ಮನೆ ರಾಜಕೀಯ ಅನುದಾನ ತಾರತಮ್ಯ: ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಕಾಂಗ್ರೆಸ್‍ ಶಾಸಕರ ವಾಗ್ದಾಳಿ

ಅನುದಾನ ತಾರತಮ್ಯ: ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಕಾಂಗ್ರೆಸ್‍ ಶಾಸಕರ ವಾಗ್ದಾಳಿ

0

ಮೈಸೂರು: ಸರ್ಕಾರದಿಂದ ಅನುದಾನ ತಾರತಮ್ಯ ಖಂಡಿಸಿ ಹಾಗೂ ಶಿಷ್ಟಾಚಾರ ಉಲ್ಲಂಘನೆ ಆರೋಪ ಮಾಡಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ವಿರುದ್ದ ಜಿಲ್ಲೆಯ ಕಾಂಗ್ರೆಸ್ ಶಾಸಕರು  ವಾಗ್ದಾಳಿ ನಡೆಸಿದರು.

ಮೈಸೂರಿನ ಜಲದರ್ಶಿನಿಯಲ್ಲಿ ಕಾಂಗ್ರೆಸ್ ಶಾಸಕರಾದ ಹೆಚ್.ಪಿ.ಮಂಜುನಾಥ್, ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾಧು ತುರ್ತು ಸುದ್ದಿಗೋಷ್ಠಿ ನಡೆಸಿ ಸರ್ಕಾರ ಹಾಗೂ ಸಚಿವ ಎಸ್.ಟಿ ಸೋಮಶೇಖರ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಹೆಚ್.ಪಿ ಮಂಜುನಾಥ್, ರಾಜ್ಯಮಟ್ಟದ ಕಾರ್ಯಕ್ರಮಗಳಿಗೆ ಪ್ರೋಟೋಕಾಲ್ ಪಾಲಿಸಿಲ್ಲ. ಸರ್ಕಾರದ ಕಾರ್ಯಕ್ರಮವನ್ನ ಕೇವಲ ಬಿಜೆಪಿ ಕಾರ್ಯಕ್ರಮ ಮಾಡ್ತಿದ್ದಾರೆ. ಎಸ್.ಟಿ.ಸೋಮಶೇಖರ್ ಕೇವಲ ಬಾವುಟ ಹಾರಿಸೋಕೆ ಮಾತ್ರ ಜಿಲ್ಲಾಮಂತ್ರಿಯಾಗಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಅವರಿಗೂ ಕಿಂಚಿತ್ತೂ ಕಾಳಜಿ ಇಲ್ಲ.ಕಾಂಗ್ರೆಸ್ ಶಾಸಕರನ್ನ ಕೈಬಿಟ್ಟು ಕಾರ್ಯಕ್ರಮ ಮಾಡ್ತಿದ್ದಾರೆ. ನಿನ್ನೆ ನಡೆದ ಹಲವು ಕಾರ್ಯಕ್ರಮಗಳಿಗೆ ನಮಗೆ ಆಹ್ವಾನ ನೀಡದೆ ಅವಮಾನ ಮಾಡಿದ್ದಾರೆ. ಜಲಭವನ ಉದ್ಘಾಟನೆಗೆ ನಮ್ಮನ್ನು ಆಹ್ವಾನ ಮಾಡಿಲ್ಲ. ಸರ್ಕಾರಿ ಕಾರ್ಯಕ್ರಮವನ್ನ ಅವರ ಮನೆ ಮದುವೆ ಅನ್ಕೊಂಡಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ಸಿದ್ದರಾಮಯ್ಯರವರ ಅವಧಿ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಮಾಡುವುದೇ ಉಸ್ತುವಾರಿ ಸಚಿವರ ಕೆಲಸ ಆಗಿದೆ. ಜಲಭವನದ ಶಂಕುಸ್ಥಾಪನೆ ಕಲ್ಲಿನಲ್ಲಿ ಸಿದ್ದರಾಮಯ್ಯ ಹೆಸರಿಲ್ಲ. ಸಿದ್ದರಾಮಯ್ಯ ಮೈಸೂರು ನಗರಕ್ಕೆ 3 ಸಾವಿರ ಕೋಟಿಗೂ ಹೆಚ್ಚು ಹಣ ಅನುದಾನ ನೀಡಿದ್ದಾರೆ. ಆದರೆ ಸಂಪೂರ್ಣವಾಗಿ ಜಿಲ್ಲಾಡಳಿತ ಶಿಷ್ಟಾಚಾರ ಉಲ್ಲಂಘನೆ ಮಾಡಿದೆ. ಈ ಶಿಷ್ಟಾಚಾರ ಉಲ್ಲಂಘನೆ ಗೆ ಯಾರು ಹೊಣೆ.? ಆ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಆಗಬೇಕು. ಇದನ್ನು ಮುಂದುವರೆದು ಸ್ಪೀಕರ್ ಗೆ ದೂರು ನೀಡುತ್ತೇವೆ. ಮಂಡ್ಯ ಸಂಸದರನ್ನು ಅಹ್ವಾನ ಮಾಡುತ್ತಾರೆ ಅದರೆ ಈ ಜಿಲ್ಲೆಯ ಶಾಸಕರಿಗೆ ಅಹ್ವಾನ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ನಿಮ್ಮ ಅವಧಿಯ ಸಾಧನೆ ಹೇಳಿ ಎಂದು ಉಸ್ತುವಾರಿ ಸಚಿವರಿಗೆ ಸವಾಲ್ ಹಾಕಿದ ಶಾಸಕ ಮಂಜುನಾಥ್, ಜಿಲ್ಲೆಯ ಅಭಿವೃದ್ಧಿಗೆ ನೀವು ತಂದಿರುವ ಅನುದಾನದ ಕುರಿತು ಶ್ವೇತ ಪತ್ರ ಹೊರಡಿಸಿ. ಉಸ್ತುವಾರಿ ಸಚಿವರಿಗೆ ಗ್ರಾಮಾಂತರ ಶಾಸಕರು ಲೆಕ್ಕಕ್ಕೆ ಇಲ್ಲ.! ಈ ಬಗ್ಗೆ ನಂಜನಗೂಡು ಬಿಜೆಪಿ ಶಾಸಕರು ಕೂಡ ಅಸಮಾಧಾನ ತೋಡಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ಶಾಸಕರನ್ನೂ ಕೂಡ ಉತ್ತಮ ರೀತಿಯಲ್ಲಿ ನೆಡೆಸಿಕೊಳ್ಳುತ್ತಿಲ್ಲ‌. ಈ ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ಶೀಘ್ರ ಕ್ರವಹಿಸಬೇಕು. ಇನ್ಮುಂದೆ ನಮ್ಮಿಂದ ಸಹಕಾರ ನಿರೀಕ್ಷೆ  ಮಾಡಬೇಡಿ.ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಶಾಸಕರಿಂದಲೇ ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕುತ್ತೇವೆ. ಮೈಸೂರಿಗೆ ಬಂದಾಗ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಶಾಸಕರನ್ನು ಕಾರ್ಯಕ್ರಮಕ್ಕೆ ಅಹ್ವಾನ ನೀಡದಿರುವುದು ಕ್ಷೇತ್ರದ ಜನತೆ ಗೆ ಮಾಡಿದ ಅವಮಾನ. ಬಿಜೆಪಿ ಸರ್ಕಾರ ಬಂದಾಗಿಂದಲೂ ಉಸ್ತುವಾರಿ ಸಚಿವರಿಗೆ ಸಹಕಾರ ನೀಡಿದ್ದೇವೆ. ನಾವು ರಾಜಕೀಯ ಮಾಡಬಾರದು ಅಂತಾ ಸಹಕಾರ ನೀಡಿದ್ದೇವೆ. ಆದರೆ ಅವಮಾನ ಸಹಿಸಲಾಗಲ್ಲ. ಅನುದಾನದಲ್ಲಿಯೂ ಕೂಡ ತಾರತಮ್ಯ ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆಯಿಂದ 6 ಕೋಟಿ ಹಣವನ್ನು ಪಿರಿಯಾಪಟ್ಟಣಕ್ಕೆ ಮಾತ್ರ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಶಾಸಕರ ಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಎಂದು  ಉಸ್ತುವಾರಿ ಸಚಿವರ ವಿರುದ್ಧ ಶಾಸಕ ಯತೀಂದ್ರ ಸಿದ್ದರಾಮಯ್ಯ ಕಿಡಿ ಕಾರಿದರು.

