ಬೆಂಗಳೂರು: 2-3 ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಕೊಟ್ಟಿದೆ.
ಬೀದರ್ ಮತ್ತು ಕಲಬುರಗಿಯಲ್ಲಿ ಭಾನುವಾರ ತುಂತುರು ಮಳೆಯಾಗಿದ್ದು, ಇನ್ನೆರಡು ಮೂರು ದಿನಗಳಲ್ಲಿ ದಕ್ಷಿಣ ಒಳನಾಡು ಮತ್ತು ಮಲೆನಾಡು ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಜಿ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಮಾತನಾಡಿ, ದಕ್ಷಿಣ ಒಳನಾಡು ಮತ್ತು ಮಲೆನಾಡು ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವಿದೆ. ಅಲ್ಲದೆ, ತಮಿಳುನಾಡಿನ ಬಳಿ ಕಾಣಿಸಿಕೊಂಡಿರುವ ಟ್ರಫ್ (ವಾತಾವರಣದಲ್ಲಿ ಗಾಳಿಯ ಚಲನೆಯಿಂದ ಉಂಟಾಗುವ ಪರಿಣಾಮ) ಪರಿಣಾಮ ಕರ್ನಾಟಕದ ಮೇಲೂ ಬೀರಲಿದೆ ಎಂದು ಹೇಳಿದ್ದಾರೆ.
ಮಾರ್ಚ್ 20 ಅಥವಾ 21 ರಿಂದ, ಎರಡರಿಂದ ಮೂರು ದಿನಗಳವರೆಗೆ ತುಂತುರು ಮಳೆ ಇರಲಿದೆ. ಆದರೆ, ಈ ಮಳೆ ಅಣೆಕಟ್ಟುಗಳನ್ನು ತುಂಬಲು ಅಥವಾ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುವುದಿಲ್ಲ. ಅಲ್ಪಸ್ವಲ್ಪ ಮಳೆ ಸ್ವಲ್ಪ ಸಮಯದವರೆಗೆ ತಾಪಮಾನವನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಜನರು ಈ ನೀರನ್ನು ಮಳೆನೀರು ಕೊಯ್ಲು ಮಾಡಬೇಕು. ಇದರಿಂದ ಕುಡಿಯುವ ನೀರಿನ ಹೊರೆ ಕಡಿಮೆಯಾಗಲಿದೆ ಎಂದು ತಿಳಿಸಿದರು.
ಏಪ್ರಿಲ್ ನಲ್ಲಿ 36-40 ಮಿ.ಮೀ ಮತ್ತು ಮೇನಲ್ಲಿ 86 ಮಿ.ಮೀ ಮಳೆಯಾಗುವ ನಿರೀಕ್ಷೆಯಿದ್ದು, ಈ ವರ್ಷ ಉತ್ತಮ ಮುಂಗಾರು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜುಲೈನಿಂದ ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿದ್ದೇವೆ ಎಂದು ರೆಡ್ಡಿ ಮಾಹಿತಿ ನೀಡಿದ್ದಾರೆ.
KSNDMC ಮಾಹಿತಿಯ ಪ್ರಕಾರ, ರಾಜ್ಯದ ಕೆಲವು ಭಾಗಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 1 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ರಾಜ್ಯ ಸರಕಾರ ಈಗಾಗಲೇ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ.
ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟದಲ್ಲಿ ಕುಸಿತ ಕಾಣುತ್ತಲೇ ಇದೆ. 123 ಪ್ರಮುಖ ಜಲಾಶಯಗಳಲ್ಲಿ ಒಟ್ಟು 895.62 ಟಿಎಂಸಿ ಅಡಿ ಸಾಮರ್ಥ್ಯದ ಪೈಕಿ 284 ಟಿಎಂಸಿ ಅಡಿಯಡಿಗೆ ತಲುಪಿದೆ. ಕಳೆದ ವರ್ಷ ಇದೇ ಸಮಯದ್ಲಿ ಜಲಾಯಶಗಳ ಮಟ್ಟ 386 ಟಿಎಂಸಿ ಅಡಿಯಷ್ಟಿತ್ತು