ಚೆನ್ನೈ: ಬಿರಿಯಾನಿ ವಿಚಾರವಾಗಿ ನಡೆದ ಜಗಳದಲ್ಲಿ ಯುವಕನ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ಚೆನ್ನೈನ ಮಣ್ಣೂರುಪೇಟೆ ಬಸ್ ನಿಲ್ದಾಣದ ಬಳಿ ನಡೆದಿದೆ.
ಮೃತರನ್ನು ಬಾಲಾಜಿ(22) ಎಂದು ಗುರತಿಸಲಾಗಿದ್ದು, ಈತ ಚೆನ್ನೈನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.
ಈ ಯುವಕ ರಾತ್ರಿ ಊಟ ಮಾಡಲು ಮಣ್ಣೂರುಪೇಟೆ ಬಸ್ ನಿಲ್ದಾಣದ ಬಳಿ ಸ್ನೇಹಿತರೊಂದಿಗೆ ಬಂದು ಬೀದಿಬದಿಯ ಸ್ಟಾಲ್ ಒಂದರಲ್ಲಿ ಬಿರಿಯಾನಿ ಆರ್ಡರ್ ಮಾಡಿದ್ದಾನೆ. ಇದೇ ಸಮಯಕ್ಕೆ ಮದ್ಯಪಾನ ಮಾಡಿರುವ ಮೂವರು ವ್ಯಕ್ತಿಗಳು ಅದೇ ಸ್ಟಾಲ್ ಗೆ ಬಂದು, ಅವರು ಕೂಡ ಆರ್ಡರ್ ಮಾಡಿದ್ದಾರೆ. ಸ್ಟಾಲ್ ಮಾಲೀಕ ಮೊದಲು ಆರ್ಡರ್ ಮಾಡಿದವರಿಗೆ ಬಿರಿಯಾನಿ ನೀಡಿದ್ದಾನೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಈ ಮೂವರು ಕುಡುಕರು ಬಾಲಾಜಿಗೆ ರಾಡ್’ನಿಂದ ಹೊಡೆದು ಕೊಂದಿದ್ದಾರೆ.
ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವನ್ನಪ್ಪಿದ್ದಾನೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂರತೆ ಚೆನ್ನೈ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.














