ಮನೆ ಕಾನೂನು ಸದೃಢ ಪತಿಯು ದೈಹಿಕ ದುಡಿಮೆಯನ್ನು ಮಾಡಿಯಾದರೂ ಪತ್ನಿ, ಮಗು ಸಲಹುವುದು ಕರ್ತವ್ಯ: ಸುಪ್ರೀಂ ಕೋರ್ಟ್

ಸದೃಢ ಪತಿಯು ದೈಹಿಕ ದುಡಿಮೆಯನ್ನು ಮಾಡಿಯಾದರೂ ಪತ್ನಿ, ಮಗು ಸಲಹುವುದು ಕರ್ತವ್ಯ: ಸುಪ್ರೀಂ ಕೋರ್ಟ್

0

ದೈಹಿಕ ದುಡಿಮೆಯನ್ನು ಮಾಡಿಯಾದರೂ ಸರಿ, ಸದೃಢನಾದ ಪತಿಯು ತನ್ನ ಪತ್ನಿ ಮತ್ತು ಅಪ್ರಾಪ್ತ ಮಗುವನ್ನು ಸಾಕುವ ಹೊಣೆಗಾರಿಕೆ ಹೊಂದಿರುತ್ತಾನೆ. ಆದಾಯ ಇಲ್ಲ ಎಂದು ಆತ ಜವಾಬ್ದಾರಿಯಿಂದ ನುಣಿಚಿಕೊಳ್ಳಲಾಗದು ಎಂದು ಸುಪ್ರೀಂ ಕೋರ್ಟ್ ಈಚೆಗೆ ಹೇಳಿದೆ.

ಸಿಆರ್ಪಿಸಿ ಸೆಕ್ಷನ್ 125ರ ಅಡಿ ಪತ್ನಿ ಸಲ್ಲಿಸಿದ್ದ ಜೀವನಾಂಶದ ಕುರಿತಾದ ಕೋರಿಕೆಯನ್ನು ಕೌಟುಂಬಿಕ ನ್ಯಾಯಾಲಯ ವಜಾ ಮಾಡಿತ್ತು. ಇದನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಕೂಡಾ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಬೆಲಾ ಎಂ ತ್ರಿವೇದಿ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

“ಪತ್ನಿ ಮತ್ತು ಅಪ್ರಾಪ್ತ ಮಕ್ಕಳಿಗೆ ಆರ್ಥಿಕ ಭದ್ರತೆ ಕಲ್ಪಿಸುವುದು ಪತಿಯ ಪವಿತ್ರ ಕರ್ತವ್ಯವಾಗಿದೆ. ಪತಿಯು ಸದೃಢವಾಗಿದ್ದರೆ ದೈಹಿಕ ದುಡಿಮೆ ಮಾಡಿಯಾದರೂ ಹಣ ಗಳಿಸಬೇಕಿದೆ. ಶಾಸನದಲ್ಲಿ ಕಾನೂನಾತ್ಮಕವಾಗಿ ಅನುಮತಿ ಇಲ್ಲದ ಆಧಾರ ಹೊರತುಪಡಿಸಿ ಪತಿಯು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದು” ಎಂದು ಪೀಠ ಹೇಳಿದೆ.

“ಕೌಟುಂಬಿಕ ನ್ಯಾಯಾಲಯವು ಪತ್ನಿ ಮತ್ತು ಅಪ್ರಾಪ್ತ ಮಕ್ಕಳಿಗೆ ಆರ್ಥಿಕ ಭದ್ರತೆ ಕಲ್ಪಿಸುವುದು ಪತಿಯ ಕರ್ತವ್ಯ ಎಂಬ ಕಾನೂನಿನ ಮೂಲ ನಿಯಮವನ್ನು ಕಡೆಗಣಿಸಿದೆ. ಪತಿಯು ಸದೃಢವಾಗಿದ್ದರೆ ದುಡಿದಾದರೂ ಹಣ ಗಳಿಸಬೇಕು. ಶಾಸನಾತ್ಮಕ ವಿನಾಯಿತಿಯ ಆಧಾರ ಹೊರತುಪಡಿಸಿ ಉಳಿದಂತೆ ಅವರು ತಮ್ಮ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದು” ಎಂದು ಪೀಠ ಹೇಳಿದೆ.

“ಸದೃಢವಾದ ಪ್ರತಿವಾದಿಯು ನ್ಯಾಯಯುತ ದಾರಿಯಲ್ಲಿ ಹಣ ಗಳಿಸಿ, ಪತ್ನಿ ಮತ್ತು ಅಪ್ರಾಪ್ತ ಮಗುವನ್ನು ಸಲಹಬೇಕು. ಕೌಟುಂಬಿಕ ನ್ಯಾಯಾಲಯದಲ್ಲಿನ ಸಾಕ್ಷಿ, ಇತರೆ ದಾಖಲೆಯಲ್ಲಿನ ಸಾಕ್ಷಿಗಳನ್ನು ಪರಿಶೀಲಿಸಿದ ಬಳಿಕ, ಪ್ರತಿವಾದಿಯು ಸಾಕಷ್ಟು ಆದಾಯ ಮೂಲ ಹೊಂದಿದ್ದು, ಸದೃಢವಾಗಿದ್ದರೂ ಮೇಲ್ಮನವಿದಾರರನ್ನು ನೋಡಿಕೊಳ್ಳದೇ ತಾತ್ಸಾರ ಭಾವ ತಳೆದಿದ್ದಾರೆ” ಎಂದು ಪೀಠ ಹೇಳಿದೆ.

ಇದಾಗಲೇ ಕೌಟುಂಬಿಕ ನ್ಯಾಯಾಲಯವು ಅಪ್ರಾಪ್ತ ಮಗುವಿಗೆ ₹6,000 ಪಾವತಿಸಲು ಆದೇಶಿಸಿರುವುದನ್ನು ಪರಿಗಣಿಸಿದ ನ್ಯಾಯಾಲಯವು ಇದನ್ನು ಹೊರತುಪಡಿಸಿ ಪ್ರತಿ ತಿಂಗಳು ₹10,000 ಜೀವನ ನಿರ್ವಹಣಾ ವೆಚ್ಚ ಪಾವತಿಸಲು ಆದೇಶಿಸಿತು.

ಹಿಂದಿನ ಲೇಖನಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿಗೆ ಸೇರಿಸಬೇಕೆಂಬ ಹೋರಾಟಕ್ಕೆ ಜಯ ಸಿಗಲಿದೆ: ಸಿಸಿ ಪಾಟೀಲ್
ಮುಂದಿನ ಲೇಖನಬಾಳೆಹಣ್ಣಿನ ಮಿಲ್ಕ್ ಶೇಕ್ ಕುಡಿಯುವುದರ ಬೊಂಬಾಟ್ ಲಾಭ!