ಮನೆ ಸುದ್ದಿ ಜಾಲ ವರ್ಷದೊಳಗೆ ಮಾನಸ ಗಂಗೋತ್ರಿ ವಿದ್ಯಾರ್ಥಿಗಳಿಗೆ ಕಾವೇರಿ ನೀರು

ವರ್ಷದೊಳಗೆ ಮಾನಸ ಗಂಗೋತ್ರಿ ವಿದ್ಯಾರ್ಥಿಗಳಿಗೆ ಕಾವೇರಿ ನೀರು

0

ಮೈಸೂರು:  ಇನ್ನೊಂದು ವರ್ಷದೊಳಗೆ ಮಾನಸ ಗಂಗೋತ್ರಿ ವಿದ್ಯಾರ್ಥಿಗಳಿಗೆ ಕಾವೇರಿ ನೀರು ಕುಡಿಯಲು ದೊರಕಲಿದೆ ಎಂಬ ಭರವಸೆಯನ್ನು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್  ನೀಡಿದ್ದಾರೆ.

ವಿಜ್ಞಾನ ಭವನದಲ್ಲಿ ನಡೆದ ಶಿಕ್ಷಣ ಮಂಡಳಿ ನಾಲ್ಕನೇ ಸಾಮಾನ್ಯ ಸಭೆಯಲ್ಲಿ ಪ್ರೊ.ಮುಜಾರ್ ಅಸಾದಿ ಪ್ರಶ್ನೆಗೆ ಉತ್ತರಿಸಿದ ಅವರು, ತುಂಬಾ ವರ್ಷದಿಂದ ಗಂಗೋತ್ರಿ ವಿದ್ಯಾರ್ಥಿಗಳಿಗೆ ಕಾವೇರಿ ನೀರು ಸಿಗಬೇಕೆಂಬ ಬೇಡಿಕೆ ಇದೆ. ಆದರೆ, ಇದಕ್ಕೆ ಇದೀಗ ಕಾಲ ಕೂಡಿ ಬಂದಿದೆ. 3 ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ಧವಾಗಿದೆ. ಈಗಾಗಲೇ 1 ಕೋಟಿ ಮೊತ್ತವನ್ನು ಕಾವೇರಿ ನೀರಾವರಿ ಮಂಡಳಿಗೆ ನೀಡಲಾಗಿದೆ. ಎರಡು ಮೂರು ಬಾರಿ ಸಭೆಯನ್ನು ಮಾಡಲಾಗಿದೆ. ಕಾವೇರಿ ಹಿನ್ನೀರಿನ ಪ್ರದೇಶದಿಂದ ಗಂಗೋತ್ರಿ ಸಂಪರ್ಕ ಸಾಧಿಸಲಾಗುತ್ತಿದೆ ಎಂದರು.

ಸದ್ಯ ಗಂಗೋತ್ರಿಗೆ ಬೋರ್‌ ವೆಲ್ ನೀರು ಲಭ್ಯವಿದೆ. ಕೆಲವೊಮ್ಮೆ ಈ ನೀರು ಕಲುಷಿತಗೊಂಡು ಬರುತ್ತಿದೆ. ಇದರಿಂದ ವಿಜ್ಞಾನ ಲ್ಯಾಬ್‌ ನಲ್ಲಿ ಈ ನೀರನ್ನು ಬಳಸಿ ಪರೀಕ್ಷೆ ಮಾಡಲು ಕಷ್ಟವಾಗುತ್ತಿದೆ. ಅಲ್ಲದೆ, ಗಂಗೋತ್ರಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಸದ್ಯ 4 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದನ್ನೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕಾವೇರಿ ನೀರನ್ನು ಮಾನಸ ಗಂಗೋತ್ರಿಗೆ ಹರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸರಕಾರಿ ನಾಮನಿದೇರ್ಶನ ಸದಸ್ಯ ಶಶಿಕುಮಾರ್ ಮಾತನಾಡಿ, ಪ್ರತಿ ವರ್ಷ ವಿವಿ ಬಜೆಟ್‌ ನಲ್ಲಿ ವಿದ್ಯುತ್ ಬಿಲ್‌ ಗೆಂದು 4 ಕೋಟಿ ಮೀಸಲಿಡಲಾಗುತ್ತಿದೆ. ಗಂಗೋತ್ರಿಯ ಎಲ್ಲಾ ವಿಭಾಗಕ್ಕೂ ಸೋಲಾರ್ ಸಂಪರ್ಕ ಕಲ್ಪಿಸಿದರೆ ಖರ್ಚು ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದರು.

ಇದಕ್ಕೆ ಉತ್ತರಿಸಿದ ಪ್ರೊ.ಜಿ.ಹೇಮಂತ್ ಕುಮಾರ್, ಈಗಾಗಲೇ ಎರಡು ವಿಭಾಗಕ್ಕೆ ಸೋಲಾರ್ ಸೌಲಭ್ಯ ಕಲ್ಪಿಸಲಾಗಿದೆ. 15 ವಿಭಾಗಗಳಿಗೆ ನೀಡಿದರೆ 1.5 ಕೋಟಿ ವಿದ್ಯುತ್ ಬಿಲ್ ಉಳಿಸಬಹುದು ಎಂದರು.

ಮಂಡ್ಯ ಕ್ಷೇತ್ರದ ಶಾಸಕ, ಶೈಕ್ಷಣಿಕ ಮಂಡಳಿ ಸದಸ್ಯ ಎಂ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕುಲಸಚಿವ ಪ್ರೊ.ಆರ್.ಶಿವಪ್ಪ, ಪ್ರೊ.ಎ.ಪಿ.ಜ್ಞಾನಪ್ರಕಾಶ್ ಸೇರಿದಂತೆ ಇತರರು ಇದ್ದರು.

ಹಿಂದಿನ ಲೇಖನನಟ ಸಲ್ಮಾನ್ ಖಾನ್ ವಿರುದ್ಧದ ಆರೋಪ ನಿಜ: ಮುಂಬೈ ಸಿವಿಲ್ ಕೋರ್ಟ್
ಮುಂದಿನ ಲೇಖನನ್ಯಾಯಾಲಯದ ದಾಖಲೆಗಳ ‘ವೇಗದ’ ಪ್ರಸರಣಕ್ಕಾಗಿ ಸಾಫ್ಟ್ ವೇರ್ ಬಿಡುಗಡೆ