ಮನೆ ಕಾನೂನು ಆರೋಪಪಟ್ಟಿ ಸಾರ್ವಜನಿಕ ದಾಖಲೆಯಲ್ಲ, ಇದನ್ನು ವೆಬ್‌’ಸೈಟ್‌’ಗೆ ಅಪ್‌ಲೋಡ್ ಮಾಡಲಾಗದು: ಸುಪ್ರೀಂಕೋರ್ಟ್

ಆರೋಪಪಟ್ಟಿ ಸಾರ್ವಜನಿಕ ದಾಖಲೆಯಲ್ಲ, ಇದನ್ನು ವೆಬ್‌’ಸೈಟ್‌’ಗೆ ಅಪ್‌ಲೋಡ್ ಮಾಡಲಾಗದು: ಸುಪ್ರೀಂಕೋರ್ಟ್

0

ನವದೆಹಲಿ: ಕ್ರಿಮಿನಲ್ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ಸಲ್ಲಿಸಲಾಗುವ ಆರೋಪಪಟ್ಟಿ ಸಾರ್ವಜನಿಕ ದಾಖಲೆಯಲ್ಲ. ಉಚಿತವಾಗಿ ಲಭ್ಯವಾಗುವಂತೆ ಇದನ್ನು ವೆಬ್‌’ಸೈಟ್‌’ಗೆ ಅಪ್‌’ಲೋಡ್ ಮಾಡಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಆರೋಪಪಟ್ಟಿಗಳು ಸಾರ್ವಜನಿಕವಾಗಿ ಸಿಗುವಂತೆ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಸಿ.ಟಿ.ರವಿಕುಮಾರ್‌ ಅವರಿದ್ದ ಪೀಠವು ಶುಕ್ರವಾರ ವಜಾ ಮಾಡಿತು.

ಆರೋಪಪಟ್ಟಿಗಳನ್ನು ಅಪ್‌’ಲೋಡ್ ಮಾಡುವುದು ಕ್ರಿಮಿನಲ್‌ ಅಪರಾಧ ಸಂಹಿತೆ (ಸಿಆರ್‌’ಪಿಸಿ) ನಿಯಮಗಳಿಗೂ ವಿರುದ್ಧವಾದುದು ಎಂದು ಪೀಠವು ಅಭಿಪ್ರಾಯಪಟ್ಟಿತು.

ಎನ್‌’ಜಿಒ ಅಥವಾ ಇತರೆ ಸಂಸ್ಥೆಗಳು ಸೇರಿದಂತೆ ಸಂಬಂಧಿಸಿದಲ್ಲದವರಿಗೆ ಆರೋಪಪಟ್ಟಿ ದೊರೆತಲ್ಲಿ ಅದು ದುರ್ಬಳಕೆ ಆಗುವ ಸಾಧ್ಯತೆಗಳು ಇರುತ್ತವೆ ಎಂದು ಪೀಠವು ಮೌಖಿಕವಾಗಿ ಅಭಿಪ್ರಾಯಪಟ್ಟಿತು.

ಸ್ವಯಂ ಪ್ರೇರಿತವಾಗಿ ಮಾಹಿತಿ ಪ್ರಕಟಿಸುವುದು ಸಾರ್ವಜನಿಕ ಸೇವಾ ಸಂಸ್ಥೆಗಳ ಕರ್ತವ್ಯ. ಅಪರಾಧವನ್ನು ಯಾರು ಎಸಗಿದ್ದಾರೆ, ಆರೋಪಿ ಯಾರು ಎಂದು ತಿಳಿಯುವ ಹಕ್ಕು ಪ್ರತಿ ನಾಗರಿಕನಿಗೂ ಇದೆ ಎಂದು ವಕೀಲ ಪ್ರಶಾಂತ್ ಭೂಷಣ್‌ ಪ್ರತಿಪಾದಿಸಿದ್ದರು.

ಸಿಆರ್‌’ಪಿಸಿ ಸೆಕ್ಷನ್ 173ರ ಅನ್ವಯ ಪೊಲೀಸರು ದಾಖಲಿಸುವ ಎಫ್‌’ಐಆರ್‌’ಗಳು ಉಚಿತವಾಗಿ ಸಾರ್ವಜನಿಕವಾಗಿ ಸಿಗುವಂತಿರಬೇಕು ಎಂದು ಕೋರಿ ಪತ್ರಕರ್ತ ಸೌರವ್‌ ದಾಸ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು.