ಕೋಲಾರ: ಬಿಜೆಪಿಗೆ ಯಾವತ್ತೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಒಂದು ದೇಶ, ಒಂದು ನಾಯಕತ್ವ, ಒಂದು ಭಾಷೆ ಮೇಲೆ ನಂಬಿಕೆ ಇಟ್ಟವರು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ರಾಹುಲ್ ಗಾಂಧಿ ನೇತೃತ್ವದಲ್ಲಿ ಏ.9ರಂದು ನಡೆಯಲಿರುವ ‘ಜೈ ಭಾರತ್’ ಸಮಾವೇಶ ಆಯೋಜನೆಗೆ ನಡೆದ ಶನಿವಾರ ಇಲ್ಲಿ ಹಮ್ಮಿಕೊಂಡಿದ್ದ ಸಭೆ ಅವರು ಮಾತನಾಡಿದರು.
ಜರ್ಮನಿಯ ಹಿಟ್ಲರ್ ಹಾಗೂ ಇಟಲಿಯ ಮುಸಲೋನಿ ಅವರ ನಾಯಕತ್ವವನ್ನು ಒಪ್ಪಿಕೊಂಡವರು ಈಗ ದೇಶ ನಡೆಸುತ್ತಿದ್ದಾರೆ. ದೇಶದಲ್ಲಿ ಹಿಟ್ಲರ್ ಹಾಗೂ ಮುಸಲೋನಿ ವಂಶಸ್ಥರು ಇದ್ದರೆ ಅದು ಆರ್‌ಎಸ್‌ಎಸ್ ಹಾಗೂ ಹಿಂದೂ ಮಹಾಸಭಾದವರು ಎಂದು ಕಿಡಿಕಾರಿದರು.
ದೇಶದ ಜನರಲ್ಲಿ ಬೆದರಿಕೆ ಹುಟ್ಟಿಸಲು ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ರಾಹುಲ್ ಅವರಿಗೇ ಈ ರೀತಿ ಮಾಡಿದ ಮೇಲೆ ಉಳಿದವರ ವಿಚಾರದಲ್ಲಿ ಸುಮ್ಮನಿರುತ್ತಾರಾ ಎಂಬ ಭಯ, ಆತಂಕ ನಿರ್ಮಿಸಲು ಎಂದರು.
ರಾಹುಲ್ ಗಾಂಧಿ ಹೇಳಿರುವುದರಲ್ಲಿ ತಪ್ಪೇನಿದೆ? ಲಲಿತ್ ಮೋದಿ, ನೀರವ್ ಮೋದಿ ಓಡಿ ಹೋಗಿಲ್ಲವೇ? ದೇಶದ ದುಡ್ಡನ್ನು ಲೂಟಿ ಮಾಡಿದವನಿಗೆ ಏನೆಂದು ಕರೆಯಬೇಕು? ಸಾಧು, ಸಂತರು, ರಾಷ್ಟ್ರಭಕ್ತ ಎಂದು ಕರೆಯಬೇಕೇ ಎಂದು ಪ್ರಶ್ನಿಸಿದರು.