ಮನೆ ರಾಜ್ಯ ಸಿಐ ನಂದೀಶ್ ಸಾವು ಹೃದಯಾಘಾತವಲ್ಲ, ಕೊಲೆ: ಹೆಚ್.ಡಿ.ಕೆ ಆರೋಪ

ಸಿಐ ನಂದೀಶ್ ಸಾವು ಹೃದಯಾಘಾತವಲ್ಲ, ಕೊಲೆ: ಹೆಚ್.ಡಿ.ಕೆ ಆರೋಪ

0

ಬೆಂಗಳೂರು(Bengaluru): ಅಮಾನತುಗೊಂಡಿದ್ದ ಸರ್ಕಲ್ ಇನ್ಪೆಕ್ಟರ್ ನಂದೀಶ್ ಸಾವು, ಹೃದಯಾಘಾತದಿಂದ ಅಲ್ಲ ಬದಲಾಗಿ ಇದೊಂದು ಕೊಲೆ ಎಂದು ಆರೋಪಿಸಿರುವ  ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸರ್ಕಾರ ಇದನ್ನು ಲಘುವಾಗಿ ಪರಿಗಣಿಸಬಾರದು. ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಜೆಡಿಎಸ್ ಕಚೇರಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಹಿರಿಯ ಅಧಿಕಾರಿಗಳ ಉದ್ಧಟತನಕ್ಕೆ ಕಡಿವಾಣ ಹಾಕಬೇಕು. ಈ ಪ್ರಕರಣವನ್ನು ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದರು.

ಮೂಲತಃ ಮೈಸೂರಿನ ನಂದೀಶ್ ಇತ್ತೀಚೆಗೆ ಪಬ್ ವೊಂದು ಅವಧಿ ಮೀರಿ ನಡೆಸಲು ಸಹಕಾರ ನೀಡುತ್ತಿದ್ದರೆಂಬ ಆರೋಪದ ಮೇಲೆ ಅಮಾನತುಗೊಂಡಿದ್ದರು. ಅಮಾನತುಗೊಂಡಿದ್ದ ಸರ್ಕಲ್ ಇನ್ಸ್ಪೆಕ್ಟರ್ ನಂದೀಶ್ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕೆ.ಆರ್.ಪುರಂನ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.  ಮಾನಸಿಕ ಒತ್ತಡದಿಂದ ಹೀಗಾಗಿದೆ ಎಂದು ಅವರ ಪತ್ನಿಯೂ ಆರೋಪ ಮಾಡಿದ್ದಾರೆ ಎಂದರು.

ಕೆ ಆರ್ ಪುರಂ ವ್ಯಾಪ್ತಿಯಲ್ಲಿ ಪಬ್ ವೊಂದು 2 ರಿಂದ 3 ಗಂಟೆಯ ವರೆಗೆ ತೆರೆಯಲು ಅವಕಾಶ ಕೊಡಲಾಗಿತ್ತು. ಅದಕ್ಕೆ ಸಹಕಾರ ಕೊಟ್ಟಿದ್ದಾರೆ ಎಂಬ ಕಾರಣಕ್ಕಾಗಿ ಅಮಾನತು ಮಾಡಿದ್ದಾರೆ. ಒಂದು ಗಂಟೆಯ ವರೆಗೆ ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡಲಾಗಿದೆ. ಪಬ್ ಮೂರು ಗಂಟೆಗೆ ನಡೆಯಲು ಪಬ್ ನಲ್ಲಿ ಭಾಗಿಯಾದ ರಾಜಕಾರಣಿಗಳ ಬೆಂಬಲಿಗರು ಎಷ್ಟು ಜನರಿದ್ದರು ಎಂದು ಪ್ರಶ್ನಿಸಿದರು.

ಆ ಪಬ್ ನಲ್ಲಿ ಪೊಲೀಸ್ ಅಧಿಕಾರಿಗಳು ಡ್ಯಾನ್ಸ್ ಮಾಡಿದ್ದಾರೆ ಎಂಬ ವರದಿ ಇದೆ ಎಂದ ಅವರು, ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಸ್ವೇಚ್ಛಾಚಾರವಾಗಿ ಮಟ್ಕಾ ದಂಧೆ, ಕ್ಯಾಸಿನೋ ದಂಧೆ ನಡೆಯುತ್ತಿದೆ. ಅಧಿಕಾರಿಗಳ ಬೆಂಬಲವೂ ಇದಕ್ಕೆ ಇದೆ. ನಂದೀಶ್ ಅಮಾನತು ಆದ ಬಳಿಕ ಅದನ್ನು ತೆರವುಗೊಳಿಸಲು ವಿರೋಧ ಪಕ್ಷದ ನಾಯಕರ ಬಳಿ ಹೋಗಿದ್ದಾರೆ ಎಂಬ ಮಾಹಿತಿ ಇದೆ ಎಂದರು.

