ಮನೆ ರಾಜ್ಯ ಕೇಂದ್ರದ ಬರ ಪರಿಹಾರದ ಹಣ ಸಾಲಕ್ಕೆ ಜಮೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಹೆಚ್ ​ಡಿ ಕುಮಾರಸ್ವಾಮಿ...

ಕೇಂದ್ರದ ಬರ ಪರಿಹಾರದ ಹಣ ಸಾಲಕ್ಕೆ ಜಮೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಹೆಚ್ ​ಡಿ ಕುಮಾರಸ್ವಾಮಿ ವಾಗ್ದಾಳಿ

0

ಬೆಂಗಳೂರು: ಕೇಂದ್ರ ಸರ್ಕಾರದ ವತಿಯಿಂದ ರೈತರಿಗೆ ಬಿಡುಗಡೆಯಾಗಿರುವ ಬರ ಪರಿಹಾರದ ಹಣವನ್ನು ಬ್ಯಾಂಕ್ ​ಗಳು ಸಾಲದ ಖಾತೆಗೆ ಜಮೆ ಮಾಡಿಕೊಳ್ಳುತ್ತಿರುವುದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ​ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

Join Our Whatsapp Group

ಬ್ಯಾಂಕ್ ​ಗಳು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಾಮಾಜಿಕ ಮಾಧ್ಯಮ ಎಕ್ಸ್ ​​ನಲ್ಲಿ ಸಂದೇಶ ಪ್ರಕಟಿಸಿರುವ ಅವರು, ಬ್ಯಾಂಕ್​ ಗಳ ವರ್ತನೆ ನಿಜಕ್ಕೂ ಕ್ರೂರಾತಿ ಕ್ರೂರ, ಖಂಡನೀಯ ಎಂದಿದ್ದಾರೆ.

ಯಾವ ಕಡೆಯಿಂದ ನೋಡಿದರೂ ರೈತರ ಸಂಕಷ್ಟಕ್ಕೆ ಕೊನೆಯೇ ಇಲ್ಲ ಎನ್ನುವಂತಾಗಿದೆ. ಹೆಸರಿಗೆ ಅನ್ನದಾತ, ಆದರೆ ಅವರ ಕಣ್ಣೀರು ಒರೆಸಿ ಅವರಿಗೆ ಧಾತನಾಗಿ ನಿಲ್ಲಬೇಕಿದ್ದ ರಾಜ್ಯ ಕಾಂಗ್ರೆಸ್ ಸರಕಾರ ಕೈಕಟ್ಟಿ ಕೂತಿದೆ. ಕೇಂದ್ರ ಸರಕಾರದಿಂದ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಿದ್ದ ಬರ ಪರಿಹಾರ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿರುವ ಬ್ಯಾಂಕ್​ಗಳ ವರ್ತನೆ ನಿಜಕ್ಕೂ ಕ್ರೂರಾತಿ ಕ್ರೂರ, ಖಂಡನೀಯ. ಮೊದಲೇ ತೀವ್ರ ಬರ, ಬೆಳೆನಾಶದಿಂದ ಕಂಗೆಟ್ಟಿರುವ ರೈತರ ಕಣ್ಣಲ್ಲಿ ರಕ್ತ ಕಣ್ಣೀರು ತರಿಸುವ ಅಮಾನವೀಯ ಕ್ರಮ ಇದು ಎಂದರೆ ತಪ್ಪಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಸರಕಾರ ಕೂಡಲೇ ಸಾಲ ನೀಡಿರುವ ಎಲ್ಲಾ ಬ್ಯಾಂಕ್​​ಗಳ ಮುಖ್ಯಸ್ಥರ ಸಭೆ ಕರೆದು, ಈ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಬೇಕು. ಬರ ಪರಿಹಾರ ಮೊತ್ತವನ್ನು ಸಾಲಕ್ಕೆ ಜಮೆ ಮಾಡಬಾರದು ಎಂದು ತಾಕೀತು ಮಾಡಬೇಕು ಎನ್ನುವುದು ನನ್ನ ಆಗ್ರಹ ಎಂದು ಅವರು ಉಲ್ಲೇಖಿಸಿದ್ದಾರೆ.

ಬರ ಪರಿಹಾರದ ಹಣ ಬಿಡುಗಡೆಯಾದರೂ ಅನೇಕ ರೈತರ ಕೈಗೆ ಅದು ಸಿಗುತ್ತಿಲ್ಲ. ಕಾರಣ ಅವರು ಸಾಲ ಮಾಡಿರುವುದು. ಬ್ಯಾಂಕ್​ಗಳು ಬರ ಪರಿಹಾರದ ಹಣವನ್ನು ಅವರ ಸಾಲದ ಖಾತೆಗೆ ಜಮೆ ಮಾಡಿಕೊಳ್ಳುತ್ತಿವೆ. ಈ ಬಗ್ಗೆ ರಾಜ್ಯ ಹಲವು ಕಡೆಗಳಿಂದ ವರದಿಯಾಗಿದೆ. ಅನೇಕ ರೈತರಿಗೆ ದೊರೆಯಬೇಕಿದ್ದ ಬರ ಪರಿಹಾರದ ಹಣ ಸಾಲದ ಖಾತೆಗೆ ಜಮೆಯಾಗುತ್ತಿದೆ.

ಕಳೆದ ವರ್ಷ ಮುಂಗಾರು ಮಳೆಯ ಕೊರತೆಯಿಂದ ರಾಜ್ಯವು ತೀವ್ರ ಬರಗಾಲಕ್ಕೆ ತುತ್ತಾಗಿತ್ತು. ಪರಿಣಾಮವಾಗಿ ರೈತರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಕೆಲವು ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿತ್ತು. ಆದರೆ, ಅದೀಗ ರೈತರ ಕೈಗೆ ಸಿಗದಂತಾಗಿದೆ.