ಮೈಸೂರು(Mysuru): ಇಲ್ಲಿನ ಕಡಕೊಳ ಬಳಿ ನಡೆದ ರಸ್ತೆ ಅಪಘಾತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಅವರ ಕಾರು ಅಪಘಾತವಾಗಿದ್ದು, ಗಾಯಾಳುಗಳನ್ನು ಜೆಎಸ್’ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಹಿನ್ನೆಲೆ ಜೆಎಸ್ಎಸ್ ಆಸ್ಪತ್ರೆಗೆ ಸುತ್ತೂರು ಮಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಭೇಟಿ ನೀಡಿದರು. ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಹಾಗು ಕುಟುಂಬ ಸದಸ್ಯರ ಆರೋಗ್ಯ ವಿಚಾರಿಸಿದ್ದಾರೆ.
ಜೆ.ಎಸ್.ಎಸ್. ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಮಧು ಮಾತನಾಡಿ, ಪ್ರಧಾನಿ ಸಹೋದರ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿ ಐದು ಮಂದಿ ಅಸ್ಪತ್ರೆಗೆ ದಾಖಲಾದರು. ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಿದ್ದೇವೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೊಮ್ಮಗ ಆರು ವರ್ಷದ ಬಾಲಕನ ತಲೆಯ ಎಡಭಾಗದ ಎಲುಬಿಗೆ ಪೆಟ್ಟಾಗಿದೆ. ಅವರೊಬ್ಬರಿಗೆ ಮಾತ್ರ ಹೆಚ್ಚು ಗಾಯಗಳಾಗಿತ್ತು. ಎಲ್ಲರಿಗೂ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಿಸಲಾಗಿದೆ. ಯಾರಿಗೂ ಯಾವುದೇ ಆತಂಕಪಡುವಂತಹ ಗಾಯಗಳಾಗಿಲ್ಲ ಎಂದರು.
ಅಪಘಾತದಲ್ಲಿ ಮೋದಿ ಸಹೋದರ 70 ವರ್ಷದ ಪ್ರಹ್ಲಾದ್ ದಾಮೋದರ್ ಮೋದಿ, ಪುತ್ರ 40 ವರ್ಷದ ಮೆಹೂಲ್ ಪ್ರಹ್ಲಾದ್ ಮೋದಿ, ಮೋದಿ ಸಹೋದರನ ಸೊಸೆ35 ವರ್ಷದ ಜಿಂದಾಲ್ ಮೋದಿ, ಮೊಮ್ಮಗ 06 ವರ್ಷದ ಮಾಸ್ಟರ್ ಮೆಹತ್ ಮೆಹೋಲ್ ಮೋದಿ ಮತ್ತು ಕಾರು ಚಾಲಕ 46 ವರ್ಷದ ಸತ್ಯನಾರಾಯಣ ಗಾಯಗೊಂಡಿದ್ದಾರೆ.
ಅಪಘಾತದ ಕುರಿತು ಸಂಸದ ಪ್ರತಾಪ್ ಸಿಂಹ ಮಾತನಾಡಿ, ಕಾರಿನಲ್ಲಿ ಐದು ಮಂದಿ ಪ್ರಯಾಣಿಸುತ್ತಿದ್ದರು. ಕಾರು ಚಾಲಕನಿಗೆ ನಿದ್ರೆಯ ಮಂಪರು ಬಂದಂತಾದ ಕಾರಣ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದರು.