ಮೈಸೂರು: ನಾನು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಕನ್ನಡ ಪರಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ವಾಟಾಳ್ ನಾಗರಾಜ್, ಇವತ್ತಿನ ಚುನಾವಣಾ ವ್ಯವಸ್ಥೆ ಬಹಳ ಹದಗೆಟ್ಟಿ ಹೋಗಿದೆ. ಹಣವಂತರಿಗೆ ಮಾತ್ರ ಈ ಚುನಾವಣೆ ಬೇರೆಯವರಿಗೆ ಚುನಾವಣೆ ಅನ್ನೋದು ಬರಿ ಕನಸು. ಕರ್ನಾಟಕದಲ್ಲಿ ಎಲ್ಲ ಸೀಟುಗಳನ್ನು ಅವರವರ ಮಕ್ಕಳಿಗೆ, ಸಂಬಂಧಿಕರಿಗೆ ಹಂಚಿಕೊಂಡಿದ್ದಾರೆ. ಅಪ್ಪ ಕಿಂಗ್ ಮೇಕರ್, ಮಗ ಅಧ್ಯಕ್ಷ, ಇನ್ನೊಬ್ಬ ಮಗ ಲೋಕಸಭಾ ಅಭ್ಯರ್ಥಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ವಾಟಾಳ್ ನಾಗರಾಜ್ ಕಿಡಿಕಾರಿದರು.
ಹಾಗೆಯೇ ಮತ್ತೊಮ್ಮ ಅಪ್ಪ ಎಂಎಲ್ ಎ, ಮಗ ಮಂತ್ರಿ, ಸೊಸೆ ಲೋಕಸಭೆಗೆ ಅಭ್ಯರ್ಥಿ ಎಂದು ಪರೋಕ್ಷವಾಗಿ ಶ್ಯಾಮನೂರು ಶಿವಶಂಕರಪ್ಪ ಅವರ ವಿರುದ್ಧವೂ ವಾಟಾಳ್ ನಾಗರಾಜ್ ಹರಿಹಾಯ್ದರು.
ರಾಜ್ಯದಲ್ಲಿ ಹೊಲಸು, ಕೆಟ್ಟ ರಾಜಕಾರಣ ನಡೆಯುತ್ತಿದೆ. ಇದರ ವಿರುದ್ಧ ನಾನು ಪ್ರಾಮಾಣಿಕವಾಗಿ ಚುನಾವಣೆ ಎದುರಿಸಲು ನಿಂತಿದ್ದೇನೆ. ಯಾವುದೇ ಹಣ, ಜಾತಿ ಬೆಂಬಲ ಇಲ್ಲದೆ, ದಬ್ಬಾಳಿಕೆ ಇಲ್ಲದೆ, ಗೂಂಡಾಗಿರಿ ಮಾಡದೆ ಮತ ಕೇಳಲು ಸ್ಪರ್ಧೆ ಮಾಡಿದ್ದೇನೆ. ಪ್ರಾಮಾಣಿಕರು ನನಗೆ ಮತ ಮಾಡುವ ವಿಶ್ವಾಸ ಇದೆ. ನಾನು ಚುನಾವಣೆಗೆ ಸ್ಪರ್ಧೆ ಮಾಡಿರುವುದು ಕನ್ನಡಕ್ಕಾಗಿ, ಕನ್ನಡದ ಉಳಿವಿಗಾಗಿ ಇವತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಕಡಿಮೆಯಾಗುತ್ತಿದೆ ಎಂದು ವಾಟಾಳ್ ನಾಗರಾಜು ತಿಳಿಸಿದರು.