ಶಾಸನಗಳನ್ನು ಮುದ್ರಿಸುವಾಗ ಕಾನೂನು ಪುಸ್ತಕ ಮುದ್ರಿಸುವ ಪ್ರಕಾಶಕರು ಎಚ್ಚರಿಕೆಯಿಂದ ಇರಬೇಕು ಎಂದು ಕರ್ನಾಟಕ ಹೈಕೋರ್ಟ್ ಹೇಳಿದ್ದು, ತಪ್ಪಿದ್ದಲ್ಲಿ ಮುದ್ರಣ ದೋಷದಿಂದಾಗಿ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾಗುತ್ತದೆ ಎಂದಿದೆ.
ಭೋಗ್ಯದ ಕರಾರು ಬದಿಗೆ ಸರಿಸದೇ ಎಷ್ಟು ಹಣ ಪಾವತಿಸಬೇಕು ಎಂಬುದನ್ನು ನಿರ್ಧರಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ್ದ ರಾಜ್ಯ ಮೇಲ್ಮನವಿ ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿ ದಕ್ಷಿಣ ಕನ್ನಡದ ವಲೇರಿಯನ್ ಫರ್ನಾಂಡೀಸ್ ಅವರು ಸಾಗುವಳಿ ಚೀಟಿ ನೀಡಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ಪುರಸ್ಕರಿಸಿದೆ.
ಸರ್ಕಾರದ ಪರ ವಕೀಲೆ ನಿಲೋಫರ್ ಅಕ್ಬರ್ ಅವರು “ಏಕಸದಸ್ಯ ಪೀಠವು ಅರ್ಜಿದಾರರು ಸಹಾಯಕ ಆಯುಕ್ತರನ್ನು ಸಂಪರ್ಕಿಸುವಂತೆ ಸರಿಯಾಗಿ ಹೇಳಿದ್ದು, ಅವರು ಪರಿಹಾರ ಸೂಚಿಸಬೇಕಿದೆ. ಕರ್ನಾಟಕ ಭೂ ಮಂಜೂರಾತಿ ನಿಯಮಗಳಿಗೆ 2023ರಲ್ಲಿ ತಿದ್ದುಪಡಿ ಮಾಡಲಾಗಿದ್ದು, ಪರಿಹಾರ ಪಡೆಯಲು ಈಗ ಪರಿಷ್ಕರಿಸಿರುವ ಪ್ರಕಾರ ಮೇಲ್ಮನವಿದಾರರು ಶುಲ್ಕ ಪಾವತಿಸಬೇಕು” ಎಂದಿದ್ದರು.
“ಕರ್ನಾಟಕ ಭೂ ಮಂಜೂರಾತಿ ನಿಯಮಗಳ ತಿದ್ದುಪಡಿ 2023ರ ಅನ್ವಯ ಭೂಮಿ ಮಂಜೂರಾತಿಗೆ ಹಣ ಪಾವತಿಸಬೇಕು ಎಂದು ಸರ್ಕಾರದ ವಕೀಲರು ಹೇಳಿದ್ದಾರೆ. ತಿದ್ದುಪಡಿ ನಿಯಮಗಳನ್ನು ಪರ್ಯಾಯವಾಗಿ ಸೇರ್ಪಡೆ ಮಾಡಲಾಗಿದೆ. ಆದರೆ, ಪರ್ಯಾಯವಾಗಿ ತಿದ್ದುಪಡಿ ಸೇರ್ಪಡೆ ಮಾಡಲಾಗಿದೆ ಎಂದು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿಲ್ಲ ಎಂದು ಮೇಲ್ಮನವಿದಾರರ ಪರ ವಕೀಲರು ಸರಿಯಾಗಿ ಹೇಳಿದ್ದಾರೆ” ಎಂದು ಪೀಠ ಹೇಳಿದೆ.
“ಕಾನೂನನ್ನು ತಪ್ಪಾಗಿ ಭಾವಿಸಿ ಯಾರೂ ಯಾತನೆ ಅನುಭವಿಸಬಾರದು. ಅದೇ ರೀತಿ ಪ್ರಕಾಶಕರ ತಪ್ಪಿಗಾಗಿ ಯಾರೂ ತೊಂದರೆ ಅನುಭವಿಸಬಾರದು. ಶಾಸನ ಪುಸ್ತಕಗಳನ್ನು ಮುದ್ರಿಸಿ, ಪ್ರಕಾಶನ ಮಾಡುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲು ಇದು ಸೂಕ್ತ ಸಮಯ. ಇಲ್ಲವಾದಲ್ಲಿ ಅವರು ನ್ಯಾಯಾಂಗ ನಿಂದನೆ ಮತ್ತಿತರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದಲ್ಲದೇ ಅಂತಹ ಪ್ರಕಾಶನ ಸಂಸ್ಥೆಯನ್ನು ಪುಸ್ತಕಗಳ ಪೂರೈಕೆಗೆ ಸಾರ್ವಜನಿಕ ಟೆಂಡರ್‌ನಲ್ಲಿ ಭಾಗವಹಿಸದಂತೆ ಕಪ್ಪು ಪಟ್ಟಿಗೆ ಸೇರ್ಪಡೆ ಮಾಡುವ ಸಾಧ್ಯತೆ ಇರುತ್ತದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ಈ ಆದೇಶದ ಪ್ರತಿಯನ್ನು ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ, ಹೈಕೋರ್ಟ್‌ನ ಪ್ರಧಾನ ಗ್ರಂಥಪಾಲಕರು ಮತ್ತು ಕರ್ನಾಟಕ ಕಾನೂನು ಜರ್ನಲ್ ಪಬ್ಲಿಕೇಶನ್‌ಗೆ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿಕೊಡುವಂತೆ ಆದೇಶಿಸಿದೆ.
ಅಂತಿಮವಾಗಿ, ನ್ಯಾಯಾಧಿಕರಣವು ಭೂ ಮಂಜೂರಾತಿ ಆದೇಶ ಮಾಡಿದೆ. ಭೂಮಿ ಮಂಜೂರು ಮಾಡಿರುವುದಕ್ಕೆ ಎಷ್ಟು ಹಣ ಪಾವತಿಸಬೇಕು ಎಂಬ ವಿಚಾರ ಮಾತ್ರ ಬಾಕಿ ಇದೆ. ಶಾಸನಬದ್ಧ ನ್ಯಾಯಾಧಿಕರಣ ಆದೇಶ ಮಾಡಿರುವಾಗ ಮೇಲ್ಮನವಿದಾರರನ್ನು ಹೊಸದಾಗಿ ಭೂ ಮಂಜೂರಾತಿ ಪಡೆಯಲು ಸಹಾಯಕ ಆಯುಕ್ತರ ಬಳಿಗೆ ಕಳುಹಿಸುವುದು ಸಮರ್ಥನೀಯವಲ್ಲ ಎಂದೂ ನ್ಯಾಯಾಲಯ ಹೇಳಿದೆ.