ಪೋಸ್ಟಿಂಗ್’ಗೆ 70-80 ಲಕ್ಷ

70 ,80 ಲಕ್ಷ ವಸೂಲಿ ಮಾಡಿ ಪೋಸ್ಟಿಂಗ್ ಕೊಟ್ಟರೆ, ಅವರು ಹೇಗೆ ದುಡ್ಡು ವಸೂಲಿ ಮಾಡಬೇಕು? ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆಯನ್ನು ಗಮನಿಸಬೇಕಾಗಿದೆ. ಪೋಸ್ಟಿಂಗ್ ಗಳಲ್ಲಿ 70,80 ಲಕ್ಷ ಪಡೆದುಕೊಳ್ಳಲಾಗುತ್ತಿದೆ. 70 ಲಕ್ಷ ಕೊಟ್ಟ ದುಡ್ಡು ಎಲ್ಲಿಂದ ತರಬೇಕು? ಎಂದು ಪ್ರಶ್ನಿಸಿದರು.

ಹೈಕಮಾಂಡ್ ರಕ್ಷಣೆಯ ಮೂಲಕ ಐಎಎಸ್ ಅಧಿಕಾರಿಗಳು ಪ್ರಮುಖ ಹುದ್ದೆ ಪಡೆದು ನಮ್ಮ ರಾಜ್ಯದ ಸಣ್ಣ ಪುಟ್ಟ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಆದರೆ ನನ್ನ ಮುಂದೆ ಹಣದ ಆಮಿಷ ಒಡ್ಡಿದವರನ್ನು ಹೊರಗಡೆ ಇಟ್ಟಿದ್ದೆ. ಆದರೆ ಅವರೆಲ್ಲರೂ ಬಿಜೆಪಿ ಸರ್ಕಾರದಲ್ಲಿ ದೊಡ್ಡ ಪೋಸ್ಟ್ ಗಳನ್ನು ಪಡೆದುಕೊಂಡಿದ್ದಾರೆ ಎಂದು ಆರೋಪ ಮಾಡಿದರು.

ಬೆಂಗಳೂರು ನಗರದಲ್ಲಿ ಎಷ್ಟು ಬಾರ್ ಎಷ್ಟು ಅವಧಿಯ ವರೆಗೆ ತೆರೆದಿಡಲಾಗುತ್ತಿದೆ ಎಂಬ ಬಗ್ಗೆ ತನಿಖೆ ಆಗಬೇಕು. ಹಿರಿಯ ಅಧಿಕಾರಿಗಳು ಏನು ಮಾಡಿದ್ದಾರೆ? ಸಣ್ಣ ಪುಟ್ಟ ಅಧಿಕಾರಿಗಳ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂದರು. ಮೃತ ನಂದೀಶ್ ವಿಧಾನಪರಿಷತ್ ಬಿಜೆಪಿ ಸದಸ್ಯರ ಸಂಬಂಧಿಕರಾಗಿದ್ದಾರೆ. ಅವರ ಪರಿಸ್ಥಿತಿ ಹೀಗೆ ಆದರೆ ಸಣ್ಣ ಪುಟ್ಟವರ ಗತಿ ಏನು? ಎಂದು ಪ್ರಶ್ನಿಸಿದರು. ಇದಕ್ಕೆಲ್ಲಾ ಗೃಹ ಸಚಿವರು ಉತ್ತರ ಕೊಡಬೇಕು ಎಂದು ಎಚ್ ಡಿ ಕೆ ಒತ್ತಾಯಿಸಿದರು.

ಅಧಿಕಾರಿಗಳಿಂದ ಪೋಸ್ಟಿಂಗ್ ಗೆ ದುಡ್ಡು ಪಡೆಯಲಾಗುತ್ತಿದೆ. ಪೊಲೀಸರು ರಾತ್ರಿ ವೇಳೆ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ವಸೂಲಿ ಮಾಡಲಾಗುತ್ತಿದೆ. ನೀವೇ ಎಣ್ಣೆ ಕುಡಿಯಲು ಪ್ರೋತ್ಸಾಹ ನೀಡಿ ಬಾರ್ ನಿಂದ ಅವರು ಬರುವಾಗ ಪೊಲೀಸರು ಹಿಡಿಯುತ್ತಾರೆ. ಗಾಬರಿಯಿಂದ ಅಪಘಾತ ಆದ ಘಟನೆಗಳು ನಡೆದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು