ಬೆಂಗಳೂರು: ಬೆಂಗಳೂರು ನಗರದಲ್ಲಿ ಮತ್ತೆ ವಾಹನಗಳ ಟೋಯಿಂಗ್ ಪ್ರಕ್ರಿಯೆ ಪುನರಾರಂಭಿಸಲು ಸರ್ಕಾರ ತೀರ್ಮಾನಿಸಿರುವುದನ್ನು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರವಾಗಿ ವಿರೋಧಿಸಿದ್ದಾರೆ. ಈ ನಿರ್ಧಾರದ ಹಿಂದೆ ಸಾರ್ವಜನಿಕರಿಂದ ಹಣ ವಸೂಲಿ ಮಾಡುವ ಉದ್ದೇಶವಿದೆ ಎಂದು ಅವರು ಕಟು ಟೀಕೆ ಮಾಡಿದ್ದಾರೆ.
ನಿಖಿಲ್ ತಮ್ಮ ಎಕ್ಸ್ ಖಾತೆಯಲ್ಲಿ ಸರ್ಕಾರದ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದು, “2022ರಲ್ಲಿ ಸಾರ್ವಜನಿಕ ಆಕ್ರೋಶದ ಬೆನ್ನಲ್ಲೇ ಟೋಯಿಂಗ್ ಸೇವೆ ಸ್ಥಗಿತಗೊಂಡಿತ್ತು. ಈಗ ಮತ್ತೆ ಅದನ್ನು ಆರಂಭಿಸುವ ಕ್ರಮದ ಹಿಂದೆ ಕೇವಲ ಹಣದ ವಸೂಲಿ ಉದ್ದೇಶವಿದೆ” ಎಂದು ಹೇಳಿದ್ದಾರೆ.
“ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು, ಪಾರ್ಕಿಂಗ್ ಸೌಲಭ್ಯಗಳ ಕೊರತೆ ಇದ್ದರೂ ಕೂಡ, ಟೋಯಿಂಗ್ ಮೂಲಕ ಜನರಿಗೆ ಕಿರಿಕಿರಿ ಮಾಡಲಾಗುತ್ತಿದೆ. ಮೂಲಭೂತ ಸೌಲಭ್ಯಗಳನ್ನೇ ನೀಡದಿರುವ ಸರ್ಕಾರ, ಜನರಿಂದ ಹಣ ಕೀಳುವ ದಿಕ್ಕಿಗೆ ಹರಿದಿದೆ” ಎಂದು ನಿಖಿಲ್ ವಾಗ್ದಾಳಿ ನಡೆಸಿದ್ದಾರೆ.
ನಿಖಿಲ್ ಕಾಂಗ್ರೆಸ್ ಸರ್ಕಾರದ ಇತ್ತೀಚಿನ ಹಲವು ನಿರ್ಧಾರಗಳನ್ನೂ ಉಲ್ಲೇಖಿಸಿದ್ದು, “ನೋಂದಣಿ ಶುಲ್ಕ, ಮೆಟ್ರೋ ಹಾಗೂ ಬಸ್ ದರ ಏರಿಕೆ, ದಿನಬಳಕೆ ವಸ್ತುಗಳ ಬೆಲೆ ಏರಿಕೆ, ಮದ್ಯದ ಮೇಲೆ ಹೆಚ್ಚುವರಿ ತೆರಿಗೆ – ಈ ಎಲ್ಲವನ್ನೂ ಸೇರಿ ಸರ್ಕಾರ ಏನೇನು ಮಾಡಿದರೂ, ರಾಜ್ಯದ ಖಾಲಿ ಬೊಕ್ಕಸ ತುಂಬದಂತಾಗಿದೆ” ಎಂದಿದ್ದಾರೆ.
“ಸಂಚಾರಿ ಪೊಲೀಸ್ ಇಲಾಖೆ ಹಾಗೂ ಟೋಯಿಂಗ್ ವಾಹನಗಳ ಮೂಲಕ ‘ಕಲೆಕ್ಷನ್’ ನಡೆಸಿ, ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಈ ಪಿತೂರಿ ನಡೆಯುತ್ತಿದೆ ಎಂದು ಜನರಲ್ಲಿ ಅನುಮಾನ ಮೂಡುತ್ತಿದೆ” ಎಂದು ನಿಖಿಲ್ ತೀವ್ರವಾಗಿ ಪ್ರಶ್ನಿಸಿದ್ದಾರೆ.
“ಬ್ರಾಂಡ್ ಬೆಂಗಳೂರು ಕನಸುಗಾರ ಡಿಕೆ ಶಿವಕುಮಾರ್ ಅವರೇ, ಟೋಯಿಂಗ್ ವಾಹನಗಳು ಸರಾಗವಾಗಿ ಓಡಾಡಲು ರಸ್ತೆ ಗುಂಡಿಗಳನ್ನು ಸರಿಮಾಡುವಿರಾ?” ಎಂದು ನಿಖಿಲ್ ವ್ಯಂಗ್ಯವಾಡಿದ್ದಾರೆ.














