ಮನೆ ಕಾನೂನು ನಾಗರಿಕ ವ್ಯವಸ್ಥೆಯಲ್ಲಿ ಬುಲ್ಡೋಜರ್ ನ್ಯಾಯ ಒಪ್ಪುವಂಥದ್ದಲ್ಲ: ಸುಪ್ರೀಂ ಕೋರ್ಟ್

ನಾಗರಿಕ ವ್ಯವಸ್ಥೆಯಲ್ಲಿ ಬುಲ್ಡೋಜರ್ ನ್ಯಾಯ ಒಪ್ಪುವಂಥದ್ದಲ್ಲ: ಸುಪ್ರೀಂ ಕೋರ್ಟ್

0

ಅಪರಾಧ ಪ್ರಕ್ರಿಯೆಯಲ್ಲಿ ಆರೋಪಿಗಳಾಗಿರುವವರನ್ನು ಶಿಕ್ಷಿಸಲು ವಿಚಾರಣೆ ನಡೆಸದೆ ಅವರ  ಮನೆ ಅಥವಾ ಅಂಗಡಿಗಳನ್ನು ನೆಲಸಮ ಮಾಡಿ, ಬುಲ್ಡೋಜರ್ ಮೂಲಕ ನ್ಯಾಯ ಒದಗಿಸುವುದು ನ್ಯಾಯಶಾಸ್ತ್ರದ ನಾಗರಿಕ ವ್ಯವಸ್ಥೆಗೆ ಗೊತ್ತಿಲ್ಲ. ಇದು ಕಾನೂನು ಆಳ್ವಿಕೆಯಲ್ಲಿ ಸ್ವೀಕಾರಾರ್ಹ ಅಲ್ಲ ಎಂದು ಸುಪ್ರೀಂ ಕೋರ್ಟ್ ಈಚೆಗೆ ಹೇಳಿದೆ.

Join Our Whatsapp Group

ಕಾನೂನುಬಾಹಿರ ಅತಿಕ್ರಮಣ ಅಥವಾ ಅಕ್ರಮವಾಗಿ ನಿರ್ಮಿಸಲಾದ ಕಟ್ಟಡಗಳನ್ನು ತೆರವುಗೊಳಿಸುವ ಮುನ್ನ ಕಾನೂನು ಪ್ರಕ್ರಿಯೆ ಪಾಲಿಸಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ತಿಳಿಸಿದೆ.

 “ಬುಲ್ಡೋಜರ್ ಮೂಲಕ ನ್ಯಾಯ ಒದಗಿಸುವುದು ನ್ಯಾಯಶಾಸ್ತ್ರದ ನಾಗರಿಕ ವ್ಯವಸ್ಥೆಗೆ ಗೊತ್ತಿಲ್ಲ. ಸರ್ಕಾರದ ಯಾವುದೇ ಅಂಗ ಇಲ್ಲವೇ ಅಧಿಕಾರಿಯ ದಬ್ಬಾಳಿಕೆ ಮತ್ತು ಕಾನೂನುಬಾಹಿರ ನಡೆಯನ್ನು ಅನುಮತಿಸಿದರೆ ಬಾಹ್ಯ ಕಾರಣಗಳಿಗೆ ಪ್ರತೀಕಾರವಾಗಿ ಜನರ ಆಸ್ತಿ ಧ್ವಂಸಮಾಡುವ ಗಂಭೀರ ಅಪಾಯವಿದೆ. ಜನರ ಆಸ್ತಿ ಪಾಸ್ತಿಗಳನ್ನು ನಾಶ ಮಾಡುವ ಬೆದರಿಕೆ ಮೂಲಕ ಅವರ ಧ್ವನಿ ಹತ್ತಿಕ್ಕುವಂತಿಲ್ಲ” ಎಂದು ನ್ಯಾಯಾಲಯ ತಿಳಿಸಿದೆ.

ಸಿಜೆಐ ಚಂದ್ರಚೂಡ್ ಅವರು ನಿವೃತ್ತಿಗೆ ಮುನ್ನ ಬರೆದ ತಮ್ಮ ಕೊನೆಯ ತೀರ್ಪಿನಲ್ಲಿ ಈ ಅವಲೋಕನ ಮಾಡಲಾಗಿದೆ.

ಉತ್ತರ ಪ್ರದೇಶದ ಅಧಿಕಾರಿಗಳು ನೋಟಿಸ್ ನೀಡದೆ ತಮ್ಮ ಪೂರ್ವಿಕರು ವಾಸಿಸುತ್ತಿದ್ದ ಮನೆಯನ್ನು ನೆಲಸಮಗೊಳಿಸಿದ್ದಾರೆ ಎಂದು ಹಿರಿಯ ಪತ್ರಕರ್ತರೊಬ್ಬರು 2019ರಲ್ಲಿ ಸುಪ್ರೀಂ ಕೋರ್ಟ್‌ಗೆ ಬರೆದ ಪತ್ರಕ್ಕೆ ಸಂಬಂಧಿಸಿದಂತೆ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ರಾಜ್ಯ ಸರ್ಕಾರದ ಇಡೀ ಪ್ರಕ್ರಿಯೆ ದಬ್ಬಾಳಿಕೆಯಿಂದ ಕೂಡಿದೆ ಎಂದ ಸುಪ್ರೀಂ ಕೋರ್ಟ್ ಸಂತ್ರಸ್ತರಿಗೆ ಮಧ್ಯಂತರ ಪರಿಹಾರವಾಗಿ ₹ 25 ಲಕ್ಷ ನೀಡುವಂತೆ ನಿರ್ದೇಶಿಸಿದೆ.

ರಾಜ್ಯ ಸರ್ಕಾರ ಹೀಗೆ ದಬ್ಬಾಳಿಕೆಯ ಮತ್ತು ಏಕಪಕ್ಷೀಯ ಕ್ರಮಕ್ಕೆ ಮುಂದಾಗುವಂತಿಲ್ಲ. ಸಾರ್ವಜನಿಕ ಆಸ್ತಿ ಮತ್ತು ಅತಿಕ್ರಮಿತ ಆಸ್ತಿಯನ್ನು ಅಕ್ರಮ ರೀತಿಯಲ್ಲಿ ವಶಪಡಿಸಿಕೊಳ್ಳುವುದನ್ನು ಕಾನೂನು ಮನ್ನಿಸುವುದಿಲ್ಲ ಮನುಷ್ಯನ ಅಂತಿಮ ಭದ್ರ ನೆಲೆ ಅವನ ಮನೆಯಾಗಿದೆ. ಅಂತಹ ಅತಿಕ್ರಮಣಗಳನ್ನು ಎದುರಿಸಲು ಸಾಕಷ್ಟು ಕಾನೂನುಗಳಿವೆ. ಕಾನೂನಿನಲ್ಲಿ ಒದಗಿಸಿದ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಬುಲ್ಡೋಜರ್ ನ್ಯಾಯ ಸ್ವೀಕಾರಾರ್ಹವಲ್ಲ ಎಂದ ಅದು ಅಂತಹ ಕಾನೂನುಬಾಹಿರ ಕ್ರಮ ಕೈಗೊಳ್ಳುವ ಅಥವಾ ಅನುಮೋದಿಸುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂಬುದಾಗಿ ತಿಳಿಸಿತು.

ರಸ್ತೆ ವಿಸ್ತರಣೆ ಯೋಜನೆಗಳಲ್ಲಿ ಅತಿಕ್ರಮಣದ ವಿರುದ್ಧ, ಕ್ರಮ ಕೈಗೊಳ್ಳುವ ಮುನ್ನ ತಾನು ತೀರ್ಪಿನಲ್ಲಿ ನೀಡಿರುವ ವಿವಿಧ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಕೂಡ ಅದು ಹೇಳಿದೆ.

ರಸ್ತೆ ವಿಸ್ತರಣೆಗಾಗಿ ಪಾಲಿಸಬೇಕಾದ ಮಾರ್ಗಸೂಚಿ ಜಾರಿಗಾಗಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪ್ರಸ್ತುತ ತೀರ್ಪಿನ ಪ್ರತಿ ಒದಗಿಸುವಂತೆ ನ್ಯಾಯಾಲಯ ತನ್ನ ರಿಜಿಸ್ಟ್ರಾರ್‌ ಗೆ (ನ್ಯಾಯಾಂಗ) ನಿರ್ದೇಶನ ನೀಡಿದೆ.