ಮನೆ ಸುದ್ದಿ ಜಾಲ ಬಿಎಂಟಿಸಿ ಕಾರ್ಯಾಚರಣೆ ವ್ಯಾಪ್ತಿ ವಿಸ್ತರಣೆ; ಏರ್‌ಪೋರ್ಟ್‌ನಿಂದ ವಿವಿಧ ಸ್ಥಳಗಳಿಗೂ ಬಸ್..

ಬಿಎಂಟಿಸಿ ಕಾರ್ಯಾಚರಣೆ ವ್ಯಾಪ್ತಿ ವಿಸ್ತರಣೆ; ಏರ್‌ಪೋರ್ಟ್‌ನಿಂದ ವಿವಿಧ ಸ್ಥಳಗಳಿಗೂ ಬಸ್..

0

ಬೆಂಗಳೂರು : ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತಿನಿತ್ಯ ರಾಜ್ಯದ ವಿವಿಧ ಮೂಲೆಗಳಿಂದ ಲಕ್ಷಾಂತರ ಜನ ಬರುತ್ತಾರೆ ಮೆಜೆಸ್ಟಿಕ್‌ಗೆ ಬಂದು ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಬರುತ್ತಾರೆ, ಹೋಗುತ್ತಾರೆ. ಆದರೆ ಇದೀಗ ಏರ್‌ಪೋರ್ಟ್ ಪ್ರಯಾಣಿಕರಿಗೆ ಮತ್ತೊಂದು ಗುಡ್‌ನ್ಯೂಸ್ ನೀಡಲು ಬಿಎಂಟಿಸಿ ಚಿಂತನೆ ನಡೆಸಿದೆ. ಬಿಎಂಟಿಸಿ ವಿವಿಧ ಜಿಲ್ಲೆಗಳಿಗೂ ಏರ್‌ಪೋರ್ಟ್‌ ಡೈರೆಕ್ಟ್ ಬಸ್ ಓಡಿಸಲು ಚಿಂತನೆ ನಡೆಸಿದೆ.

ಬಿಎಂಟಿಸಿ ಸಂಸ್ಥೆಯ ಬಸ್‌ಗಳು ಬೆಂಗಳೂರಿನ ದಶದಿಕ್ಕುಗಳಿಗೂ ತನ್ನ ವ್ಯಾಪ್ತಿ ವಿಸ್ತರಿಸಿವೆ. ಪ್ರತಿನಿತ್ಯ ಎಲೆಕ್ಟ್ರಿಕ್ ಬಸ್‌ಗಳು ಸೇರಿ ಸುಮಾರು 6,750 ಬಸ್ಸುಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿನಿತ್ಯ 30-35 ಲಕ್ಷ ಮಂದಿ ಪ್ರಯಾಣಿಸುತ್ತಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಸುತ್ತಮುತ್ತಲಿನ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಬಿಎ ವ್ಯಾಪ್ತಿಯ ನಂತರ ಸುಮಾರು 70 ಕಿಲೋಮೀಟರ್‌ವರೆಗೂ ಬಿಎಂಟಿಸಿ ಬಸ್‌ಗಳ ಕಾರ್ಯಾಚರಣೆ ಆರಂಭಿಸಿದೆ.

ಈಗಾಗಲೇ ರಾಮನಗರ, ಕನಕಪುರ, ಆನೇಕಲ್, ಮಾಗಡಿ, ತುಮಕೂರು ಸೇರಿದಂತೆ ಹಲವೆಡೆ ಎಕ್ಸ್ಪ್ರೆಸ್ ಸೇರಿದಂತೆ ಬಿಎಂಟಿಸಿ ಬಸ್‌ಗಳು ಓಡಾಡುತ್ತಿವೆ. ಏರ್‌ಪೋರ್ಟ್ ಪ್ರಯಾಣಿಕರಿಂದ ಈ ಸ್ಥಳಗಳಿಗೂ ಬಿಎಂಟಿಸಿ ಬಸ್‌ಗಳಿಗೆ ಬೇಡಿಕೆ ಬಂದರೆ ಡೈರೆಕ್ಟ್ ಎಕ್ಸ್‌ಪ್ರೆಸ್ ಬಸ್‌ಗಳನ್ನು ಏರ್‌ಪೋರ್ಟ್‌ನಿಂದ ಓಡಿಸಲು ಬಿಎಂಟಿಸಿ ಚಿಂತನೆ ನಡೆಸಿದೆ. ಏರ್‌ಪೋರ್ಟ್‌ಗೆ ಪ್ರತಿನಿತ್ಯ ಬೆಂಗಳೂರಿನ ವಿವಿಧ ಏರಿಯಾಗಳಿಂದ 150 ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿದ್ದು, ಸುಮಾರು 12-15 ಸಾವಿರ ಜನ ಪ್ರತಿನಿತ್ಯ ಬಿಎಂಟಿಸಿ ವೋಲ್ವೋ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ಬಿಎಂಟಿಸಿ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆ ಅಥವಾ ಸ್ಥಳಗಳಿಗೆ ಏರ್‌ಪೋರ್ಟ್‌ನಿಂದ ಡೈರೆಕ್ಟ್ ಬಸ್ ಸೇವೆ ಆರಂಭಿಸಿದರೆ, ಕೆಲವು ಜಿಲ್ಲೆಗಳ ಜನರಿಗೆ ನೇರ ಬಸ್ ಸಾರಿಗೆ ಸೇವೆ ಸಿಗುತ್ತಿದೆ.

ಇದರಿಂದ ಸಮಯ, ಹಣ ಉಳಿತಾಯವಾಗುತ್ತದೆ. ಸಂಚಾರ ದಟ್ಟಣೆ ಕಿರಿಕಿರಿ ತಪ್ಪುತ್ತದೆ. ಸದ್ಯ ಏರ್‌ಪೋರ್ಟ್‌ನಿಂದ ವಿವಿಧ ಊರುಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸೇವೆ ಒದಗಿಸುತ್ತಿದೆ. ಪ್ರಯಾಣಿಕರ ಬೇಡಿಕೆ ಮೇಲೆ ಬಿಎಂಟಿಸಿ ಸಂಚರಿಸುವ ಸ್ಥಳಗಳಿಗೆ ಈ ಎಕ್ಸ್‌ಪ್ರೆಸ್ ಬಸ್ ಸೇವೆ ಒದಗಿಸುವ ಚಿಂತನೆ ಇದೆ ಎಂದು ಬಿಎಂಟಿಸಿ ಹೇಳಿದೆ. ಏರ್‌ಪೋರ್ಟ್‌ನಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ಲಿಸಲು ಒಂದೇ ಲೈನ್ ಇದೆ. ಹೀಗಾಗಿ ಬಸ್ ನಿಲ್ಲಿಸಲು ಮತ್ತೊಂದು ಲೈನ್ ಕೊಡಿ ಅಂತಾ ಬಿಎಂಟಿಸಿ ಏರ್‌ಪೋರ್ಟ್ ಅಥಾರಿಟಿಗೆ ಕೇಳಿದೆ. ಇದಕ್ಕೆ ಏರ್‌ಪೋರ್ಟ್ ಅಥಾರಿಟಿ ಅನುಮತಿ ಸೂಚಿಸಿದ್ದು, ಕೆಲ ತಿಂಗಳಲ್ಲಿ ಸಿಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಈ ಪ್ಲಾನ್ ಸಕ್ಸಸ್ ಆದರೆ ಏರ್‌ಪೋರ್ಟ್ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ.