ಗುಜರಾತ್: ಕಾರು ಮತ್ತು ಬಸ್ ಡಿಕ್ಕಿಯಾಗಿ 10 ಮಂದಿ ಸಾವನ್ನಪ್ಪಿರುವ ಘಟನೆ ನವಸಾರಿ ಜಿಲ್ಲೆಯ ವೆಸ್ಮಾ ಬಳಿಯ ಹೆದ್ದಾರಿ 48 ರಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಘಟನೆ ಬಳಿಕ ಬಸ್ ಚಾಲಕನ ಮೇಲೆ ಹಲ್ಲೆ ನಡೆದಿದ್ದು, ಗಾಯಗೊಂಡಿದ್ದ ಆತ ಆಸ್ಪತ್ರೆಯಲ್ಲಿ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾನೆ.
ಅತಿವೇಗವಾಗಿ ಬಂದ ಫಾರ್ಚುನರ್ ಕಾರು ಡಿವೈಡರ್’ಗೆ ಗುದ್ದಿ ಹಾರಿಬಿದ್ದು ಬಸ್’ಗೆ ಅಪ್ಪಳಿಸಿದೆ. ಕಾರಿನಲ್ಲಿದ್ದ 9 ಜನರ ಪೈಕಿ 8 ಮಂದಿ ಸ್ಥಳದಲ್ಲೇ ಅಸುನೀಗಿದ್ದಾರೆ. ಘಟನೆಯಿಂದ ರೊಚ್ಚಿಗೆದ್ದ ಜನರು ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಆತ ಗಂಭೀರವಾಗಿ ಗಾಯಗೊಂಡಿದ್ದ. ಬಳಿಕ ಅವನನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಹೃದಯಾಘಾತಕ್ಕೀಡಾಗಿ ಚಾಲಕ ಮೃತಪಟ್ಟಿದ್ದಾನೆ.
ಇದಲ್ಲದೇ ಬಸ್ಸಿನಲ್ಲಿದ್ದ 30 ಜನರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಕಾರಿನಲ್ಲಿದ್ದ ಓರ್ವನನ್ನು ಸೂರತ್’ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಬಸ್’ನಲ್ಲಿದ್ದ ಜನರ ಪೈಕಿ 11 ಮಂದಿಗೂ ಗಾಯವಾಗಿದ್ದು, ನವಸಾರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಪೊಲೀಸರು, ರಕ್ಷಣಾ ಪಡೆಗಳು ಧಾವಿಸಿದ್ದು, ಕಾರ್ಯಾಚರಣೆ ನಡೆಸುತ್ತಿವೆ. ಅಫಘಾತದ ರಭಸಕ್ಕೆ ಕಾರು ನುಜ್ಜುಗಾಗಿದ್ದರೆ, ಬಸ್’ನ ಮುಂಭಾಗ ಪೂರ್ಣ ಜಖಂಗೊಂಡಿದೆ.