ಮನೆ ಕಾನೂನು ವಕೀಲರು ಮೊಬೈಲ್ ಮೂಲಕ ಕೋರ್ಟ್ ಕಲಾಪಕ್ಕೆ ಹಾಜರಾಗಲು ಸುಪ್ರೀಂ ಸಮ್ಮತಿ

ವಕೀಲರು ಮೊಬೈಲ್ ಮೂಲಕ ಕೋರ್ಟ್ ಕಲಾಪಕ್ಕೆ ಹಾಜರಾಗಲು ಸುಪ್ರೀಂ ಸಮ್ಮತಿ

0

ಬೆಂಗಳೂರು: ವಕೀಲರು ಮೊಬೈಲ್ ಮೂಲಕ ನ್ಯಾಯಾಲಯದ ಕಲಾಪಕ್ಕೆ ಹಾಜರಾಗುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್ ಅಂತಿಮವಾಗಿ ವಕೀಲರ ಮನವಿ ಮೇರೆಗೆ ಮೊಬೈಲ್ ನಲ್ಲಿ ಹಾಜರಾಗಲು ಸಮ್ಮತಿಸಿದೆ.

ಸುಪ್ರೀಂ ಕೋರ್ಟ್ ವಕೀಲರ ಸಂಘದ (ಎಸ್‌ಸಿಬಿಎ) ವರ್ಚುಯಲ್ ಸಭೆಯಲ್ಲಿ ಭಾಗವಹಿಸಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಲ್ಯಾಪ್ ಟಾಪ್ ಅಥವಾ ಡೆಸ್ಕ್ ಟಾಪ್ ಇಲ್ಲದ ವಕೀಲರು ವರ್ಚುಯಲ್ ಕಲಾಪದಲ್ಲಿ ಮೊಬೈಲ್ ಮೂಲಕ ಭಾಗಿಯಾಗಬಹುದು ಎಂದಿದ್ದಾರೆ.

ಮೊಬೈಲ್ ಬಳಕೆಗೆ ನಮ್ಮ ವಿರೋಧವಿಲ್ಲ. ಆದರೆ, ಮೊಬೈಲ್ ಮೂಲಕ ವಕೀಲರು ವಿಚಾರಣೆಗೆ ಹಾಜರಾದಾಗ ಸಂವಹನ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ, ಲ್ಯಾಪ್ ಟಾಪ್ ಅಥವಾ ಡೆಸ್ಕ್ ಟಾಪ್ ಇಲ್ಲದ ವಕೀಲರು ಮೊಬೈಲ್ ಬಳಸುವಾಗ ಅದನ್ನು ಒಂದೆಡೆ ಸ್ಥಿರವಾಗಿ ಇರಿಸಬೇಕು. ವಕೀಲರು ಸ್ಪಷ್ಟವಾಗಿ ಕಾಣಬೇಕು ಮತ್ತು ಅವರ ಧ್ವನಿ ಸ್ಪಷ್ಟವಾಗಿರಬೇಕು ಎಂದು ಸೂಚಿಸಿದ್ದಾರೆ.

ಹಿನ್ನೆಲೆ: ಜನವರಿ 17ರಂದು ಸಿಜೆಐ ನೇತೃತ್ವದ ಪೀಠದ ವರ್ಚುಯಲ್ ಕಲಾಪದಲ್ಲಿ ಕೆಲ ವಕೀಲರು ಮೊಬೈಲ್ ಮೂಲಕವೇ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಸಂಹವನದ ಸಮಸ್ಯೆ ಉಂಟಾಗಿದ್ದರಿಂದ ಸಿಜೆಐ ಅಸಮಾಧಾನ ವ್ಯಕ್ತಪಡಿಸಿ, ಮೊಬೈಲ್ ಮೂಲಕ ವಕೀಲರು ವರ್ಚುಯಲ್ ಕಲಾಪಕ್ಕೆ ಹಾಜರಾಗುವುದನ್ನು ನಿಷೇಧಿಸಬೇಕಾಗಬಹುದು ಎಂದಿದ್ದರು. ಅದೇ ದಿನ ಸುಪ್ರೀಂ ಕೋರ್ಟ್ ನೋಟಿಫಿಕೇಷನ್ ಹೊರಡಿಸಿ, ಮೊಬೈಲ್ ಮೂಲಕ ಹಾಜರಾಗದಂತೆ ವಕೀಲರಲ್ಲಿ ಮನವಿ ಮಾಡಿತ್ತು. ಅಲ್ಲದೇ, ಲ್ಯಾಪ್ ಟಾಪ್ ಅಥವಾ ಡೆಸ್ಕ್ ಟಾಪ್ ಮೂಲಕವೇ ಕಲಾಪಕ್ಕೆ ಹಾಜರಾಗುವಂತೆ ಸೂಚಿಸಿತ್ತು.

ಇದಕ್ಕೆ ಆಕ್ಷೇಸಿದ್ದ ಸುಪ್ರೀಂ ಕೋರ್ಟ್ ವಕೀಲರ ಸಂಘ ಮೊಬೈಲ್ ಮೂಲಕ ವರ್ಚುಯಲ್ ಕಲಾಪಕ್ಕೆ ಹಾಜರಾಗುವಂತಿಲ್ಲ ಎಂದು ಹೊರಡಿಸಿರುವ ನೋಟಿಫಿಕೇಷನ್ ನಿಂದ ವಕೀಲರಿಗೆ ಸಮಸ್ಯೆಯಾಗಲಿದೆ. ಮೊಬೈಲ್ ಮೂಲಕ ಹಾಜರಾಗಲು ಅವಕಾಶ ನೀಡಬೇಕು ಎಂದು ಕೋರಿತ್ತು. ಆ ಬಳಿಕ ಸುಪ್ರೀಂ ಕೋರ್ಟ್ ವಕೀಲರ ಸಂಘ, ಸಿಜೆಐ ಮತ್ತು ನಾಲ್ವರು ಹಿರಿಯ ನ್ಯಾಯಮೂರ್ತಿಗಳು ನಡೆಸಿದ ಸಭೆಯಲ್ಲಿ ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಇಲ್ಲದ ವಕೀಲರು ಕಲಾಪಕ್ಕೆ ತೊಂದರೆಯಾಗದಂತೆ ಮೊಬೈಲ್ ಮೂಲಕ ಹಾಜರಾಗಲು ಸಿಜೆಐ ಸಮ್ಮತಿಸಿದ್ದಾರೆ.