಯವಾಗಿ ಬೇಕಾದ ಕಬ್ಬಿಣದ ಅಂಶ ಬನಾನಾ ಮಿಲ್ಕ್ ಶೇಕ್ ಕುಡಿಯುವುದರಿಂದ ಸಿಗುತ್ತದೆ.
• ಇದರಿಂದ ಅತ್ಯುತ್ತಮ ಗರ್ಭಾವಸ್ಥೆ ನಿರ್ವಹಣೆಯಾಗುವುದು ಮಾತ್ರವಲ್ಲದೆ ಸುಸೂತ್ರವಾಗಿ ಹೆರಿಗೆ ಯಾಗಲು ಸಹ ಸಹಾಯವಾಗುತ್ತದೆ. ಸೊಂಟದ ಭಾಗದ ಮಾಂಸಖಂಡಗಳಿಗೆ ಶಕ್ತಿ ಸಿಗುತ್ತದೆ.