ಮನೆ ಕಾನೂನು ಬೆಂಗಳೂರಿನ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಉಗ್ರರಿಗೆ ಏಳು ವರ್ಷ ಜೈಲು...

ಬೆಂಗಳೂರಿನ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಉಗ್ರರಿಗೆ ಏಳು ವರ್ಷ ಜೈಲು ಶಿಕ್ಷೆ

0

ಬೆಂಗಳೂರಿನ ಮಲ್ಲೇಶ್ವರದಲ್ಲಿನ ಬಿಜೆಪಿ ಕಚೇರಿ ಬಳಿ 2013ರಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದ ಇಬ್ಬರು ಉಗ್ರರರಿಗೆ ಏಳು ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡವನ್ನು ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯವು ಈಚೆಗೆ ವಿಧಿಸಿದೆ.

Join Our Whatsapp Group


ಪ್ರಕರಣದ ವಿಚಾರಣೆ ಕಾಯ್ದಿರಿಸಿದ್ದ ಆದೇಶವನ್ನು ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಗಂಗಾಧರ ಸಿ ಎಂ ಅವರು ಪ್ರಕಟಿಸಿದರು. ನಿಷೇಧಿತ ಅಲ್ ಉಮಾ ಸಂಘಟನೆ ಸದಸ್ಯರಾದ 21ನೇ ಆರೋಪಿಯಾದ ಪ್ರಕಾಶ್ ಡ್ಯಾನಿಯಲ್ ಪ್ರಕಾಶ್ ಮತ್ತು 22ನೇ ಆರೋಪಿ ಜಾನ್ ನಾಸಿರ್ ಶಿಕ್ಷೆಗೆ ಗುರಿಯಾದ ಅಪರಾಧಿಗಳು.
ತಮ್ಮ ಮೇಲಿನ ಆರೋಪವನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಸ್ಫೋಟಕ ವಸ್ತುಗಳ ಕಾಯಿದೆ 1908ರ ಸೆಕ್ಷನ್ 6ರ ಅಡಿ ಪ್ರಕಾಶ್ ಮತ್ತು ನಾಸಿರ್ ಅವರನ್ನು ಅಪರಾಧಿಗಳು ಎಂದು ಘೋಷಿಸಿ, ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಿದೆ. ದಂಡ ಪಾವತಿಗೆ ವಿಫಲರಾದರೇ 6 ತಿಂಗಳು ಹೆಚ್ಚುವರಿಯಾಗಿ ಕಠಿಣ ಶಿಕ್ಷೆಗೆ ಒಳಗಾಗಬೇಕಿದೆ. ಈಗಾಗಲೇ ನ್ಯಾಯಾಂಗ ಬಂಧನದಲ್ಲಿ ಕಳೆದಿರುವ ಶಿಕ್ಷೆಯನ್ನು ಹೊರತುಪಡಿಸಿ ಉಳಿದ ಶಿಕ್ಷೆಯನ್ನು ಅನುಭವಿಸಬೇಕು ಎಂದು ನ್ಯಾಯಾಲಯ ಆದೇಶ ಮಾಡಿದೆ.
2008ರಲ್ಲಿ ಬೆಂಗಳೂರಿನ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಅಬ್ದುಲ್ ನಾಸೀರ್ ಮದನಿಯನ್ನು ಬಂಧಿಸಿದ್ದರಿಂದ ಅಂದಿನ ಸರ್ಕಾರದ ವಿರುದ್ಧ ನಿಷೇಧಿತ ಉಗ್ರ ಸಂಘಟನೆ ಅಲ್ – ಉಮಾ ಸದಸ್ಯರು ಅಸಹನೆ ಹೊಂದಿದ್ದರು. ಇದೇ ಕಾರಣಕ್ಕೆ ಬಿಜೆಪಿ ಕಚೇರಿ ಗುರಿಯಾಗಿಸಿ, 2013ರ ಏಪ್ರಿಲ್ 13ರಂದು ಬೈಕ್ ನಲ್ಲಿ ಐಇಡಿ ಬಾಂಬ್ ಸ್ಫೊಟಿಸಿದ್ದರು. ಘಟನೆಯಲ್ಲಿ 12 ಪೊಲೀಸ್ ಸಿಬ್ಬಂದಿ, ಯುವತಿ ಸೇರಿ ಆರು ಜನರು ಗಾಯಗೊಂಡಿದ್ದರು. ಪ್ರಕರಣದ ತನಿಖೆ ಕೈಗೊಂಡ ಸಿಸಿಬಿ ಅಧಿಕಾರಿಗಳು ಶಂಕಿತರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಸರ್ಕಾರದ ಪರ ವಿಶೇಷ ಅಭಿಯೋಜಕರಾಗಿ ರವೀಂದ್ರ ವಾದ ಮಂಡಿಸಿದ್ದರು.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ ಗಳಾದ 120ಬಿ, 121, 121ಎ, 123, 307, 332, 435, 201 ಸ್ಫೋಟಕ ವಸ್ತುಗಳ ಕಾಯಿದೆ ಸೆಕ್ಷನ್ ಗಳಾದ 3,4,5,6 ಮತ್ತು ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಸೆಕ್ಷನ್ ಗಳಾದ 11,16,17,18,19 ಮತ್ತು 20ರ ಅಡಿ ಪ್ರಕರಣ ಪ್ರಕರಣ ದಾಖಲಿಸಲಾಗಿತ್ತು.