ಮನೆ ಕಾನೂನು ಕೋವಿಡ್ ಲಸಿಕೆ ಸಾವುಗಳಿಗೆ ಸರ್ಕಾರವನ್ನು ಹೊಣೆ ಮಾಡುವಂತಿಲ್ಲ ಎಂದು ಸುಪ್ರೀಂಗೆ ತಿಳಿಸಿದ ಕೇಂದ್ರ

ಕೋವಿಡ್ ಲಸಿಕೆ ಸಾವುಗಳಿಗೆ ಸರ್ಕಾರವನ್ನು ಹೊಣೆ ಮಾಡುವಂತಿಲ್ಲ ಎಂದು ಸುಪ್ರೀಂಗೆ ತಿಳಿಸಿದ ಕೇಂದ್ರ

0

ಸಾರ್ವಜನಿಕ ಹಿತಾಸಕ್ತಿಯ ಕಾರಣಕ್ಕೆ ಕೋವಿಡ್-19 ಲಸಿಕೆಗೆ ಸರ್ಕಾರ ಪ್ರೋತ್ಸಾಹ ನೀಡಿತ್ತಾದರೂ ಲಸಿಕೆ ಹಾಕಿಸಿಕೊಳ್ಳುವಂತೆ ಯಾವುದೇ ಕಾನೂನಾತ್ಮಕ ಒತ್ತಾಯ ಇರಲಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್’ಗೆ ತಿಳಿಸಿದೆ.

ಕೋವಿಡ್ ಲಸಿಕೆಯ ಅಡ್ಡ ಪರಿಣಾಮಗಳಿಂದ ಸಾವನ್ನಪ್ಪಿದ ಇಬ್ಬರು ಬಾಲಕಿಯರ ಪೋಷಕರು ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ “ಈ ಸಾವುಗಳು ದುರದೃಷ್ಟಕರ. ಆದರೆ ಅದಕ್ಕೆ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವಂತಿಲ್ಲ,” ಎಂದು ನ. 23ರಂದು ಸಲ್ಲಿಸಿರುವ ಅಫಿಡವಿಟ್’ನಲ್ಲಿ ಹೇಳಿದೆ. ಆಗಸ್ಟ್ 29ರಂದು ಸುಪ್ರೀಂ ಕೋರ್ಟ್ ಅರ್ಜಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತ್ತು.

ಮರಣೋತ್ತರ ಪರೀಕ್ಷೆ ಮತ್ತು ತನಿಖಾ ವರದಿಗಳನ್ನು ಕಾಲಮಿತಿಯಲ್ಲಿ ಬಿಡುಗಡೆ ಮಾಡುವುದರ ಜೊತೆಗೆ ಸಾವಿನ ಬಗ್ಗೆ ಸ್ವತಂತ್ರ ಸಮಿತಿಯಿಂದ ತನಿಖೆ ನಡೆಸಬೇಕು. ಪೋಷಕರಿಗೆ ವಿತ್ತೀಯವಾಗಿ ಪರಿಹಾರ ನೀಡಬೇಕು ಲಸಿಕೆಗಳ ದುಷ್ಪರಿಣಾಮಗಳಿಂದ ಬಳಲುತ್ತಿರುವ ವ್ಯಕ್ತಿಗಳ ಆರಂಭಿಕ ಪತ್ತೆ ಮತ್ತು ಚಿಕಿತ್ಸೆಗಾಗಿ ಮಾರ್ಗಸೂಚಿಗಳನ್ನು ತರಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿತ್ತು.

