ಮನೆ ಕಾನೂನು ನ್ಯಾಯಾಲಯಗಳು ವಿಧಿಸುವ ನಿರ್ಬಂಧದಿಂದ ಜಾಗತಿಕ ಸ್ತರದಲ್ಲಿ ನಿರಂಕುಶಾಡಳಿತ ಸಕ್ರಮ: ದೆಹಲಿ ಹೈಕೋರ್ಟ್‌ ನಲ್ಲಿ ಎಕ್ಸ್ ಆತಂಕ

ನ್ಯಾಯಾಲಯಗಳು ವಿಧಿಸುವ ನಿರ್ಬಂಧದಿಂದ ಜಾಗತಿಕ ಸ್ತರದಲ್ಲಿ ನಿರಂಕುಶಾಡಳಿತ ಸಕ್ರಮ: ದೆಹಲಿ ಹೈಕೋರ್ಟ್‌ ನಲ್ಲಿ ಎಕ್ಸ್ ಆತಂಕ

0

‘ಗಾಡ್‌ಮ್ಯಾನ್‌ ಟು ಟೈಕೂನ್‌ – ದಿ ಅನ್‌ಟೋಲ್ಡ್‌ ಸ್ಟೋರಿ ಆಫ್‌ ಬಾಬಾ ರಾಮ್‌ದೇವ್‌’ ಹೆಸರಿನ ಜೀವನಚರಿತ್ರೆಯ ಪುಸ್ತಕದ ಆಯ್ದ ಭಾಗಗಳಿರುವ ಆನ್‌ಲೈನ್ ಪೋಸ್ಟ್‌ಗಳನ್ನು ಜಾಗತಿಕವಾಗಿ ನಿರ್ಬಂಧಿಸಿ 2019ರಲ್ಲಿ ಹೊರಡಿಸಲಾಗಿದ್ದ ನ್ಯಾಯಾಲಯದ ಆದೇಶ ಅಪಾಯಕಾರಿ ಪೂರ್ವನಿದರ್ಶನಗಳಿಗೆ ಕಾರಣವಾಗಬಹುದು ಎಂದು ಸಾಮಾಜಿಕ ಜಾಲತಾಣ ಎಕ್ಸ್ (ಈ ಹಿಂದಿನ ಟ್ವಿಟರ್) ದೆಹಲಿ ಹೈಕೋರ್ಟ್‌ನಲ್ಲಿ ಕಳವಳ ವ್ಯಕ್ತಪಡಿಸಿದೆ.

Join Our Whatsapp Group

ಅಂತಹ ಜಾಗತಿಕ ನಿರ್ಬಂಧಕಾದೇಶಗಳು ಸಾರ್ವಜನಿಕ ಚರ್ಚೆಯನ್ನು ನಿಗ್ರಹಿಸಿ ಸರ್ವಾಧಿಕಾರಿ ಸರ್ಕಾರಗಳ ನಡೆಯನ್ನು ಕಾನೂನುಬದ್ಧಗೊಳಿಸುತ್ತವೆ, ಜೊತೆಗೆ ಸಾರ್ವಜನಿಕ ಹಿತಾಸಕ್ತಿಯಲ್ಲಿ ಲಭ್ಯವಿರುವ ಮಾಹಿತಿಯನ್ನು ನಿಗ್ರಹಿಸುವುದಕ್ಕಾಗಿ ದಾವೆಗಳನ್ನು ದುರುಪಯೋಗಪಡಿಸಿಕೊಳ್ಳಲು ಕಾರಣವಾಗುತ್ತದೆ ಎಂದು ಎಕ್ಸ್‌ ವಾದಿಸಿದೆ.

“ವಿವಿಧ ದೇಶಗಳಲ್ಲಿನ ನ್ಯಾಯಾಲಯಗಳು ತಮ್ಮ ಸ್ಥಳೀಯ ಕಾನೂನುಗಳ ಆಧಾರದ ಮೇಲೆ ಜಾಗತಿಕ ನಿರ್ಬಂಧದ ಆದೇಶ ನೀಡಿದರೆ, ಅದರಿಂದ ಹೆಚ್ಚು ನಿರ್ಬಂಧಿತ ಕಾನೂನು ಹೊಂದಿರುವ ದೇಶ ಅಂತರ್ಜಾಲದಲ್ಲಿ ಯಾವ ವಸ್ತುವಿಷಯ ಲಭ್ಯವಿರಬೇಕು ಎಂಬುದನ್ನು ನಿರ್ದೇಶಿಸುವ ಪರಿಸ್ಥಿತಿಗೆ ಕಾರಣವಾಗುತ್ತದೆ. ವಿಶ್ವದ ಅತ್ಯಂತ ನಿರ್ಬಂಧಿತ ದೇಶ ಅನುಮತಿಸುವ ವಸ್ತುವಿಷಯವನ್ನು ಮಾತ್ರ ಅಂತರ್ಜಾಲದಲ್ಲಿ ಪ್ರದರ್ಶಿಸಬೇಕು ಎನ್ನುವಂತಾಗುತ್ತದೆ. ಹಾಗೆ ಜಾಗತಿಕವಾಗಿ ವಸ್ತುವಿಷಯವನ್ನು ತೆಗೆದುಹಾಕುವುದು ವಾಕ್ ಸ್ವಾತಂತ್ರ್ಯ ಮತ್ತು ಮಾಹಿತಿ ಪಡೆಯುವ ಹಕ್ಕುಗಳಿಗೆ ಸಂಪೂರ್ಣವಾಗಿ ಬೆಲೆ ನೀಡದ ನಿರಂಕುಶಾಡಳಿತವನ್ನು ಸಕ್ರಮಗೊಳಿಸುವ ಅಪಾಯಕಾರಿ ಪೂರ್ವನಿದರ್ಶನಕ್ಕೆ ಕಾರಣವಾಗಬಹುದು” ಎಂದು ಅದು ವಿವರಿಸಿದೆ.

ಪ್ರಿಯಾಂಕಾ ಪಾಠಕ್ ನಾರಾಯಣ್ ಬರೆದಿರುವ ಮತ್ತು ಜಗರ್‌ನಾಟ್‌ ಬುಕ್ಸ್ ಪ್ರಕಟಿಸಿದ ಪುಸ್ತಕದ ಕೆಲ ಆಯ್ದ ಭಾಗಗಳನ್ನು ಜಾಗತಿಕವಾಗಿ ನಿರ್ಬಂಧಿಸುವಂತೆ ನಿರ್ದೇಶಿಸುವ ಅಕ್ಟೋಬರ್ 2019ರ ಏಕ-ಸದಸ್ಯ ಪೀಠದ ಆದೇಶದ ವಿರುದ್ಧ ಮೇಲ್ಮನವಿಯ ಭಾಗವಾಗಿ ಸಲ್ಲಿಸಿದ ಲಿಖಿತ ವಾದದಲ್ಲಿ ಎಕ್ಸ್‌ ಈ ವಿಚಾರಗಳನ್ನು ತಿಳಿಸಿದೆ.

ಲೇಖಕರು ತಮ್ಮ ಪುಸ್ತಕದಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ವಿಷಯವನ್ನು ಪ್ರಕಟಿಸಿದ್ದಾರೆ ಎಂದು ಆರೋಪಿಸಿ ರಾಮದೇವ್ ಅವರು ಮೊಕದ್ದಮೆ ಹೂಡಿದ್ದರು. ಈ ಹಿನ್ನೆಲೆಯಲ್ಲಿ ಏಕಸದಸ್ಯ ಪೀಠ ರಾಮದೇವ್‌ ಪರವಾಗಿ ತೀರ್ಪು ನೀಡಿತ್ತು.  ನ್ಯಾಯಮೂರ್ತಿ ಅನು ಮಲ್ಹೋತ್ರಾ ಅವರು ಯೋಗ ಗುರುವಿನ ವಿರುದ್ಧ “ಆಧಾರರಹಿತ ಆರೋಪ” ಮಾಡುವ ಮಟ್ಟಿಗೆ ಪುಸ್ತಕವನ್ನು ಪ್ರಕಟಿಸುವುದು, ವಿತರಿಸುವುದು ಮತ್ತು ಮಾರಾಟ ಮಾಡದಂತೆ ಪ್ರಕಾಶನ ಸಂಸ್ಥೆ ಜಗ್ಗರ್‌ನಾಟ್‌ ಬುಕ್ಸ್‌ ನಿರ್ಬಂಧ ವಿಧಿಸಿದ್ದರು.

