ಮನೆ ರಾಜ್ಯ ರಾತ್ರಿ 11 ರ ಬಳಿಕ ವ್ಯಾಪಾರ ಬಂದ್, ನಿರಂತರ ತಪಾಸಣೆ: ಮೈಸೂರು ನಗರ ಪೊಲೀಸ್ ಆಯುಕ್ತರ...

ರಾತ್ರಿ 11 ರ ಬಳಿಕ ವ್ಯಾಪಾರ ಬಂದ್, ನಿರಂತರ ತಪಾಸಣೆ: ಮೈಸೂರು ನಗರ ಪೊಲೀಸ್ ಆಯುಕ್ತರ ಸೂಚನೆ

0

ಮೈಸೂರು(Mysuru):  ಮಂಗಳೂರು  ಕುಕ್ಕರ್ ಬಾಂಬ್ ಸ್ಪೋಟದ ರೂವಾರಿ ಮೈಸೂರಿನಲ್ಲಿ ನೆಲೆಸಿದ್ದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಮೈಸೂರು ನಗರ ಪೊಲೀಸರು ನಗರದಲ್ಲಿ ಭದ್ರತೆ ಹೆಚ್ಚಿಸಿದ್ದು, ಬಿಗಿ ಕ್ರಮಗಳನ್ನು ಕೈಗೊಂಡಿದ್ದಾರೆ.

ಮೈಸೂರು ನಗರ ಪ್ರವೇಶಿಸುವ 9 ಸ್ಥಳಗಳಲ್ಲಿ ಹಾಗೂ ನಗರದೊಳಗೂ 20 ಕ್ಕೂ ಹೆಚ್ಚು ಆಯಕಟ್ಟಿನ ಸ್ಥಳಗಳಲ್ಲಿ ವಾಹನಗಳ ನಿರಂತರ ತಪಾಸಣೆ ನಡೆಸಲಾಗುತ್ತಿದೆ.

ರಾತ್ರಿ 11ರ ಬಳಿಕ ಯಾರು ಕೂಡ ಅನಗತ್ಯವಾಗಿ ಓಡಾಡಬಾರದು. ಅನಗತ್ಯವಾಗಿ ಓಡಾಡುವವರನ್ನು ಪೊಲೀಸರು ಕರೆದು ತಪಾಸಣೆ ಮಾಡುತ್ತಾರೆ. ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ.

ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಮಾತನಾಡಿ, ವ್ಯಾಪಾರಸ್ಥರು ಕೂಡ ಅನಗತ್ಯವಾಗಿ ರಾತ್ರಿ 11 ಗಂಟೆ ಬಳಿಕ ವಹಿವಾಟು ನಡೆಸಬೇಡಿ. ಹಳೇ ರೌಡಿಶೀಟರ್ ಗಳ ಚಲನವಲನಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಅಗತ್ಯ ಬಿದ್ದರೆ ಸಮಾಜ ಘಾತುಕ ವ್ಯಕ್ತಿಗಳನ್ನು ಗಡಿಪಾರು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮೈಸೂರಿಗೆ ಕೆಲಸ ಹುಡುಕಿಕೊಂಡು ವಲಸೆ ಬರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಬೇರೆಡೆಯಿಂದ ವಲಸೆ ಬಂದು ಮನೆಕೆಲಸ, ಸೆಕ್ಯೂರಿಟಿ ಕೆಲಸ ಸೇರಿದಂತೆ ಇನ್ನಿತರ ವೃತ್ತಿ ಮಾಡುವವರ ಸಂಪೂರ್ಣ ಮಾಹಿತಿಗಳನ್ನು ಸಂಗ್ರಹಿಸಿ ಪೊಲೀಸರಿಗೆ ನೀಡಬೇಕು. ಮಾಹಿತಿಗಳನ್ನು ನೀಡಿದರೆ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ. ಹೋಟೆಲ್ ಗಳಲ್ಲಿ ವಾಸ್ತವ್ಯ ಹೂಡುವವರಿಗೂ ಅಗತ್ಯ ದಾಖಲಾತಿಗಳನ್ನು ನೀಡಿದರೆ ಮಾತ್ರ ಕೊಠಡಿ ಬಾಡಿಗೆಗೆ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.