ಸರ್ಕಾರದ ಅಫಿಡವಿಟ್’ನ ಪ್ರಮುಖ ಅಂಶಗಳು

• ಮಾಹಿತಿಯುಕ್ತ ಸಮ್ಮತಿ ಎನ್ನುವ ಪರಿಕಲ್ಪನೆ ಲಸಿಕೆಯಂತಹ ಔಷಧದದ ಸ್ವಪ್ರೇರಿತ ಬಳಕೆಗೆ ಅನ್ವಯವಾಗದು. ಸಾರ್ವಜನಿಕ ಹಿತಾಸಕ್ತಿಯ ಕಾರಣಕ್ಕೆ ಭಾರತ ಸರ್ಕಾರ ಲಸಿಕೆ ತೆಗೆದುಕೊಳ್ಳುವಂತೆ ಎಲ್ಲಾ ಅರ್ಹವ್ಯಕ್ತಿಗಳನ್ನು ಪ್ರೋತ್ಸಾಹಿಸಿದೆಯಾದರೂ ಕಾನೂನಾತ್ಮಕ ಒತ್ತಾಯ ಮಾಡಿರಲಿಲ್ಲ.

•  ಪ್ರಪಂಚದ ಎಲ್ಲಾ ಲಸಿಕೆಗಳಿಗೂ ಕೂಡ ಲಸಿಕಾ ನಂತರದ ಪ್ರತಿಕೂಲ ಘಟನೆಗಳು (ಎಇಎಫ್’ಐ) ವರದಿಯಾಗುತ್ತವೆ. ಲಸಿಕೆಯ ಸಂಭವನೀಯ ದುಷ್ಪರಿಣಾಮಗಳ ಬಗೆಗೆ ಜಾಲತಾಣಗಳಲ್ಲಿ ಮಾಹಿತಿ ನೀಡಲಾಗಿದ್ದು ಆರೋಗ್ಯ ಕಾರ್ಯಕರ್ತರು ಅಥವಾ ವೈದ್ಯರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಲಸಿಕೆ ಪಡೆಯುವವರಿಗೆ ನೀಡಲಾಗಿರುತ್ತದೆ.

• ಪರಿಹಾರಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಸಿವಿಲ್ ನ್ಯಾಯಾಲಯ ಸಂಪರ್ಕಿಸುವಂತಹ ಉಳಿದ ಕಾನೂನು ಪರಿಹಾರಗಳನ್ನು ಪಡೆಯಬಹುದಾಗಿದೆ.

• ಲಸಿಕೆಯನ್ನು ಬೇರೆಯವರು ತಯಾರಿಸುವುದರಿಂದ ಲಸಿಕೆ ನೀಡಿದ್ದಕ್ಕೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಮೇಲೆ ಕಟ್ಟುನಿಟ್ಟಿನ ಹೊಣೆ ಹೊರಿಸುವುದನ್ನು ಕಾನೂನುಬದ್ಧವಾಗಿ ಸಮರ್ಥಿಸಲಾಗದು.

• ಮಕ್ಕಳ ಸಾವಿಗೆ ಸರ್ಕಾರವನ್ನು ಹೇಗೆ ಹೊಣೆ ಮಾಡಬಹುದು ಎಂಬುದಕ್ಕೆ ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ಯಾವುದೇ ಅವಕಾಶ ಇಲ್ಲ. 

• ಜೊತೆಗೆ ಸ್ವಯಂಪ್ರೇರಿತವಾಗಿದ್ದ ಲಸಿಕೆ ಕಾರ್ಯಕ್ರಮದಲ್ಲಿ ಲಸಿಕೆ ಪಡೆದವರಿಗೆ ಅದರ ಬಗ್ಗೆ ತಿಳಿವಳಿಕೆಯ ಒಪ್ಪಿಗೆ ಇರಲಿಲ್ಲ ಎಂದು ಹೇಳಲಾಗದು.

ಕೋವಿಡ್-19 ಲಸಿಕೆ ನಂತರದ ಪರಿಣಾಮಗಳಿಂದ ಸಾವನ್ನಪ್ಪಿದ ಪ್ರಕರಣಗಳನ್ನು ಗುರುತಿಸಿ ಸಂತ್ರಸ್ತರ ಅವಲಂಬಿತರಿಗೆ ಪರಿಹಾರ ನೀಡಲು ಮಾರ್ಗಸೂಚಿ  ರೂಪಿಸುವಂತೆ ಕೇರಳ ಹೈಕೋರ್ಟ್ ಇತ್ತೀಚೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ (ಎನ್’ಡಿಎಂಎ) ನಿರ್ದೇಶನ ನೀಡಿತ್ತು.