ಮನೆ ರಾಜ್ಯ ಮಾಜಿ ಪ್ರಧಾನಿ ದೇವೇಗೌಡ ಅವರ 93ನೇ ಜನ್ಮ ದಿನದ ಹಿನ್ನೆಲೆ ಕ್ಯಾನ್ಸರ್ ಜಾಗೃತಿ ಜಾಥಾ

ಮಾಜಿ ಪ್ರಧಾನಿ ದೇವೇಗೌಡ ಅವರ 93ನೇ ಜನ್ಮ ದಿನದ ಹಿನ್ನೆಲೆ ಕ್ಯಾನ್ಸರ್ ಜಾಗೃತಿ ಜಾಥಾ

0

ಬೆಂಗಳೂರು: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡ ಅವರ 93ನೇ ಜನ್ಮ ದಿನದ ಹಿನ್ನೆಲೆ, ನಗರ ಜೆಡಿಎಸ್ ಘಟಕದ ವತಿಯಿಂದ ಕ್ಯಾನ್ಸರ್ ಜಾಗೃತಿ ಜಾಥಾವನ್ನು ಇಂದು ಏರ್ಪಡಿಸಲಾಗಿತ್ತು.

ಈ ಬೃಹತ್ ಜಾಥಾ ಜಯನಗರ 9ನೇ ಬ್ಲಾಕ್‌ನ ಬನ್ನಿ ಬೇಕರಿ ಸರ್ಕಲ್‌ನಿಂದ ಆರಂಭವಾಗಿ, ಜಯನಗರ 4ನೇ ಬ್ಲಾಕ್ ಮಾರ್ಗವಾಗಿ ಸೌತ್ ಎಂಡ್ ಸರ್ಕಲ್‌ನ ಗುಣಶೀಲ ಆಸ್ಪತ್ರೆಗೆ ಮುಕ್ತಾಯವಾಯಿತು. ಸುಮಾರು 6 ಕಿ.ಮೀ. ದೂರವಿದ್ದ ಈ ಜಾಥಾದ ನೇತೃತ್ವವನ್ನು ಮಾಜಿ ಶಾಸಕ ಹಾಗೂ ನಗರ ಜೆಡಿಎಸ್ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ ವಹಿಸಿದ್ದರು.

ಕ್ಯಾನ್ಸರ್ ತಡೆಗಟ್ಟುವಿಕೆ ಬಗ್ಗೆ ಜಾಗೃತಿ ಮೂಡಿಸಲು, ಹೋಟೆಲ್ ಮಾಲೀಕರಿಗೆ ಮತ್ತು ಸಾರ್ವಜನಿಕರಿಗೆ ರಾಸಾಯನಿಕ ಮಿಶ್ರಿತ ಆಹಾರದ ದುಷ್ಪರಿಣಾಮಗಳ ಕುರಿತು ಕರಪತ್ರಗಳನ್ನು ವಿತರಿಸಲಾಯಿತು.

“ಇತ್ತೀಚಿನ ದಿನಗಳಲ್ಲಿ ಎಲ್ಲ ವಯಸ್ಸಿನಲ್ಲಿಯೂ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಜೀವನ ಶೈಲಿ ಮತ್ತು ರಾಸಾಯನಿಕ ಆಹಾರದ ಪರಿಣಾಮವಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯ” ಎಂದು ರಮೇಶ್ ಗೌಡ ಹೇಳಿದರು. ದೇವೇಗೌಡರ ಜನ್ಮದಿನದ ಅಂಗವಾಗಿ ಇಂಥ ಸಾಮಾಜಿಕ ಉದ್ದೇಶದ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.

ಈ ಜಾಥಾದಲ್ಲಿ ಜೆಡಿಎಸ್‌ನ ಹಲವು ಮುಖಂಡರು, ಮಹಿಳಾ ಮುಖಂಡರು, ಬೆಂಗಳೂರು ನಗರದ ವಿಭಾಗಗಳ ಅಧ್ಯಕ್ಷರು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.