ಜಗರ್‌ನಾಟ್‌  ಬುಕ್ಸ್ ಜೀವನಚರಿತ್ರೆಯನ್ನು ಪ್ರಕಟಿಸಲು ಮತ್ತು ಮಾರಾಟ ಮಾಡಲು ಬಯಸುವುದೇ ಆದಲ್ಲಿ, ಬಾಬಾ ರಾಮ್‌ದೇವ್ ಅವರ ಮಿತ್ರ ಶಂಕರ್ ದೇವ್ ಜೀ ಅವರ ಸಾವು ಮತ್ತು ಅವರ ಗುರು ಸ್ವಾಮಿ ಯೋಗಾನಂದರ ಕಣ್ಮರೆಗೆ ಸಂಬಂಧಿಸಿದ ಪುಸ್ತಕದ ಭಾಗಗಳನ್ನು ತೆಗೆದುಹಾಕಬೇಕು ಎಂದು 2018 ರ ಆದೇಶ ಹೇಳಿತ್ತು. ತೀರ್ಪನ್ನು ಜಗ್ಗರ್‌ನಾಟ್‌ ವಿಭಾಗೀಯ ಪೀಠದೆದುರು ಪ್ರಶ್ನಿಸಿತ್ತು.

ಆದರೆ ಪ್ರಕಾಶಕರ ಮೇಲ್ಮನವಿ ಇನ್ನೂ ಬಾಕಿ ಇರುವಂತೆಯೇ ಅಲ್ಲದೆ 2018 ರ ತೀರ್ಪು ಜಾರಿಯಲ್ಲಿರುವಂತೆಯೇ ಪುಸ್ತಕದ ಮಾನಹಾನಿಕರ ಭಾಗಗಳನ್ನು ಆನ್‌ಲೈನ್‌ ಪ್ರಸಾರ ಮಾಡದಂತೆ ರಾಮದೇವ್‌ ಇನ್ನೊಂದು ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿ ಪ್ರತಿಭಾ ಸಿಂಗ್ ಅವರಿದ್ದ ಏಕಸದಸ್ಯ ಪೀಠ ಎಕ್ಸ್‌ (ಟ್ವಿಟರ್), ಫೇಸ್‌ಬುಕ್, ಗೂಗಲ್ ಮತ್ತು ಯೂಟ್ಯೂಬ್‌ಗಳು ಅಂತಹ ವಸ್ತುವಿಷಯ ತೆಗೆದುಹಾಕುವಂತೆ ನಿರ್ದೇಶಿಸುವ ಮೂಲಕ ರಾಮ್‌ದೇವ್ ಅವರಿಗೆ ಪರಿಹಾರ ನೀಡಿದ್ದರು. ಅಂತಹ ವಸ್ತುವಿಷಯವನ್ನು ಭಾರತದಲ್ಲಷ್ಟೇ ನಿರ್ಬಂಧಿಸದೆ ಜಾಗತಿಕವಾಗಿಯೂ ತಡೆಹಿಡಿಯಬೇಕು ಎಂದು ಆದೇಶದಲ್ಲಿ ತಿಳಿಸಾಗಿತ್ತು. 

ಈ ನಿರ್ದೇಶನವನ್ನು ಎಕ್ಸ್‌, ಗೂಗಲ್‌ ಹಾಗೂ ಫೇಸ್‌ಬುಕ್‌ ಪ್ರಶ್ನಿಸಿದ್ದವು. ಪ್ರಕರಣದ ವಿಚಾರಣೆ ಇಂದು (ಡಿಸೆಂಬರ್ 19) ಮತ್ತೆ ನಡೆಯಲಿದೆ.