ಬೆಂಗಳೂರು(Bengaluru): 10ನೇ ತರಗತಿ (ಕನ್ನಡ ವಿಷಯ 5ನೇ ಘಟಕ) ಪಠ್ಯದಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಕುರಿತ ಪಾಠವನ್ನು ಪಠ್ಯ ಪುಸ್ತಕದಿಂದ ಕೈಬಿಟ್ಟಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
ಭಗತ್ ಸಿಂಗ್ ಪಾಠವನ್ನು ಕೈ ಬಿಟ್ಟು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಕೆ.ಬಿ.ಹೆಡಗೆವಾರ್ ಅವರ ಭಾಷಣವನ್ನು ಪಠ್ಯದಲ್ಲಿ ಸೇರಸಲಾಗಿದೆ. ಈ ಮೂಲಕ ಮಹಾನ್ ದೇಶಪ್ರೇಮಿ ಭಗತ್ ಸಿಂಗ್ ಅವರಿಗೆ ರಾಜ್ಯ ಸರ್ಕಾರ ಅವಮಾನ ಮಾಡಿದೆ ಎಂದು ಆರೋಪಿಸಿ ಹಲವು ವಿದ್ಯಾರ್ಥಿ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು.
ಸಮಾಜ ವಿಜ್ಞಾನ ಹಾಗೂ ಭಾಷಾ ಪಠ್ಯ ಪುಸ್ತಕಗಳಲ್ಲಿದ್ದ ಸೂಕ್ಷ್ಮ ವಿಚಾರಗಳನ್ನು ಪರಿಶೀಲಿಸಿ, ಪರಿಷ್ಕರಿಸಲು ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಸಮಿತಿ ನೇಮಿಸಲಾಗಿತ್ತು. ಈ ಸಮಿತಿಯು 6ರಿಂದ 10ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕಗಳು ಹಾಗೂ 1ರಿಂದ 10ನೇ ತರಗತಿ ಕನ್ನಡ ಭಾಷಾ ಪಠ್ಯಪುಸ್ತಕಗಳನ್ನು ಪರಿಷ್ಕರಿಸಿದೆ.
ವಾಸ್ತವವಾಗಿ 10ನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯ ಪುಸ್ತಕದಿಂದ ಭಗತ್ ಸಿಂಗ್ ಗದ್ಯ ಪಾಠ ಕೈಬಿಟ್ಟಿಲ್ಲ. ಸದ್ಯ ಪರಿಷ್ಕರಿಸಿರುವ 10ನೇ ತರಗತಿ ಪ್ರಥಮ ಭಾಷಾ ಕನ್ನಡ ಪಠ್ಯ ಪುಸ್ತಕವು ಪ್ರಸ್ತುತ ಮುದ್ರಣ ಹಂತದಲ್ಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.