ಮನೆ ರಾಜ್ಯ ಎಸಿಬಿ ರದ್ದು: ಕೋರ್ಟ್‌ ಆದೇಶ ನೋಡಿದ ಬಳಿಕ ಪ್ರತಿಕ್ರಿಯಿಸುವೆ ಸಿದ್ದರಾಮಯ್ಯ

ಎಸಿಬಿ ರದ್ದು: ಕೋರ್ಟ್‌ ಆದೇಶ ನೋಡಿದ ಬಳಿಕ ಪ್ರತಿಕ್ರಿಯಿಸುವೆ ಸಿದ್ದರಾಮಯ್ಯ

0

ಚಿಕ್ಕಬಳ್ಳಾಪುರ (Chikkaballapura): ಸಿದ್ದರಾಮಯ್ಯ ಸರ್ಕಾರ ಹುಟ್ಟುಹಾಕಿದ್ದ ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ಕರ್ನಾಟಕ ಹೈಕೋರ್ಟ್‌ ರದ್ದುಪಡಿಸಿದೆ. ಈ ಬಗ್ಗೆ ಮಾತನಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆದೇಶವನ್ನು ನೋಡಿದ ಬಳಿಕ ಪ್ರತಿಕ್ರಿಯಿಸುತ್ತೇನೆ ಎಂದಿದ್ದಾರೆ.

ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ತೀರ್ಮಾನ ಗೌರವಿಸುತ್ತೇವೆ. ಆದೇಶ ಏನಿದೆ ಎನ್ನುವುದನ್ನು ನೋಡಿಲ್ಲ. ಆದೇಶ ನೋಡಿದ ನಂತರ ಪ್ರತಿಕ್ರಿಯಿಸುತ್ತೇನೆ ಎಂದರು.

ಲೋಕಾಯುಕ್ತದ ಬೇರ್ಪಡಿಸಿ ಎಸಿಬಿ ರಚಿಸಿದ್ದೆವು. ಎಸಿಬಿ ಸ್ವತಂತ್ರ ತನಿಖಾ ಸಂಸ್ಥೆ ಆಗಿತ್ತು. ಕರ್ನಾಟದಲ್ಲಿ ಅಷ್ಟೇ ಅಲ್ಲ ಅನೇಕ ರಾಜ್ಯಗಳಲ್ಲಿ ಎಸಿಬಿ ಇದೆ. ಎಸಿಬಿ ಲೋಕಾಯುಕ್ತದಲ್ಲಿ ಇರಬೇಕು. ಸ್ವತಂತ್ರ ಅಸ್ತಿತ್ವ ಬೇಡ ಎಂದು ಈಗ ಹೈಕೋರ್ಟ್ ತೀರ್ಮಾನಿಸಿದೆ ಎಂದರು.

ಎಸಿಬಿಯನ್ನು ರದ್ದುಗೊಳಿಸಿರುವ ಹೈಕೋರ್ಟ್‌ ಎಸಿಬಿಯಲ್ಲಿ ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳನ್ನು ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ವರ್ಗಾಯಿಸಲು ಆದೇಶಿಸಿದೆ.

2016 ರಲ್ಲಿ ಲೋಕಾಯುಕ್ತ ಅಧಿಕಾರವನ್ನು ಮೊಟಕುಗೊಳಿಸಿ ಸಿದ್ದರಾಮಯ್ಯ ಸರ್ಕಾರ ಎಸಿಬಿ ರಚಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿಗಳು ದಾಖಲಾಗಿದ್ದವು. ವಿಚಾರಣೆ ನಂತರ ಇಂದು ನ್ಯಾ.ಬಿ.ವೀರಪ್ಪ ಹಾಗೂ ನ್ಯಾ ಕೆ.ಎಸ್.ಹೇಮಲೇಖ ಅವರಿದ್ದ ಪೀಠ ಈ ಆದೇಶ ಮಾಡಿದೆ.

ಎಸಿಬಿಯ ರಚನೆಯನ್ನು ಪ್ರಶ್ನಿಸಿ ವಕೀಲ ಚಿದಾನಂದ ಅರಸ್, ವಕೀಲರ ಸಂಘ ಮತ್ತು ಸಾಮಾಜಿಕ ಹೋರಾಟಗಾರ ಎಸ್‌.ಆರ್‌.ಹಿರೇಮಠ ಅವರ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.

ಹಿಂದಿನ ಲೇಖನವ್ಯಾಯಾಮದ ಬಳಿಕ ಸೇವಿಸಬೇಕಾದ ಆಹಾರಗಳು
ಮುಂದಿನ ಲೇಖನಸ್ಯಾಂಡಲ್‌ ವುಡ್‌ ಗೆ ಎಂಟ್ರಿ ಕೊಟ್ಟ ನಟಿ ಮಾಲಾಶ್ರೀ ಪುತ್ರಿ ರಾಧನಾ