ಕೆಎಸ್’ಡಿಎಲ್ ಲಂಚ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿ ಬಂಧಿತರಾಗಿರುವ ಬಿಜೆಪಿಯ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶನಿವಾರ ಜಾಮೀನು ಮಂಜೂರು ಮಾಡಿದೆ.
ಏಪ್ರಿಲ್ 10ರಂದು ಕಾಯ್ದಿರಿಸಿದ್ದ ಆದೇಶವನ್ನು ಜನಪ್ರತಿನಿಧಿಗಳ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಬಿ ಜಯಂತಕುಮಾರ್ ಅವರು ಇಂದು ಪ್ರಕಟಿಸಿದರು.
ಐದು ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್, ಇಬ್ಬರ ಭದ್ರತೆ, ಮೂರು ವಾರಕ್ಕೊಮ್ಮೆ ಲೋಕಾಯುಕ್ತ ಪೊಲೀಸರ ಮುಂದೆ ಹಾಜರಾಗಬೇಕು. ತನಿಖಾಧಿಕಾರಿ ವಶಕ್ಕೆ ಪಾಸ್’ಪೋರ್ಟ್ ಒಪ್ಪಿಸಬೇಕು ಎಂಬ ಷರತ್ತುಗಳನ್ನು ವಿಧಿಸಿ, ವಿರೂಪಾಕ್ಷಪ್ಪ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಕೆಲದಿನಗಳ ಹಿಂದೆ ಕರ್ನಾಟಕ ಹೈಕೋರ್ಟ್ ಮಾಡಾಳ್ ವಿರೂಪಾಕ್ಷಪ್ಪ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿತ್ತು. ಇದರ ಬೆನ್ನಿಗೇ ತುಮಕೂರಿನ ಸಮೀಪ ಲೋಕಾಯುಕ್ತ ಪೊಲೀಸರು ಅವರನ್ನು ಮಾರ್ಚ್ 27ರಂದು ಬಂಧಿಸಿದ್ದರು. ಆನಂತರ ವಿಶೇಷ ನ್ಯಾಯಾಲಯವು ಮಾಡಾಳ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿತ್ತು. ಬಳಿಕ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಈಚೆಗೆ ಮಾಡಾಳ್ ಪುತ್ರ ಪ್ರಶಾಂತ್ ಅವರಿಗೆ ವಿಶೇಷ ನ್ಯಾಯಾಲಯವು ಜಾಮೀನು ನಿರಾಕರಿಸಿತ್ತು.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತಕ್ಕೆ (ಕೆಎಸ್’ಡಿಎಲ್) ಕಚ್ಚಾ ತೈಲ ಪೂರೈಸುವ ಗುತ್ತಿಗೆಯ ಕಾರ್ಯಾದೇಶ ನೀಡಲು ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಮೊದಲ ಆರೋಪಿಯಾಗಿದ್ದು, ಅವರ ಪುತ್ರ ಪ್ರಶಾಂತ್ ಅವರು ಎರಡನೇ ಆರೋಪಿಯಾಗಿದ್ದಾರೆ. ವಿರೂಪಾಕ್ಷಪ್ಪ ಮತ್ತು ಪ್ರಶಾಂತ್ ಸೇರಿ ಐವರ ವಿರುದ್ಧ ಭ್ರಷ್ಟಚಾರ ನಿಯಂತ್ರಣ ಕಾಯಿದೆ ಸೆಕ್ಷನ್ 7(ಎ), 7ಬಿ ಅಡಿ ಪ್ರಕರಣ ದಾಖಲಿಸಲಾಗಿದೆ.