ಮನೆ ಕಾನೂನು ವಕೀಲರ (ತಿದ್ದುಪಡಿ) ಮಸೂದೆಯಲ್ಲಿ ಬದಲಾವಣೆಗೆ ಕೇಂದ್ರ ಒಪ್ಪಿಗೆ: ಹೊಸದಾಗಿ ಸಮಾಲೋಚನೆಗೆ ನಿರ್ಧಾರ

ವಕೀಲರ (ತಿದ್ದುಪಡಿ) ಮಸೂದೆಯಲ್ಲಿ ಬದಲಾವಣೆಗೆ ಕೇಂದ್ರ ಒಪ್ಪಿಗೆ: ಹೊಸದಾಗಿ ಸಮಾಲೋಚನೆಗೆ ನಿರ್ಧಾರ

0

ವಕೀಲರ ಕಾಯಿದೆಯಲ್ಲಿ ಬದಲಾವಣೆಗಳನ್ನು ತರಲು ಪ್ರಸ್ತಾಪಿಸಿರುವ ವಕೀಲರ (ತಿದ್ದುಪಡಿ) ಮಸೂದೆ 2025 ಅನ್ನು ಪರಿಷ್ಕರಿಸಲಾಗುವುದು ಮತ್ತು ಬದಲಾವಣೆಗಳಿಗೆ ಸಂಬಂಧಿಸಿದಂತೆ ಹೊಸದಾಗಿ ಸಾರ್ವಜನಿಕ ಸಮಾಲೋಚನೆ ನಡೆಸಲು ಕಾನೂನು ಮತ್ತು ನ್ಯಾಯ ಸಚಿವಾಲಯ ನಿರ್ಧರಿಸಿದೆ.

Join Our Whatsapp Group

ಕೇಂದ್ರ ಕಾನೂನು ಸಚಿವಾಲಯವು ಶನಿವಾರ ಭಾರತೀಯ ವಕೀಲರ ಪರಿಷತ್ತಿಗೆ (ಬಿಸಿಐ) ಈ ವಿಚಾರ ತಿಳಿಸಿದೆ.

ಮಸೂದೆಯ ಪ್ರಸ್ತುತ ಸ್ವರೂಪ ವಿರೋಧಿಸಿ ದೇಶದ ವಿವಿಧೆಡೆ ವಕೀಲರ ಸಂಘಗಳು ಪ್ರತಿಭಟನೆ ನಡೆಸುತ್ತಿರುವ ಬೆನ್ನಿಗೇ ನಿರ್ಧಾರ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ, ವಕೀಲರು ಮತ್ತು ವಕೀಲರ ಸಂಘಗಳು ಪ್ರತಿಭಟನೆ, ಮುಷ್ಕರ ನಡೆಸದಂತೆ ಬಿಸಿಐ ಮನವಿ ಮಾಡಿದೆ.

ಮಸೂದೆಯನ್ನು ಅಂತಿಮಗೊಳಿಸುವ ಮೊದಲು ಎಲ್ಲಾ ವಿವಾದಾತ್ಮಕ ವಿಷಯಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್ ಭರವಸೆ ನೀಡಿರುವುದಾಗಿ ಬಿಸಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಸರ್ಕಾರದ ಈ ನಿಲುವನ್ನು ಗಮನಿಸಿ, ನ್ಯಾಯವಾದಿಗಳು ನ್ಯಾಯಾಲಯ ಕಲಾಪಗಳಿಗೆ ಗೈರು ಹಾಜರಾಗಲು ಕರೆ ನೀಡಿರುವ ಎಲ್ಲಾ ವಕೀಲರ ಸಂಘಗಳು, ಫೆಬ್ರವರಿ 24, 2025ರ ಸೋಮವಾರದಿಂದ ಕೆಲಸ ಪುನರಾರಂಭಿಸಲು ಸೂಚಿಸಬೇಕು ಎಂದು ಬಿಸಿಐ ವಿನಂತಿಸಿದೆ. ಇದರ ಬೆನ್ನಿಗೇ ನಾಳೆ (ಸೋಮವಾರ) ಕೆಲಸದಿಂದ ದೂರ ಉಳಿಯುವಂತೆ ವಕೀಲರಿಗೆ ನೀಡಿದ್ದ ಕರೆಯನ್ನು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ವಕೀಲರ ಸಂಘ ಹಿಂಪಡೆದಿದೆ.

ವಿವಾದಾತ್ಮಕ ಮಸೂದೆ ಬಗ್ಗೆ ಕಾನೂನು ವ್ಯವಹಾರಗಳ ಇಲಾಖೆಯ ಜಾಲತಾಣದಲ್ಲಿ ಫೆಬ್ರವರಿ 13 ರಂದು ಸಾರ್ವಜನಿಕ ಅಭಿಪ್ರಾಯಕ್ಕೆ ಆಹ್ವಾನ ನೀಡಲಾಗಿತ್ತು. ಮಸೂದೆಯನ್ನು ವ್ಯಾಪಕವಾಗಿ ಖಂಡಿಸಿದ ಕಾನೂನು ಸಮುದಾಯ ಪ್ರತಿಭಟನೆಗಳನ್ನೂ ನಡೆಸಿತ್ತು.

ಈ ವಿಚಾರವನ್ನು ಬಿಸಿಐ ಕಾನೂನು ಸಚಿವಾಲಯಕ್ಕೆ ತಿಳಿಸಿದ್ದು ಈಗ ಅದು ತಿದ್ದುಪಡಿ ಮಸೂದೆ ಮರುಪರಿಶೀಲಿಸಲು ಸಮ್ಮತಿಸಿದೆ.