ಇದೇ ವೇಳೆ ಮಾತನಾಡಿದ ಶಾಸಕ ಅನಿಲ್ ಚಿಕ್ಕಮಾದು,   ಶಾಸಕರನ್ನು ಹೇಗೆ ನೆಡೆಸಿಕೊಳ್ಳಬೇಕು ಅಂತಾ  ಸಚಿವರು ತಿಳಿದುಕೊಳ್ಳಬೇಕು.ನಾವು ಕೂಡ ಜನರಿಂದ ಆಯ್ಕೆಯಾಗಿ ಬಂದಿದ್ದೇವೆ‌. ಸಿದ್ದರಾಮಯ್ಯನವರ ಅನುದಾನದಲ್ಲಿ ಎಷ್ಟು ಅಭಿವೃದ್ಧಿ ಆಗಿದೆ. ಆದರೆ ಬಿಜೆಪಿ ಸರ್ಕಾರದಲ್ಲಿ ಅನುದಾನವೇ ಸಿಕ್ಕಿಲ್ಲ. ಹೆಚ್.ಡಿ.ಕೋಟೆ ಅತೀ ಹಿಂದುಳಿದ ಕ್ಷೇತ್ರ. ಅತ್ಯಂತ ಹಿಂದುಳಿದ ತಾಲೂಕಿನ ಅಭಿವೃದ್ಧಿಗೆ ಅನುದಾನ ಬೇಕು. ಕಾಡಾ ಇಲಾಖೆಯಲ್ಲಿಯೂ ಯಾವುದೇ ಅನುದಾನ ನೀಡಿಲ್ಲ. ಬಿಜೆಪಿ ಸರ್ಕಾರ ಬಹಳಷ್ಟು ತಾರತಮ್ಯ ಮಾಡ್ತಿದೆ. ಹಿಂದೆ ಸರ್ಕಾರದಲ್ಲಿ ಈ ರೀತಿ ನಡೆಯುತ್ತಿರಲಿಲ್ಲ. ಅನುದಾನಕ್ಕಾಗಿ ಎಲ್ಲಾ ಸಚಿವರನ್ನು ಮನವಿ ಮಾಡಿದ್ದೇವೆ ಎಂದರು.

ಹಿಂದಿನ ಲೇಖನಫುಟ್ಬಾಲ್ ಕ್ಷೇತ್ರದ ದಿಗ್ಗಜ ಕ್ರೀಡಾಪಟು ಸುಭಾಷ್ ಭೌಮಿಕ್ ನಿಧನ
ಮುಂದಿನ ಲೇಖನನಯವಾದ ಮಾತಿನಲ್ಲಿ ತಮ್ಮ ಕೆಲಸ ಮಾಡಿಸಿಕೊಳ್ಳುವ ನಿಪುಣರು ಈ 4 ರಾಶಿಯವರು