ಮನೆ ಕಾನೂನು ನಿಗದಿಗಿಂತ ಹೆಚ್ಚು ದರ ವಸೂಲಿ: ನರ್ಸಿಂಗ್‌ ಹೋಂಗೆ 5ಲಕ್ಷ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

ನಿಗದಿಗಿಂತ ಹೆಚ್ಚು ದರ ವಸೂಲಿ: ನರ್ಸಿಂಗ್‌ ಹೋಂಗೆ 5ಲಕ್ಷ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

0

ಮಂಗಳೂರು: ನಿಗದಿಗಿಂತ ಹೆಚ್ಚು ದರ ವಸೂಲಿ ಮಾಡಿದ ನಗರದ ನರ್ಸಿಂಗ್‌ ಹೋಂಗೆ ಗ್ರಾಹಕ ನ್ಯಾಯಾಲಯ ದಂಡ ವಿಧಿಸಿದೆ.

ಮಹಿಳೆಯೊಬ್ಬರು ಹೆರಿಗೆಗಾಗಿ 2019ರ ಮೇ 29ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅವಳಿ ಮಕ್ಕಳ ತೂಕ ಕಡಿಮೆಯಾಗಿದ್ದರಿಂದ ಎನ್‌ಐಸಿಯುಗೆ ದಾಖಲಿಸಲು ಹೆರಿಗೆ ವೈದ್ಯರು ಹೇಳಿದ್ದರು.

ಅದರಂತೆ ಮೇ 29ರಿಂದ ಜೂ.15ರ ವರೆಗೆ ಮಕ್ಕಳು ಚಿಕಿತ್ಸೆ ಪಡೆದಿದ್ದರು. ಜೂ.15ರಂದು ಮಹಿಳೆ 5,34,791ರೂ. ಪಾವತಿ ಮಾಡಿದ್ದರು. ನಿಗದಿಗಿಂತ ಹೆಚ್ಚು ದರ ವಸೂಲಿ ಮಾಡಿದ ಬಗ್ಗೆ ಮಹಿಳೆಯ ಪತಿ, ನ್ಯಾಯವಾದಿ ರೋಶನ್‌ ರಾಜ್‌ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಿದ್ದರೂ ಅವರು ತನಿಖೆ ನಡೆಸಿರಲಿಲ್ಲ.

ರೋಶನ್‌ ರಾಜ್‌ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯ ಆರೋಗ್ಯ ಸಚಿವ ರಾಮುಲು ಅವರಿಗೆ ದೂರನ್ನು ನೀಡಿದ್ದರು. ಕೇಂದ್ರ ಸರಕಾರ ಜಿಲ್ಲಾ ಆರೋಗ್ಯ ಅಧಿಕಾರಿಗೆ ‌ ದೂರನ್ನು ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಿತ್ತು. ಆದರೂ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಬಳಿಕ ರೋಶನ್‌ ರಾಜ್‌ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ಮಹಿಳೆ ಮತ್ತು ರೋಶನ್‌ ರಾಜ್‌ ಹಾಗೂ ವೈದ್ಯರ ಅರ್ಜಿಯನ್ನು ಪರಿಶೀಲಿಸಿ ವಾದ-ವಿವಾದಗಳನ್ನು ಆಲಿಸಿದ ಗ್ರಾಹಕ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ್‌ ಕೆ. ಅವರು ನರ್ಸಿಂಗ್‌ ಹೋಂ ನವರು 5ಲಕ್ಷ ರೂ. ಹಣವನ್ನು 6 ವಾರದೊಳಗೆ ನೀಡಬೇಕೆಂದು ಆದೇಶ ನೀಡಿದ್ದಾರೆ.