ಪೊಲೀಸ್ ಇಲಾಖೆಯಲ್ಲೇ ನಡೆದ ಒಂದು ಹೈಡ್ರಾಮಾ ಈಗ ರಾಯಚೂರಿನಲ್ಲಿ ಸಂಚಲನ ಮೂಡಿಸಿದೆ. ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ, ಒಟ್ಟಿಗೆ ಸಂಸಾರ ನಡೆಸಿ ಕೊನೆಗೆ ತನ್ನದೇ ಇಲಾಖೆಯ ಅಧಿಕಾರಿಗೆ ಮಹಿಳಾ ಕಾನ್ಸ್‌ಟೇಬಲ್ ವಂಚಿಸಿರುವ ಗಂಭೀರ ಆರೋಪ ಕೇಳಿಬಂದಿದೆ.
ಪ್ರೀತಿಯಿಂದ ಲಿವಿಂಗ್ ಟುಗೆದರ್‌ವರೆಗೆ, ಯಾದಗಿರಿಯ ಶಹಾಪುರ ಗುಪ್ತಚರ ಇಲಾಖೆಯ ಪಿಎಸ್‌ಐ ವಿರೇಶ್ ಮತ್ತು ಕಾನ್ಸ್‌ಟೇಬಲ್ ವಿಜಯಶ್ರೀ ನಡುವೆ 2017 ರಿಂದಲೇ ಪ್ರೇಮ ಸಂಬಂಧವಿತ್ತು. ಕಳೆದ ನಾಲ್ಕು ವರ್ಷಗಳಿಂದ ಇಬ್ಬರೂ ರಾಯಚೂರಿನಲ್ಲಿ ‘ಲಿವಿಂಗ್ ಟುಗೆದರ್’ ಸಂಬಂಧದಲ್ಲಿದ್ದರು. ಅಷ್ಟೇ ಅಲ್ಲ, ದೇವಸ್ಥಾನವೊಂದರಲ್ಲಿ ಹಾರ ಬದಲಾಯಿಸಿಕೊಂಡು ಮದುವೆಯೂ ಆಗಿದ್ದರು ಎನ್ನಲಾಗಿದೆ.
ಪಿಎಸ್‌ಐ ವಿರೇಶ್ ಮಾಡುತ್ತಿರುವ ಶಾಕಿಂಗ್ ಆರೋಪಗಳು, ತನ್ನ ಪ್ರಿಯತಮೆ ವಿಜಯಶ್ರೀ ವಿರುದ್ಧ ಪಿಎಸ್‌ಐ ವಿರೇಶ್ ಗಂಭೀರ ದೂರನ್ನು ನೀಡಿದ್ದಾರೆ. 35 ಲಕ್ಷ ರೂ. ಹಣ, ವಿಜಯಶ್ರೀ ತನ್ನಿಂದ ಸುಮಾರು 35 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ್ದಾಳೆ. ರಹಸ್ಯ ಗರ್ಭಪಾತ, ಎರಡು ಬಾರಿ ಗರ್ಭಿಣಿಯಾಗಿದ್ದರೂ, ತನಗೆ ತಿಳಿಸದೆ ಗುಟ್ಟಾಗಿ ಅಬಾರ್ಷನ್ ಮಾಡಿಸಿಕೊಂಡಿದ್ದಾಳೆ. ಜಾತಿಯ ನೆಪ, ಅಧಿಕೃತವಾಗಿ ಮದುವೆ ನೋಂದಣಿ ಮಾಡಿಕೊಳ್ಳೋಣ ಎಂದಾಗ ಜಾತಿಯ ಕಾರಣ ನೀಡಿ ಈಗ ದೂರವಾಗುತ್ತಿದ್ದಾಳೆ.
ಬೇರೊಬ್ಬನ ಜೊತೆ ಹಸೆಮಣೆ ಏರಲು ಸಿದ್ಧತೆ, ಇಷ್ಟು ವರ್ಷ ವಿರೇಶ್ ಜೊತೆ ಜೀವನ ನಡೆಸಿದ ವಿಜಯಶ್ರೀ, ಇದೀಗ ಎಲ್ಲವನ್ನೂ ಮರೆತು ಮೇ 7 ರಂದು ಬೇರೊಬ್ಬ ಯುವಕನ ಜೊತೆ ಮದುವೆಯಾಗಲು ಸಜ್ಜಾಗಿದ್ದಾಳೆ. ಈ ವಿಷಯ ತಿಳಿಯುತ್ತಿದ್ದಂತೆಯೇ ವಿರೇಶ್ ಈಗ ನ್ಯಾಯಕ್ಕಾಗಿ ರಾಯಚೂರು ಎಸ್ಪಿಗೆ ದೂರು ನೀಡಿದ್ದಾರೆ. ಇಲಾಖೆಗೆ ಮುಜುಗರ, ರಕ್ಷಣೆ ನೀಡಬೇಕಾದ ಇಲಾಖೆಯ ಸಿಬ್ಬಂದಿಗಳೇ ಈ ರೀತಿ ಹಾದಿಬೀದಿ ರಂಪಾಟಕ್ಕಿಳಿದಿರುವುದು ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ತಂದಿದೆ. “ನನಗೆ ನ್ಯಾಯ ಸಿಗಬೇಕು, ಈ ಮದುವೆ ನಿಲ್ಲಬೇಕು” ಎಂದು ವಿರೇಶ್ ಪಟ್ಟು ಹಿಡಿದಿದ್ದಾರೆ.
















